ಇವತ್ತಿಗೆ ಕನ್ನಡ ಚಿತ್ರರಂಗದಲ್ಲಿ ಕ್ರಿಯಾಶೀಲ ಸಂಗೀತ ನಿರ್ದೇಶಕನಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಪ್ರತಿಭೆ ಚಂದ್ರು ಓಬಯ್ಯ. ಸದ್ಯ ಸಂಗೀತ ನಿರ್ದೇಶನದ ಜೊತೆ ನಟನೆಗೂ ಇಳಿಯುತ್ತಿರುವ ಚಂದ್ರು ‘ಯೂ ಟರ್ನ್ ೨’ ಎನ್ನುವ ಸಿನಿಮಾವನ್ನು ಆರಂಭಿಸುವ ಸನ್ನಾಹದಲ್ಲಿದ್ದಾರೆ. ವಿಶೇಷವೆಂದರೆ ಇಂದು ಚಂದ್ರು ಓಬಯ್ಯ ಹುಟ್ಟಿದ ದಿನ!


ತುಮಕೂರಿನ ಪಾವಗಡದ ಕೆಂಚಮ್ಮನ ಹಳ್ಳಿಯ ಕಡೆಯಿಂದ ಒಂದು ಸಾಧಾರಣ ಬಡಕುಟುಂಬದಿಂದ ಬಂದವರು ಚಂದ್ರು ಓಬಯ್ಯ. ಇವರ ತಂದೆ ಡ್ರಾಮ ಮೇಷ್ಟ್ರಾಗಿದ್ದವರು. ತಂದೆಯಿಂದಲೇ ಕಲೆಯ ಮೇಲೆ ಒಲವನ್ನು ಹೆಚ್ಚಿಸಿಕೊಂಡ ಚಂದ್ರು ಓಬಯ್ಯನವರ ಪಿಯುಸಿವರೆಗಿನ ಶಿಕ್ಷಣವೆಲ್ಲಾ ಕೆಂಚಮ್ಮನ ಹಳ್ಳಿಯಲ್ಲಿಯೇ ಆದದ್ದು. ಎಸ್.ಎಸ್.ಎಲ್.ಸಿ ಓದುವಾಗಲೇ ಮನೆಯ ಪರಿಸ್ಥಿತಿಗೆ ಕಟ್ಟುಬಿದ್ದು, ಮೂರ್ನಾಲ್ಕು ವರ್ಷ ಮೇಕೆ ಕಾಯುವುದಕ್ಕೆ ಹೋಗುವಂತಾಗಿತ್ತು. ಆ ಹೊತ್ತಿಗೇ ಚಂದ್ರು ಅವರ ತಂದೆ ಓಬಯ್ಯನವರು ಇಲ್ಲವಾದರು. ತಮ್ಮ ತಂದೆಯ ಕನಸಿನಂತೆ ಎಸ್.ಎಸ್.ಎಲ್.ಸಿಯನ್ನು ಕಟ್ಟಿ ಪಾಸು ಮಾಡಿ ಪಿಯುಸಿಯನ್ನು ಮುಗಿಸಿದರು. ನಂತರ ಇವರ ಅಣ್ಣ ಬೆಂಗಳೂರಿಗೆ ಬಂದರು. ಅವರ ಜತೆಗೆ ಬಂದ ಚಂದ್ರು ಓಬಯ್ಯ ಬೆಂಗಳೂರಿನಲ್ಲಿ ಟೀಚರ್ ಟ್ರೇನಿಂಗನ್ನು ಮಾಡಿಕೊಂಡರು. ಮೊದಲೇ ತಿಳಿಸಿದ ಹಾಗೆ ಇವರ ತಂದೆಯ ಪ್ರಭಾವದಿಂದ ಕಲೆ, ಸಂಗೀತದಲ್ಲಿ ಆಸಕ್ತಿಯನ್ನು ಹೊಂದಿದ್ದ ಇವರು ಕರ್ನಾಟಕ ಸಂಗೀತವನ್ನು ಕರಗತ ಮಾಡಿಕೊಂಡರು.


ಅಷ್ಟರಲ್ಲಾಗಲೇ ಇವರನ್ನು ಬಣ್ಣದ ಲೋಕ ಕೈ ಬೀಸಿ ಕರೆಯಲು ಪ್ರಾರಂಭಿಸಿತ್ತು. ಅದರಂತೆ ಟ್ರಿಗರ್ ಎನ್ನುವ ಸಿನಿಮಾದಿಂದಲೂ ಆಫರ್ ಬಂದಿತ್ತು. ಚೊಚ್ಚಲ ಬಾರಿಗೆ ಟ್ರಿಗರ್ ಸಿನಿಮಾಕ್ಕೆ ಸಂಗೀತ ಸಂಯೋಜನೆಯನ್ನು ಮಾಡಿದರು. ಆ ಚಿತ್ರದಲ್ಲಿ ರಘು ದೀಕ್ಷಿತ್ ಹಾಡಿದ ಹಾಡೊಂದು ಸೂಪರ್ ಹಿಟ್ ಕೂಡ ಆಯಿತು. ವಿಜಯ್ ಪ್ರಕಾಶ್ ಅವರು ಹಾಡಿದ ಹಾಡು ಸಹ ಕೇಳುಗರನ್ನು ರೀಚ್ ಆಗಿತ್ತು. ಟ್ರಿಗರ್ ಚಿತ್ರದ ಬಳಿಕ ಮನೋರಥ ಎನ್ನುವ ಸಿನಿಮಾಕ್ಕೂ ಸಂಗೀತ ಸಂಯೋಜನೆ ಮಾಡಿದ್ದಾರೆ.

