ಉತ್ತರಕರ್ನಾಟಕ ಶೈಲಿಯ ಜಬರ್ದಸ್ತ್ ಚಿತ್ರ ಚರಂತಿ ಎಲ್ಲೆಡೆ ಸದ್ದು ಮಾಡುತ್ತಿದೆ. ಹಾಡುಗಳು ಮತ್ತು ಟ್ರೈಲರ್ ಮೂಲಕವೇ ಪ್ರೇಕ್ಷಕರನ್ನು ಆಕರ್ಷಿಸಿರೋ ಈ ಚಿತ್ರವನ್ನು ಮಹೇಶ್ ರಾವಲ್ ನಿರ್ದೇಶನ ಮಾಡಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಹೆಜ್ಜೆ ಹೆಜ್ಜೆಗೂ ಎದುರಾದ ಅಡೆತಡೆ, ಒಂದಷ್ಟು ನಿರಾಸೆಗಳನ್ನೆಲ್ಲ ಜಯಿಸಿಕೊಂಡು ಈ ಚಿತ್ರವನ್ನು ನಿರ್ಮಾಣ ಮಾಡಿರುವವರು ಡಾ. ಪರಶುರಾಮ ರಾವಲ್.
ಪರಶುರಾಮ ರಾವಲ್ ನಟ, ನಿರ್ದೇಶಕ ಮಹೇಶ್ ರಾವಲ್ ಅವರ ಖಾಸಾ ಸಹೋದರ. ಬನಹಟ್ಟಿಯ ಜನರ ಪಾಲಿಗೆ ಅವರು ಚಿರಪರಿಚಿತರು. ಆತ್ಮೀಯರು. ವೃತ್ತಿಯಲ್ಲಿ ವೈದ್ಯರಾಗಿರೋ ಅವರು ಖ್ಯಾತ ಸ್ತ್ರೀರೋಗ ತಜ್ಞ. ತಮ್ಮ ವೃತ್ತಿಯನ್ನೇ ಶ್ರದ್ಧೆಯಿಂದ ನಿರ್ವಹಿಸಿಕೊಂಡು ಮುಂದುವರೆಯುತ್ತಿದ್ದ ಪರಶುರಾಮ್ ಅವರಿಗೆ ಸಿನಿಮಾ ನೋಡೋ ಕ್ರೇಜ್ ಇತ್ತೇ ಹೊರತು ಒಂದು ಚಿತ್ರವನ್ನು ನಿರ್ಮಾಣ ಮಾಡಬೇಕೆಂಬ ಯಾವ ಇರಾದೆಯೂ ಇರಲಿಲ್ಲ. ಆದರೆ ಅವರು ತಮ್ಮ ವೃತ್ತಿಯ ಒತ್ತಡಗಳ ನಡುವೆಯೂ ಚರಂತಿ ಚಿತ್ರವನ್ನು ನಿರ್ಮಾಣ ಮಾಡಲು ಮುಂದಾಗಲು ಕಾರಣ ಸಹೋದರನ ಕನಸಿಗೆ ಒತ್ತಾಸೆಯಾಗಬೇಕೆಂಬ ಆಸೆಯಷ್ಟೇ!ತಾವಾಯಿತು, ತಮ್ಮ ಕೆಲಸವಾಯಿತು ಅಂತಿದ್ದ ಪರಶುರಾಮ ರಾವಲ್ ಆರಂಭದಿಂದಲೂ ತನ್ನ ಸಹೋದರ ಮಹೇಶ್ ರಾವಲ್ ಅವರ ಸಿನಿಮಾಸಕ್ತಿಯನ್ನು ಗಮನಿಸಿಕೊಂಡೇ ಬಂದಿದ್ದರು. ವರ್ಷಾಂತರಗಳ ಹಹಿಂದೆ ಒಂದು ಕಥೆಯನ್ನು ರೆಡಿ ಮಾಡಿಕೊಂಡಿದ್ದ ಮಹೇಶ್ ನಿರ್ಮಾಪಕರನ್ನು ಹುಡುಕಲು ಹರಸಾಹಸ ಪಡುತ್ತಿದ್ದರು. ಆದರೆ ಅವರ ಆಸೆ ಕೈಗೂಡಿರಲೇ ಇಲ್ಲ. ಈ ನಡುವೆ ಮಹೇಶ್ ಆಗಾಗ ಈ ಚಿತ್ರವನ್ನು ನಿರ್ಮಾಣ ಮಾಡುವಂತೆಯೂ ಕೇಳಿಕೊಂಡಿದ್ದರಂತೆ. ಆದರೆ ಸಹೋದರತ ಇನ್ನೂ ಪಳಗಿಕೊಳ್ಳಲಿ ಎಂಬ ಕಾರಣದಿಂದ ಪರಶುರಾಮ್ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಕಡೆಗೂ ವರ್ಷಾಂತರಗಳ ಕಾಲ ಅಡ್ಡಾಡಿ ನಿರ್ಮಾಪಕರುಇ ಸಿಗದೆ ಕಂಗಾಲಾದ ಮಹೇಶ್ ತಾವು ಬರೆದ ಕಥೆ ಓದುವಂತೆ ದುಂಬಾಲು ಬಿದ್ದಾಗ ಬಿಡುವು ಮಾಡಿಕೊಂಡು ಅದನ್ನೋದಿದ ಪರಶುರಾಮ್ ನಿರ್ಮಾಣ ಮಾಡಲು ಒಪ್ಪಿಗೆ ಸೂಚಿಸಿದ್ದರಂತೆ!
