“ನಾನು ತಮಿಳು ಇಂಡಸ್ಟ್ರಿಗೆ ಕಾಲಿಟ್ಟಾಗ ಸಾಕಷ್ಟು ಜನ ಕರ್ನಾಟಕ ಮತ್ತು ತಮಿಳು ನಾಡಿನವರು ಮೊದಲೇ ಇಂಡಿಯಾ ಪಾಕಿಸ್ತಾನದ ಥರಾ ಕಿತ್ತಾಡುತ್ತಾರೆ. ಕರ್ನಾಟಕದಿಂದ ಬಂದ ನಿನಗಿಲ್ಲಿ ಯಾರೂ ಗೌರವ ಕೊಡೋದಿಲ್ಲ… ಎಂದೆಲ್ಲಾ ಹೇಳಿದ್ದರು. ಆದರೆ ತಮಿಳು ಜನ ನನಗೆ ಅಪಾರವಾದ ಪ್ರೀತಿ ನೀಡಿದ್ದಾರೆ. ಬದುಕು ಕೊಟ್ಟಿದ್ದಾರೆ. ನಾನು ಚೆನ್ನೈ ಹುಡುಗಿ ಅಂತಾ ಹೇಳಿಕೊಳ್ಳಲು ಇಷ್ಟಪಡುತ್ತೇನೆ. ತಮಿಳುನಾಡಿನ ಮನೆಮಗಳು ಅಂತಾ ಕರೆಸಿಕೊಳ್ಳಲು ನನಗೆ ಹೆಮ್ಮೆಯೆನಿಸುತ್ತದೆ…”

ಛಾಯಾ ಸಿಂಗ್ ಅನ್ನೋ ನಟಿ ನಿಮಗೆ ನೆನಪಿರಬಹುದು. ಮುನ್ನುಡಿ ಸಿನಿಮಾದ ಮೂಲಕ ನಟನೆ ಆರಂಭಿಸಿ, ನಂತರ ಚಿಟ್ಟೆ, ತುಂಟಾಟ, ಬಲಗಾಲಿಟ್ಟು ಒಳಗೆ ಬಾ, ಸಖ ಸಖಿ, ಆಕಾಶಗಂಗೆ ಮುಂತಾದ ಕಮರ್ಷಿಯಲ್ ಸಿನಿಮಾಗಳಲ್ಲಿ ನಾಯಕಿಯಾಗಿಯೂ ಮಿಂಚಿದವಳು. ಒಂದರ ಹಿಂದೊಂದು ಅವಕಾಶ ದಕ್ಕುತ್ತಿದ್ದ ಕಾಲದಲ್ಲೇ ಈಕೆಗೆ ಧನುಷ್ ನಟಿಸಿದ್ದ ತಿರುಡಾ ತಿರುಡಿ ಸಿನಿಮಾದಲ್ಲಿ ಅವಕಾಶ ಸಿಕ್ಕಿತ್ತು. ಆ ಚಿತ್ರದ ‘ಮನ್ಮಥ ರಾಸಾ ಮನ್ಮಥ ರಾಸಾ ಅನ್ನೋ ಹಾಡು ಭಯಂಕರ ಹಿಟ್ಟಾಗಿಬಿಟ್ಟಿತ್ತು. ಧನುಷ್’ಗೆ ಸರಿಸಮನಾಗಿ ಕುಣಿದಿದ್ದಳು ಛಾಯಾ. ಈ ಸಿನಿಮಾ ರಿಲೀಸಾಗೋ ಹೊತ್ತಿಗೆ ತಮಿಳು ಪಡ್ಡೆಗಳ ಪಾಲಿನ ಪ್ರೀತಿಯ ದೇವತೆಯಾಗಿಹೋಗಿದ್ದಳು.

