‘ಎನ್ನು ನಿಂಟೆ ಮೊಯಿದಿನ್’ ಚಿತ್ರದ ‘ಮುಕ್ಕತ್ತಿಪೆನ್ನೆ’ ಸಾಲಿನ ಹೃದಯ ಸ್ಪರ್ಶಿ ಹಾಡಿಗೆ, ಆ ಕಂಠ ಸಿರಿಗೆ ತಲೆದೂಗದಿರಲು ಯಾವುದೇ ಸಂಗೀತಪ್ರಿಯರಿಗೆ ಸಾಧ್ಯವಿಲ್ಲ. ಕೇವಲ ಈ ಒಂದು ಹಾಡು ಲೈವ್ ಷೋನಲ್ಲಿ ಹಾಡಲೆಂದೇ ಸರಿಸುಮಾರು 70 ದೇಶಗಳನ್ನು ಸುತ್ತಿರುವುದೇ ಅದರ ಗಾಯಕ ಪಡೆದಿರುವ ಜನಪ್ರಿಯತೆಗೆ ಸಾಕ್ಷಿ.
ಇದೀಗ ಆ ಜನಪ್ರಿಯ ಹಾಡಿನ ಹಿಂದಿರುವ ಧನಿ ಕನ್ನಡ ಸಂಗೀತ ಪ್ರಿಯರಿಗೆ ಹತ್ತಿರವಾಗಲಿದೆ.
ಹೌದು!
ಮಾಲಿವುಡ್ ನ ಮಖ್ಬೂಲ್ ಮನ್ಸೂರ್ ಮೊಹಮದ್ ಚೇಸ್ ಚಿತ್ರದ ‘ರೆಹನುಮ ಹಾಡಿನ ಮೂಲಕ ಸ್ಯಾಂಡಲ್ ವುಡ್ ನಲ್ಲಿ ತಮ್ಮ ಮೋಡಿ ಮಾಡಲಿದ್ದಾರೆ. ಸಿಂಪ್ಲಿಫನ್ ನೆಟ್ವರ್ಕ್ ಪ್ರೈ ಲಿಮಿಟೆಡ್ ಬ್ಯಾನರ್ನಲ್ಲಿ ನಿರ್ಮಾಣವಾಗಿ ವಿಲೋಕ್ ಶೆಟ್ಟಿ ನಿರ್ದೇಶಿಸಿರುವ ಈ ಚಿತ್ರಕ್ಕೆ ಕಾರ್ತಿಕ್ ಆಚಾರ್ಯ ಸಂಗೀತ ನೀಡಿದ್ದು ಡಾ.ಉಮೇಶ್ ಪಿಲಿಕುಡೇಲು ಸಾಹಿತ್ಯ ಬರೆದಿರುವ ಚೇಸ್ ಚಿತ್ರದ ಹಾಡೊಂದರಲ್ಲಿ ಬರುವ ಸೂಫಿ ಸಾಲುಗಳನ್ನ ಹಾಡುವ ಮೂಲಕ ಮಖ್ಬೂಲ್ ಮನ್ಸೂರ್ ಮೊಹಮದ್ ಕನ್ನಡ ಸಿನಿರಸಿಕರಿಗೆ ಇನ್ನಷ್ಟು ಹತ್ತಿರವಾಗಲಿದ್ದಾರೆ.ಕೇರಳದ ಸಂಗೀತ ನಿರ್ದೇಶಕ ಗೋಪಿ ಸುಂದರ್ ಗರಡಿಯಲ್ಲಿ ಪಳಗಿದ ಇವರು ಮಲಯಾಳದ ಅನೇಕ ಸೂಪರ್ ಹಿಟ್ ಚಿತ್ರಗಳಿಗೆ ಹಾಡಿದ್ದಾರೆ. ತಮ್ಮ ಮನಸ್ಸಿಗೆ ಒಪ್ಪಿಗೆಯಾದ, ಉತ್ತಮ ಹಾಡುಗಳನ್ನು ಮಾತ್ರ ಆಯ್ಕೆ ಮಾಡಿ ಹಾಡುವ ಮನ್ಸೂರ್ ಚೇಸ್ ಚಿತ್ರದ ಹಾಡಿಗಾಗಿ ಸಂಪರ್ಕಿಸಿದಾಗ ಹೇಳಿದ್ದು ಕೂಡ ಇದೇ. ಹಾಡು ಇಷ್ಟವಾದರೆ ಮಾತ್ರ ಹಾಡುತ್ತೇನೆ ಎಂದು. ಹಾಡು ಕೇಳಿದ ಕೂಡಲೇ ಇಷ್ಟ ಪಟ್ಟು ಒಪ್ಪಿ ಕೊಂಡರು. “ನಾನು ರಾಹತ್ ಫತೇಹ್ ಆಲಿ ಖಾನ್ ಕಂಠ ಸಿರಿಗೆ ಮ್ಯಾಚ್ ಆಗುವಂತಹ ದನಿಗಾಗಿ ಹುಡುಕಾಟದಲ್ಲಿದ್ದೆ. ಈ ಹಿಂದೆ ರಾಹತ್ ಅವರನ್ನ ಸಂಪರ್ಕಿಸಿದರೂ ಪಾಕಸ್ತಾನೀ ಗಾಯಕರಿಂದ ಹಾಡಿಸಿದರೆ ಅಷ್ಟೊಂದು ಸರಿಯಾಗಲಾರದೇನೋ ಎನ್ನುವ ಭಾವನೆಯಲ್ಲಿದ್ದಾಗ ಹೊಳೆದಿದ್ದು ಮನ್ಸೂರ್ ಅವರ ಹೆಸರು. ‘ಚೇಸ್ ಸಸ್ಪೆನ್ಸ್ ಚಿತ್ರವಾಗಿದ್ದರೂ ಚಿತ್ರದಲ್ಲಿ ಬರುವ ಹಾಡುಗಳಿಗೆ ಅಷ್ಟೇ ಪ್ರಾಮುಖ್ಯತೆಯಿದೆ. ಟೀಸರ್ ಮೂಲಕ ಜನರಲ್ಲಿ ಈಗಾಗಲೇ ಕುತೂಹಲ ಮೂಡಿಸಿರುವ ಚೇಸ್ ಹಾಡುಗಳ ಮೂಲಕ ಇನ್ನಷ್ಟು ಜನಪ್ರಿಯವಾಗಲಿದೆ ಎನ್ನುವುದು ನಿರ್ದೇಶಕರ ಮಾತು. ಜ಼ೀ ಮ್ಯೂಸಿಕ್ ಸೌತ್ ಈಗಾಗಲೇ ಚೇಸ್ ಚಿತ್ರದ ಹಾಡುಗಳ ಹಕ್ಕನ್ನು ಅತ್ಯುತ್ತಮ ಬೆಲೆಗೆ ಖರೀದಿಸಿದ್ದು ಡಿಸೆಂಬರ್ನಲ್ಲಿ ಹಾಡುಗಳು ಒಂದೊಂದಾಗಿ ಬಿಡುಗಡೆಯಾಗಲಿದೆ. ಕರ್ನಾಟಕದವರೇ ಆದ ಕಾರ್ತಿಕ್ ಆಚಾರ್ಯ ಅವರಿಗೆ ಕನ್ನಡದಲ್ಲಿ ಇದು ಮೊದಲ ಚಿತ್ರವಾಗಲಿದ್ದು, ಚೇಸ್ ಚಿತ್ರದ ಹಾಡುಗಳು ಅತ್ಯುತ್ತಮವಾಗಿ ಮೂಡಿ ಬಂದಿದೆ ಎನ್ನುವುದು ಚಿತ್ರ ತಂಡದ ಅನಿಸಿಕೆ.