ಅದಾದ ನಂತರ ಅವರೆದುರು ಬ್ರಹ್ಮಾಂಡವೇ ತೆರೆದುಕೊಂಡಿತ್ತು. ಬನಹಟ್ಟಿಯಲ್ಲಿಯೇ ಹೆಚ್ಚಿನ ಭಾಗದ ಚಿತ್ರೀಕರಣ ನಡೆದದ್ದರಿಂದ ಇಡೀ ತಂಡ ಅಲ್ಲಿಯೇ ಬೀಡು ಬಿಡಬೇಕಾಗಿತ್ತು. ತಾವು ವೃತ್ತಿಯಲ್ಲಿ ಬ್ಯುಸಿ ಇಕದ್ದುದರಿಂದ ಪ್ರೊಡಕ್ಷನ್ ಮ್ಯಾನೇಜರ್ ಒಬ್ಬನನ್ನು ನೇಮಕ ಮಾಡಿಕೊಂಡಿದ್ದರು. ಆದರಾತ ತೀರಾ ತೆಂಗಿನಕಾಯಿ, ಊದುಗಡ್ಡಿ, ಕರ್ಪೂರಗಳಲ್ಲಿಯೂ ಕಳ್ಳ ಲೆಕ್ಕ ಬರೆದು ಕಾಸು ಕೀಳಲಾರಂಭಿಸಿದ್ದ. ಇಂಥಾದ್ದೇ ನಷ್ಟ ನಾನಾ ದಿಕ್ಕುಗಳಿಂದಲೂ ಸಂಭವಿಸಿದಾಗ ಖುದ್ದು ತಾವೇ ಎಲ್ಲವನ್ನೂ ನಿರ್ವಹಿಸಲಾರಂಭಿಸಿದ್ದರು. ಆರಂಭದಲ್ಲಿ ಒಮದು ತಂಡವೇ ಹೊರ ನಡೆದಿತ್ತು. ನಾಯಕಿಯೊಬ್ಬಳು ಮುನಿಸಿಕೊಂಡಿದ್ದಳು. ಅದೆಲ್ಲವನ್ನೂ ಸದಂಭಾಳಿಸಿ ಚಿತ್ರೀಕರಣ ನಿಲ್ಲಿಸದೇ ಮುಂದುವರೆದ ಪರಶುರಾಮ್ ಆರಂಭದಲ್ಲಿ ಅಂದುಕೊಂಡಿದ್ದ ಮೂವತ್ತೈದು ಲಕ್ಷ ಖರ್ಚು. ಆದರೆ ಈವರೆಗೆ ವ್ಯಯವಾಗಿದ್ದ ಒಂದೂವರೆ ಕೋಟಿಗೂ ಹೆಚ್ಚು!
ಆದರೂ ಕೂಡಾ ಇಂಥಾ ಕಷ್ಟದ, ಸವಾಲಿನ ಹಾದಿಯಲ್ಲಿ ನಡೆದು ಬಂದರೂ ಒಂದೊಳ್ಳೆ ಚಿತ್ರವನ್ನು ನಿರ್ಮಾಣ ಮಾಡಿದ ಖುಷಿ ಪರಶುರಾಮ್ ಅವರಿಗಿದೆ. ಈ ಚಿತ್ರ ಉತ್ತರ ಕರ್ನಾಟಕದ ಸೊಗಡಿನೊಂದಿಗೆ ಸೂಪರ್ ಹಿಟ್ಟಾಗುತ್ತದೆ ಎಂಬ ಭರವಸೆಯೂ ಅವರಲ್ಲಿದೆ.
#
No Comment! Be the first one.