ತಮಿಳಿನಲ್ಲಿ ಫೇಮಸ್ಸಾದಮೇಲೆ ಛಾಯಾ ಸಿಂಗ್ ಈಕಡೆ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಮೇಲಾಗಿ ಕನ್ನಡಿಗರು ಅಷ್ಟಾಗಿ ಆಕೆಯತ್ತ ಗಮನ ಕೊಡಲಿಲ್ಲ. ಸಖಸಖಿ ಸಿನಿಮಾದಲ್ಲಿ ನಾಯಕಿಯಾಗಿದ್ದು ಬಿಟ್ಟರೆ ರೌಡಿ ಅಳಿಯ ಸಿನಿಮಾದಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದಳಷ್ಟೇ. ಆದರೆ ತಮಿಳಿನಲ್ಲಿ ಜಯಸೂರ್ಯ, ತಿರುಪಾಚ್ಚಿ, ಕದಿರವೇಲನ್ ಕಾದಲ್ ಸೇರಿದಂತೆ ಹತ್ತಾರು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿಯಾದಳು. ತೆಲುಗು, ಬೆಂಗಾಲಿ ಮತ್ತು ಮಲಯಾಳಿ ಸಿನಿಮಾಗಳಲ್ಲೂ ಅವಕಾಶ ಪಡೆದಳು. ಸಿನಿಮಾದಲ್ಲಿ ಕೆಲಸ ಕಡಿಮೆಯಾಗುತ್ತಿದ್ದಂತೇ ಕಿರುತೆರೆಯಲ್ಲೂ ಒಳ್ಳೇ ಛಾನ್ಸು ಸಿಗುತ್ತಾ ಹೋಯಿತು. ಈ ನಡುವೆ ಕೃಷ್ಣ ಅನ್ನೋ ಸೀರಿಯಲ್ ನಟನನ್ನು ಪ್ರೀತಿಸಿ ಮದುವೆಯೂ ಆದಳು. ಅದೆಲ್ಲಾ ಆಗೋ ಹೊತ್ತಿಗೆ ಛಾಯಾ ಸಿಂಗ್ ಅನ್ನೋ ನಟಿಯನ್ನು ಕನ್ನಡಿಗರು ಹೆಚ್ಚೂ ಕಮ್ಮಿ ಮರೆತೇ ಹೋಗಿದ್ದರು. ಎರಡು ವರ್ಷಕ್ಕೆ ಮುಂಚೆ ಶಿವಣ್ಣ-ಶ್ರೀಮುರಳಿಯ ಮಫ್ತಿ ಸಿನಿಮಾದಲ್ಲಿ ನಟಿಸಲು ಬಂದಾಗಷ್ಟೇ ಜನ ಈಕೆಯನ್ನು ನೆನಪಿಸಿಕೊಂಡಿದ್ದು.

ಕನ್ನಡದಿಂದ ಲಾಟು ಲಾಟು ಜನ ತಮಿಳು-ತೆಲುಗು ಸೇರಿದಂತೆ ದೇಶದ ಎಲ್ಲ ಭಾಷೆಗಳಲ್ಲೂ ನಟಿಸಿದ್ದಾರೆ. ಸಾಕಷ್ಟು ಮಂದಿ ಉದ್ಯೋಗಕ್ಕೆ ಯಾವುದು ಒಳ್ಳೇ ಜಾಗ ಅನಿಸಿತೋ ಅಲ್ಲಲ್ಲೇ ನೆಲೆ ಕಂಡುಕೊಂಡಿದ್ದಾರೆ. ಆದರೆ ಯಾವತ್ತಿಗೂ ಕನ್ನಡ-ಕರ್ನಾಟಕವನ್ನು ಅವರು ಮರೆತಿಲ್ಲ. ಬಿಡುವು ಸಿಕ್ಕಿತೆಂದರೆ ಮೊದಲು ಓಡೋಡಿ ಬರೋದು ಕನ್ನಡ ನೆಲಕ್ಕೆ. ಇವತ್ತು ರಜನಿಕಾಂತ್, ಪ್ರಕಾಶ್ ರೈ ಸೇರಿದಂತೆ ಕರ್ನಾಟಕದಿಂದ ವಲಸೆ ಹೋಗಿರುವ ನಟರೆಲ್ಲಾ ಬೇಸರ ಅನಿಸಿದಾಗ, ಮನಸ್ಸು ಭಾರವಾದಾಗ ಸೀದಾ ಬೆಂಗಳೂರಿನ ಕಡೆ ಪ್ರಯಾಣ ಬೆಳೆಸುತ್ತಾರೆ. ರಜನಿಕಾಂತ್ ರಂಥಾ ನಟ ಜಗತ್ತಿನ ಯಾವ ಮೂಲೆಗೆ ಬೇಕಾದರೂ ಹೋಗಿ ರಿಲ್ಯಾಕ್ಸ್ ಮಾಡಬಹುದು. ಆದರೆ ಅವರು ಆಡಿ ಬೆಳೆದ ಗವೀಪುರ, ಗುಟ್ಟಳ್ಳಿ, ಹನುಮಂತನಗರದ ರಸ್ತೆ ರಸ್ತೆಗಳಲ್ಲಿ ಮುಖ ಮರೆಸಿಕೊಂಡು ಓಡಾಡಿ ಹೋದರೇನೇ ಅವರ ಮನಸ್ಸಿಗೆ ನಿರಾಳ. ಯೋಗರಾಜ ಭಟ್ಟರು ಬರೆದಿರುವ ‘ಹುಟ್ಟಿದ ಊರನು ಬಿಟ್ಟು ಬಂದ ಮೇಲೆ ಇನ್ನೇನು ಬಿಡುವುದು ಬಾಕಿ ಇದೆ ಅನ್ನೋ ಸಾಲು ಸ್ವತಃ ಈ ನಟರ ಅನುಭವಕ್ಕೆ ಬಂದಿರಲಾರದು. ಬದುಕಿಗಾಗಿ ಎಲ್ಲೇ ಇದ್ದರೂ ಜನ್ಮ ನೀಡಿದ ಸ್ಥಳ ಯಾರನ್ನೇ ಆದರೂ ಸೆಳೆಯದೇ ಇರೋದಿಲ್ಲ.

ಇಷ್ಟೆಲ್ಲಾ ಹೇಳುತ್ತಿರೋದಕ್ಕೂ ಕಾರಣವಿದೆ. ನಟಿ ಛಾಯಾ ಇತ್ತೀಚೆಗೆ ನೀಡಿರುವ ಸಂದರ್ಶನವೊಂದರಲ್ಲಿ ಜ್ಞಾನಗೆಟ್ಟು ಮಾತಾಡಿಬಿಟ್ಟಿದ್ದಾಳೆ. “ನಾನು ತಮಿಳು ಇಂಡಸ್ಟ್ರಿಗೆ ಕಾಲಿಟ್ಟಾಗ ಸಾಕಷ್ಟು ಜನ ಕರ್ನಾಟಕ ಮತ್ತು ತಮಿಳು ನಾಡಿನವರು ಮೊದಲೇ ಇಂಡಿಯಾ ಪಾಕಿಸ್ತಾನದ ಥರಾ ಕಿತ್ತಾಡುತ್ತಾರೆ. ಕರ್ನಾಟಕದಿಂದ ಬಂದ ನಿನಗಿಲ್ಲಿ ಯಾರೂ ಗೌರವ ಕೊಡೋದಿಲ್ಲ… ಎಂದೆಲ್ಲಾ ಹೇಳಿದ್ದರು. ಆದರೆ ತಮಿಳು ಜನ ನನಗೆ ಅಪಾರವಾದ ಪ್ರೀತಿ ನೀಡಿದ್ದಾರೆ. ಬದುಕು ಕೊಟ್ಟಿದ್ದಾರೆ. ನಾನು ಚೆನ್ನೈ ಹುಡುಗಿ ಅಂತಾ ಹೇಳಿಕೊಳ್ಳಲು ಇಷ್ಟಪಡುತ್ತೇನೆ. ತಮಿಳುನಾಡಿನ ಮನೆಮಗಳು ಅಂತಾ ಕರೆಸಿಕೊಳ್ಳಲು ನನಗೆ ಹೆಮ್ಮೆಯೆನಿಸುತ್ತದೆ… ಹೀಗೆ ಮಾತಾಡಿದ್ದಾಳೆ. ಹಣ, ಹೆಸರು ಬಂತು ಅಂದತಕ್ಷಣ ಸಕಲವನ್ನೂ ನೀಡಿ ಪೊರೆದ ಕರ್ನಾಟಕ ಈಕೆಗೆ ಬೇಡವಾಯ್ತೇ. ತಮಿಳ್ ಮಕ್ಕಳ್ ಮನವೊಲಿಸಿಕೊಳ್ಳಲು, ಪ್ರಚಾರ ಗಿಟ್ಟಿಸಿಕೊಳ್ಳಲು ಛಾಯಾ ಸಿಂಗ್ ಹೀಗೆ ಮಾತಾಡುವ ಅನಿವಾರ್ಯವಿತ್ತೇ?