ರಾಜ್ಯಪಥ ಎನ್ನುವ ಸಿನಿಮಾಕ್ಕೂ ಮ್ಯೂಸಿಕ್ ಕಂಪೋಸ್ ಮಾಡಿರುವ ಚಂದ್ರು ಓಬಯ್ಯ ಸದ್ಯ ತಮಿಳು ಸಿನಿಮಾ ಒಂದರಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಟ್ರಿಗರ್ ಸಿನಿಮಾದ ನಿರ್ದೇಶಕರೇ ಮತ್ತೊಂದು ಸಿನಿಮಾವನ್ನು ಆರಂಭಿಸಿದ್ದು, ಇತ್ತೀಚಿಗಷ್ಟೇ ಚಿತ್ರದ ಮುಹೂರ್ತ ಸಮಾರಂಭವೂ ಮುಗಿಸಿಕೊಂಡಿದೆ.


“ನಾನೇನು ಸಂಗೀತಕ್ಕೆ ಬಯಸಿ ಬಂದವನಲ್ಲ. ತಂದೆಯಿಂದ ಕೊಂಚ ಮಟ್ಟಿಗೆ ಟ್ರೇನಿಂಗ್ ಪಡೆದಿದ್ದ ನಾನು ಸಾರ್ವಜನಿಕ ಕಾರ್ಯಕ್ರಮಗಳಿಗೆ ಹಾಡುವುದಕ್ಕೆ ಹೋಗುತ್ತಿದ್ದೆ. ಅಲ್ಲದೇ ಓಕಲ್ ಕರ್ನಾಟಕ ಸಂಗೀತದಲ್ಲಿ ಆಸಕ್ತಿಯಿದ್ದ ನನಗೆ ಹಾಡುವ ಜತೆಗೆ ಬಹಳಷ್ಟು ಹಾಡಿಗೆ ಕಂಪೋಸಿಂಗ್ ಮಾಡಲು ಪ್ರಾರಂಭಿಸಿದ್ದೆ. ಯಾವಾಗ ಸಂಗೀತ ಸಂಯೋಜನೆ ಮಾಡಬಹುದು ಎಂಬ ಕಾನ್ಫಿಡೆಂಟ್ ಬರಲು ಪ್ರಾರಂಭವಾಯಿತೋ ಆಗಷ್ಟೇ ಟ್ರಿಗರ್ ಸಿನಿಮಾವನ್ನು ಒಪ್ಪಿಕೊಂಡೆ” ಎನ್ನುತ್ತಾರೆ ಚಂದ್ರು ಓಬಯ್ಯ.


ಟ್ರಿಗರ್ ಸಿನಿಮಾ ತಂಡದಿಂದ ಯಶಸ್ವಿ ಸಂಗೀತ ಸಂಯೋಜನೆಯಿಂದಾಗಿ ಗೋಲ್ಡನ್ ಕಂಪೋಸರ್ ಎಂದು ಹೆಸರು ಪಡೆದಿರುವ ಚಂದ್ರು ಓಬಯ್ಯ ಸದ್ಯ ಬೆಂಗಳೂರಿನಲ್ಲಿ ಸೆಟಲ್ ಆಗಿದ್ದಾರೆ. ಅಲ್ಲದೇ ಪೂರ್ಣ ಪ್ರಮಾಣದಲ್ಲಿ ಸಂಗೀತ ಸಂಯೋಜನೆಯನ್ನೇ ಬದುಕಾಗಿಸಿಕೊಂಡಿರುವ ಅವರು ಸದ್ಯ ನಾಲ್ಕೈದು ಪ್ರಾಜೆಕ್ಟ್’ಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರೊಟ್ಟಿಗೆ ನಟನೆಯನ್ನೂ ಆರಂಭಿಸುತ್ತಿರುವ ಚಂದ್ರು ಅವರಿಗೆ ಎಲ್ಲವೂ ಒಳಿತಾಗಲಿ..

CG ARUN

ಕಿರುತೆರೆ ನಟಿ ಶೋಭಾ ದುರ್ಮರಣ!

Previous article

ಇನ್ ಸ್ಟಾಗ್ರಾಮ್ ಗೂ ಎಂಟ್ರಿ ಕೊಟ್ಟ ಹ್ಯಾಟ್ರಿಕ್ ಹೀರೋ!

Next article

You may also like

Comments

Leave a reply

Your email address will not be published. Required fields are marked *