ಈ ಹಿಂದೆ ’ಪಾರು ಐ ಲವ್ ಯು’ ಚಿತ್ರವನ್ನು ನಿರ್ಮಾಣದ ಜೊತೆಗೆ ನಾಯಕನಾಗಿದ್ದವರು ರಂಜನ್ ಹಾಸನ್. ಈ ಬಾರಿ ಕುತೂಹಲ ಹುಟ್ಟಿಸುವಂಥ ’ದ ಚೆಕ್ ಮೇಟ್’ ಸಿನಿಮಾಕ್ಕೆ ಎಂದಿನಂತೆ ಎರಡು ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಕತೆಯಲ್ಲಿ ನಾಲ್ಕು ಸ್ನೇಹಿತರು ಬ್ರೇಕಪ್ ಪಾರ್ಟಿ ಮಾಡಲು ದೂರದ ಸ್ಥಳಕ್ಕೆ ಹೋಗುತ್ತಾರೆ. ಅಲ್ಲಿ ತಮ್ಮ ಭಗ್ನ ಪ್ರೇಮದ ಪ್ರಸಂಗಗಳನ್ನು ವಿನೋದದ ರೀತಿಯಲ್ಲಿ ಹಂಚಿಕೊಳ್ಳುತ್ತಾರೆ. ಇದರ ನಡುವೆ ಅವರಿಗೆ ವಿಚಿತ್ರ ಅನುಭವಗಳು ಒದಗಿ ಬಂದು, ಮತ್ತೊಂದು ಕಷ್ಟಕ್ಕೆ ಸಿಲುಕಿಸುತ್ತದೆ. ಆಗ ಅಲ್ಲಿ ಆಡುವ ಚದುರಂಗದ ಆಟ, ಅದರ ಫಲಿತಾಂಶ ಆಧಾರದ ಮೇಲೆ ದೊರೆಯುವ ಲಾಭ, ನಷ್ಟ ಇವರ ನಡುವಿನ ಸ್ನೇಹ ಸ್ವಾರ್ಥಕವಾಗಿ ಬೆಳಯುತ್ತದೆ. ಇದೆಲ್ಲವೂ ಒಂದು ಬಲೆಯಂತೆ ಕಂಡರೆ, ಅದನ್ನು ಭೇದಿಸಿ ಹೊರಬರುವ ಪ್ರಯತ್ನವೇ ಸಿನಿಮಾದ ಸಾರಾಂಶವಾಗಿದೆ. ಸಂಪೂರ್ಣ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆದಿದ್ದು, ಬಹುಪಾಲು ದೃಶ್ಯಗಳು ರಾತ್ರಿಯಲ್ಲಿ ಮೂಡಿ ಬಂದಿದೆ.
’ದ ಚೆಕ್ ಮೇಟ್’ ಚಿತ್ರದಕ್ಕೆ ಇಂಜಿನಿಯರ್ ಭಾರತೀಶ್ ವಸಿಷ್ಟ ಮತ್ತು ಡಿಪ್ಲೊಮೋ ಮುಗಿಸಿರುವ ಸಂತೋಷ ಚಿಪ್ಪಾಡಿ ಜಂಟಿಯಾಗಿ ಆಕ್ಷನ್ಕಟ್ ಹೇಳಿದ್ದಾರೆ. ಮೂವರು ಸ್ನೇಹಿತರುಗಳಾಗಿ ವಿಜಯ್ ಚೆಂಡೂರ್, ವಿಶ್ವವಿಜೇತ ಮತ್ತು ರಾಜಶೇಖರ್ ಜೊತೆಯಾಗಿದ್ದಾರೆ. ಪ್ರೀತು ಪೂಜಾ ಮೂಕ ನಾಯಕಿಯಾಗಿ ನಟಿಸಿದ್ದಾರೆ. ಪೊಲೀಸ್ ಆಗಿ ಸರ್ದಾರ್ ಸತ್ಯ ಉಳಿದಂತೆ ಅಮೃತನಾಯರ್, ಸ್ತುತಿ, ವಿಸ್ಮ್ಮಯ, ಕಾರ್ತಿಕ್ಹುಲಿ, ಸುಧೀ ಕಾಕ್ರೋಜ್, ಪ್ರದೀಪ್ ಪೂಜಾರಿ, ಚಿಲ್ಲರ್ ಮಂಜ ನಟಿಸಿದ್ದಾರೆ. ಭಾರತೀಶ ವಸಿಷ್ಟ ಸಾಹಿತ್ಯದ ಒಂದು ಗೀತೆಗೆ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸತೀಶ್ ರಾಜೇಂದ್ರನ್, ಸಂಕಲನ ಈ.ಎಸ್.ಈಶ್ವರ್-ಸುನಿಲ್ಕಶ್ಯಪ್, ಸಾಹಸ ವೈಲೆಂಟ್ ವೇಲು ಅವರದ್ದಾಗಿದೆ. ಜಗದ್ ಜ್ಯೋತಿ ಮೂವಿ ಮೇಕರ್ಸ್ ಮುಖಾಂತರ ಸಿದ್ದಗೊಂಡಿರುವ ಚಿತ್ರ ಸದ್ಯ ಸೆನ್ಸಾರ್ ಅಂಗಳಕ್ಕೆ ಹೋಗಲಿದ್ದು, ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗುವ ಸೂಚನೆಯಿದೆ.
ಸದ್ಯ ದ ಚಕ್ಮೇಟ್ ಚಿತ್ರದ ಟೀಸರ್ ರಿಲೀಸಾಗಿದೆ. ಪಕ್ಕಾ ಸಸ್ಪೆನ್ಸ್ ಥ್ರಿಲ್ಲರ್ ಜಾನರಿನಲ್ಲಿ ಮೂಡಿಬಂದಿರುವ ಚಿತ್ರ ಅನ್ನೋದು ಟೀಸರಿನಲ್ಲೇ ಗೊತ್ತಾಗುತ್ತಿದೆ.