ಇಷ್ಟಕ್ಕೂ ಛಾಯಾ ಸಿಂಗ್ ಹೇಳುವಂತೆ ಕರ್ನಾಟಕ-ತಮಿಳು ನಾಡಿನ ನಡುವೆ ಯಾವ ‘ವಾರ್ ಕೂಡಾ ಸಂಭವಿಸಿಲ್ಲ. ನೀರು-ಭಾಷೆ ಅಂತಾ ಬಂದಾಗ ಉಗ್ರ ಹೋರಾಟ, ಸ್ವಾಭಿಮಾನದ ಚಳುವಳಿಗಳು, ಜೀವದಾನಗಳಾಗಿವೆ. ತಮಿಳುನಾಡಿನ ಜನ ಕರ್ನಾಟಕದವರನ್ನು ಗೌರವಿಸೋದಿಲ್ಲ ಅಂಥಾ ಛಾಯಾ ಸಿಂಗು ಥೇಟು ಇಂಗು ತಿಂದ ಮಂಗನ ಹಾಗೆ ತಪ್ಪುತಪ್ಪಾಗಿ ಮಾತಾಡಿದೆ. ತಮಿಳಿನ ಜನಕ್ಕೆ ಕನ್ನಡದ ಕಲಾವಿದರು, ತಂತ್ರಜ್ಞರ ತಾಕತ್ತೇನು ಅಂತಾ ಚನ್ನಾಗೇ ಗೊತ್ತು. ಈಕೆ ಹೇಳಿದ್ದು ನಿಜವಾಗಿದ್ದಿದ್ದರೆ ರಜನಿಕಾಂತ್ ಅಲ್ಲಿ ಸೂಪರ್ ಸ್ಟಾರ್ ಆಗುತ್ತಿರಲಿಲ್ಲ. ಕೋಕಿಲ ಮೋಹನ್, ಅರ್ಜುನ್ ಸರ್ಜಾ, ಪ್ರಕಾಶ್ ರೈ, ಸಂಪತ್, ಕಿಶೋರ್ ಸೇರಿದಂತೆ ನಮ್ಮ ಕನ್ನಡದ ಪ್ರತಿಭೆಗಳು ಹೋಗಿ ತಮಿಳು ಇಂಡಸ್ಟ್ರಿಯಲ್ಲಿ ಆಳ್ವಿಕೆ ನಡೆಸಲು ಸಾಧ್ಯವೇ ಆಗುತ್ತಿರಲಿಲ್ಲ! ಛಾನ್ಸು, ಕಾಸು ಕೊಟ್ಟ ತಮಿಳು ನಾಡನ್ನು ಹೊಗಳುವ ಭರದಲ್ಲಿ ಛಾಯಾ ಸಿಂಗ್ ಯದ್ವಾ ತದ್ವಾ ಮಾತಾಡಿಬಿಟ್ಟಿದ್ದಾಳೆ ಅಷ್ಟೇ.. ಇರಲಿ, ಇದರೊಟ್ಟಿಗೆ ಜನ್ಮ ಕೊಟ್ಟ ಕನ್ನಡ ನಾಡಿನ ಬಗ್ಗೆ ಒಂದೆರಡು ಒಳ್ಳೇ ಮಾತಾದರೂ ಆಡಿದ್ದಿದ್ದರೆ ಭೇಷ್ ಅನ್ನಿಸಿಕೊಳ್ಳುತ್ತಿದ್ದಳು.

