ಪತ್ರಕರ್ತ, ಕವಿ, ಸಾಹಿತಿ, ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ, ಸಿನಿಮಾ ನಿರ್ದೇಶಕ ಮತ್ತು ಈಗ ಖಳನಟ, ಹೀರೋ ಎಲ್ಲವೂ ಆಗಿರುವ ಏಕೈಕ ವ್ಯಕ್ತಿ ಚಕ್ರವರ್ತಿ ಚಂದ್ರಚೂಡ್. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗಿಬಂದಮೇಲೆ ಚಂದ್ರಚೂಡ್ ಹೆಚ್ಚು ಪ್ರಚಾರದಲ್ಲಿದ್ದಾರೆ. ವರ್ಣಮಯ ವ್ಯಕ್ತಿತ್ವದ, ಎಲ್ಲ ಕಡೆಯೂ ಸಲ್ಲುವ ಗುಣ ಹೊಂದಿರುವ ಚಂದ್ರಚೂಡ್ ಬದುಕಿನಲ್ಲೂ ಸಾಕಷ್ಟು ಏರಿಳಿತಗಳಾಗಿವೆ. ಆರಂಭದಲ್ಲಿ ಲಂಕೇಶ್ ಪತ್ರಿಕೆಯ ಜಿಲ್ಲಾ ವರದಿಗಾರನಾಗಿದ್ದು, ನಂತರ ಬೆಂಗಳೂರಿಗೆ ಬಂದು ಸಿನಿಮಾ, ರಾಜಕೀಯ, ಕ್ರೈಮುಗಳ ಬಗ್ಗೆಯೆಲ್ಲಾ ಬರೆದು ಪತ್ರಿಕೋದ್ಯಮದಲ್ಲಿ ಗುರುತಿಸಿಕೊಂಡಿದ್ದವರು. ಇಂಥ ಚಂದ್ರಚೂಡ್ ವಿಶ್ವವಿಖ್ಯಾತಿ ಪಡೆದದ್ದು ನಟಿ ಶೃತಿಯನ್ನು ಮದುವೆಯಾಗುವ ಮೂಲಕ.
ಅದಾಗಲೇ ಮದುವೆಯಾಗಿ ಸಂಸಾರಸ್ಥರಾಗಿದ್ದ ಶೃತಿ ಮತ್ತು ಚಂದ್ರಚೂಡ್ ಇಬ್ಬರೂ ತಮ್ಮ ಸಂಬಂಧಗಳಿಂದ ಹೊರಬಂದಿದ್ದರು. ನಿರ್ದೇಶಕ ಮಹೇಂದರ್ ಅವರಿಗೆ ಶ್ರುತಿ ಟಾಟಾ ಮಾಡಿ ಬಂದರೆ ಚಂದ್ರಚೂಡ್ ಕೂಡಾ ಪತ್ನಿಯಿಂದ ಬೇರ್ಪಟ್ಟಿದ್ದರು. ಒಂದೇ ಜಾತಿ, ಹಳೇ ಪರಿಚಯಗಳ ಜೊತೆಗೆ ಹೊಸದಾಗಿ ಪ್ರೇಮಾಂಕುರವೂ ಆಗಿ ಮದುವೆಯಾಗುವ ತೀರ್ಮಾನಕ್ಕೆ ಬಂದಿದ್ದರು. ಒಂದಲ್ಲಾ, ಎರಡಲ್ಲೂ ಮೂರ್ಮೂರು ಸಾರಿ ಚಂದ್ರಚೂಡ್ ಶೃತಿ ಕುತ್ತಿಗೆಗೆ ತಾಳಿ ಕಟ್ಟಿದ್ದೂ ಆಯ್ತು. ಇವರಿಬ್ಬರ ಮದುವೆ ಪ್ರಕರಣ ದೊಡ್ಡ ವಿವಾದವನ್ನೂ ಸೃಷ್ಟಿಸಿತ್ತು. ಇಷ್ಟೆಲ್ಲಾ ಆದಮೇಲೆ ಇವರಿಬ್ಬರ ಮದುವೆಯನ್ನು ನ್ಯಾಯಾಲಯ ಅನೂರ್ಜಿತಗೊಳಿಸಿತು. ಕಡೆಗೆ ಶೃತಿ ಮತ್ತು ಚಂದ್ರಚೂಡ್ ಸ್ನೇಹ, ಸಂಬಂಧ ಕೂಡಾ ಮುರಿದುಬಿತ್ತು.
ಹಾಗೆ ನೋಡಿದರೆ ಚಂದ್ರಚೂಡ್ ಹಳೇದನ್ನೆಲ್ಲಾ ನೆನಪಲ್ಲಿಟ್ಟುಕೊಂಡು, ಮನಸ್ಸನ್ನು ಕೆಸರು ಮಾಡಿಕೊಳ್ಳುವ ಜಾಯಮಾನದವರಲ್ಲ. ಬದುಕನ್ನು ಬಂದಹಾಗೆ ಸ್ವೀಕರಿಸುತ್ತಾ ಮುನ್ನಡೆಯುತ್ತಾರೆ. ಇಂಥ ಚಕ್ರವರ್ತಿಗಳೀಗ ಏಕಾಏಕಿ ವ್ಯಘ್ರಗೊಂಡಿದ್ದಾರೆ. ನಟಿಯೊಬ್ಬಳ ಮೇಲೆ ಕೆಂಡಾಮಂಡಲರಾಗಿದ್ದಾರೆ. ಮತ್ತೆ ಶ್ರುತಿ ಮೇಲೇನಾದರೂ ಮುನಿಸಿಕೊಂಡರಾ ಅಂದುಕೊಂಡರೆ, ಊಹೆ ತಪ್ಪು.