ಬೆಂಗಳೂರಿನ ರಾಜಾಜಿನಗರದಲ್ಲೇ ಓದಿ ಬೆಳೆದು, ಕನ್ನಡದ ಸಿನಿಮಾಗಳ ಛಾನ್ಸು ಗಿಟ್ಟಿಸಿಕೊಂಡು, ಹಾಗೆ ಹೋದವಳು ಈಕೆ. ಯಾವತ್ತಾದರೂ ಒಂದು ದಿನ ಅಲ್ಲಿ ಅವಕಾಶವೇ ಇಲ್ಲ ಅಂದಾಗ ಈಕಡೆ ಬರಲೇಬೇಕಲ್ಲವಾ? ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಅನ್ನೋ ಕುವೆಂಪು ವಾಕ್ಯ ಛಾಯಾ ಸಿಂಗ್ ರಂಥಾ ನಟಿಯರಿಗೆ ಮರೆತುಹೋಗಿದೆಯಾ? ಅಥವಾ ಹಣ, ಜನಪ್ರಿಯತೆಯ ಅಮಲು ಹೀಗೆಲ್ಲಾ ಮಾತಾಡಿಸುತ್ತಿದೆಯಾ? ಇದು ನವೆಂಬರ್ ತಿಂಗಳು. ಎಲ್ಲೆಲ್ಲೂ ಕನ್ನಡ ಘೋಷ ಮೊಗಳಗುತ್ತಿದೆ. ಈ ನೆಲದಲ್ಲಿ ಜನ್ಮವೆತ್ತಿ, ನಮ್ಮ ಭಾಷೆಯನ್ನು ಮರೆತ, ಮತ್ತೆಲ್ಲೋ ಕೂತು ಬೇಕಾಬಿಟ್ಟಿ ಮಾತಾಡುವ ಯಾರನ್ನೂ ಕನ್ನಡಿಗರು ಕ್ಷಮಿಸಬಾರದು. ಅಹಂಕಾರಕ್ಕೆ ಉದಾಸೀನವೇ ಮದ್ದು ಅನ್ನುವಂತೆ ಇನ್ಯಾವತ್ತೂ ಇಂಥವರಿಗೆ ಕರೆದು ಅವಕಾಶ ಕೊಡಬಾರದು. ತಮಿಳುನಾಡಿನ ಮನೆಮಗಳು ಅಂತಾ ಕರೆಸಿಕೊಳ್ಳೋ ಆಕೆಗೆ ಹೆಮ್ಮೆಯಿದ್ದೆರೆ ಅಲ್ಲೇ ಸುಖವಾಗಿರಲಿ. ಮಗಳು ನಮ್ಮ ಮನೆಗೆ ಬರೋದೇ ಬ್ಯಾಡ! ಜೈ ಕರ್ನಾಟಕ ಮಾತೆ!!

CG ARUN

ಬ್ರಹ್ಮಚಾರಿಗೆ ಬೆಡ್ ರೂಮ್ ಬಾಧೆ!

Previous article

ಇದು ಹದಿನೈದು ವರ್ಷದ ಹಳೇ ಲವ್ವು!

Next article

You may also like

Comments

Leave a reply

Your email address will not be published. Required fields are marked *