ಚಂದ್ರಚೂಡ್ ಈಗೆ ಬೇಸರಗೊಂಡಿರೋದು ನಟಿ ಅನುಪ್ರಭಾಕರ್ ಮೇಲೆ.
ಜಯಂತಿಯವರ ಮಾಜಿ ಸೊಸೆ ಮತ್ತು ಹಾಲಿ ರಘು ಮುಖರ್ಜಿಯ ಪತ್ನಿಯಾಗಿರುವ ಅನು ಪ್ರಭಾಕರ್ ಯಾಕೆ ಯಾಗೆ ಮಾತಾಡಿದರೋ ಗೊತ್ತಿಲ್ಲ. ಇತ್ತೀಚೆಗೆ ಶೃತಿ, ಅನು ಪ್ರಭಾಕರ್ ಮುಂತಾದವರು ಕ್ರೇಜ಼ಿಸ್ಟಾರ್ ರವಿಚಂದ್ರನ ಮನೆಯಲ್ಲಿ ಸೇರಿದ್ದರು. ಅಲ್ಲಿ ಚಂದ್ರಚೂಡ್ ವಿಚಾರ ಯಾಕೆ ಬಂತೋ? ಅಥವಾ ಎದುರಿಗಿದ್ದ ಶೃತಿಯನ್ನು ಮೆಚ್ಚಿಸೋದು ಅನು ಪ್ರಭಾಕರ್ ಉದ್ದೇಶವಾಗಿತ್ತೋ ಏನೋ? ಗೊತ್ತಿಲ್ಲ. ಆದರೆ, ಏಕಾಏಕಿ ʻಚಂದ್ರಚೂಡು ಸರಿಯಿಲ್ಲ.. ಆತ ಹಾಗೆ…. ಹೀಗೆ…ʼ ಅಂತೆಲ್ಲಾ ಬಯ್ಯಲು ಶುರುವಿಟ್ಟುಕೊಂಡಿದ್ದಳಂತೆ.
ಅನು ಪ್ರಭಾಕರ್ ಹೀಗೆ ಕಾರಣವೇ ಇಲ್ಲದೆ ಚಕ್ರವರ್ತಿಯನ್ನು ಚುಚ್ಚಿದ ವಿಚಾರ ಅದು ಹೇಗೋ ಈಗ ಚಂದ್ರಚೂಡ್ ಕಿವಿ ತಲುಪಿಬಿಟ್ಟಿದೆ. ಯಾರೇ ಕಾಲೆಳೆದರೂ, ತಲೆಕೆಡಿಸಿಕೊಳ್ಳದ ಚಂದ್ರಚೂಡ್ ಈ ಸಲ ತಮ್ಮ ಬೇಜಾರನ್ನು ಹೊರಹಾಕಿದ್ದಾರೆ. ʻʻಅನು ಪ್ರಭಾಕರ್ ಎನ್ನುವ ಹೆಂಗಸು ನನಗೆ ಪರಿಚಯವೇ ಇಲ್ಲ. ಒಂದು ವೇಳೆ ಆಕೆ ನನ್ನ ಸ್ನೇಹಿತೆಯಾಗಿದ್ದಿದ್ದರೆ, ಆಕೆಯೊಂದಿಗೆ ನಾನು ಸಂಪರ್ಕದಲ್ಲಿದ್ದಿದ್ದರೆ, ಅಟ್ ಲೀಸ್ಟ್ ಜೊತೆಯಾಗಿ ಕಾಲ ಕಳೆದಿದ್ದರೆ ನನಗೆ ಬೇಸರವಾಗುತ್ತಿರಲಿಲ್ಲ. ಈ ವರೆಗೂ ನಾನು ಆಕೆಯನ್ನು ಭೇಟಿಯಾಗೇ ಇಲ್ಲ. ಮಾತಾಡಿಸಿಯೂ ಇಲ್ಲ. ಏನೇನೂ ಇಲ್ಲದೆ ಈಯಮ್ಮ ನನ್ನ ಬಗ್ಗೆ, ಅದೂ ರವಿಚಂದ್ರನ್ ಅವರ ಮುಂದೆ ಹೋಗಿ ಕೆಟ್ಟದಾಗಿ ಕಮೆಂಟು ಮಾಡಿಬಿಟ್ಟಿದ್ದಾಳಲ್ಲಾ? ಇರಲಿ ಬಿಡಿ… ನನ್ನ ಬಗ್ಗೆ ಮಾತಾಡಿ, ಅದರಿಂದ ಆಕೆಗೆ ಖುಷಿ, ಸಮಾಧಾನ ಸಿಗೋದಾದರೆ ಮಾತಾಡಿಕೊಳ್ಳಲಿʼ ಅಂತಾ ಹೇಳಿಕೊಂಡಿದ್ದಾರೆ.
ನಿಜಕ್ಕೂ ಅನು ಪ್ರಭಾಕರ್ ಯಾಕೆ ಚಂದ್ರಚೂಡ್ ಬಗ್ಗೆ ಮಾತಾಡಿದಳೋ ಗೊತ್ತಿಲ್ಲ. ಆಕೆಯ ಮನಸ್ಸಿನಲ್ಲೇನಿತ್ತು ಅಂತಾ ತಿಳಿದಿಕೊಳ್ಳಲು ಪ್ರಯತ್ನಿಸಿದರೆ, ಅನು ಸದ್ಯ ನಾಟ್ ರೀಚಬಲ್!
Comments