ಎಂ ಸಿರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿ, ಡಾ.ಮಂಜುನಾಥ್ ಡಿ.ಎಸ್ ನಿರ್ಮಾಣ ಮಾಡಿರುವ ನೂತನ ಚಿತ್ರ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಶೂಟಿಂಗ್ ಮುಗಿಸಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ‘ಊರ್ವಶಿ ಅವಳು, ನನ್ನ ಬೇವರ್ಸಿ ಮಾಡಿದ್ಲು… ಶ್ರೀಮತಿ ಆಗು ಅಂದ್ರೆ ಮೂತಿ ತಿರುವಿ ಹೋದ್ಲು’ ಎಂಬ ಮೊದಲ ಹಾಡು ಬಿಡುಗಡೆಯಾಗಿದೆ. ಆರವ್ ರಿಶಿಕ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ನವೀನ್ ಸಜ್ಜು ದನಿಗೂಡಿಸಿದ್ದಾರೆ. ‘ಎಣ್ಣೆ ನಮ್ದು ಊಟ ನಿಮ್ದು…’ ಹಾಡಿನ ಬಳಿಕ ‘ಬಿಗ್ ಬಾಸ್’ ನವೀನ್ ‘ಊರ್ವಶಿ…’ ಹಾಡಿಗೆ ದನಿಯಾಗಿದ್ದಾರೆ. ಈ ಹಾಡಿಗೆ ನಿರ್ದೇಶಕ ಕುಮಾರ್ ಅವರೇ ಸಾಹಿತ್ಯ ರಚಿಸಿದ್ದಾರೆ.
ಆನಂದ್ ಆಡಿಯೋ ಸಂಸ್ಥೆ ಚಿತ್ರದ ಲಿರಿಕಲ್ ಆಡಿಯೋ ಬಿಡುಗಡೆ ಮಾಡಿದ್ದು, ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಲವ್ ಪ್ಯಾಥೋ ಸಾಂಗ್ ಇದಾಗಿದ್ದು, ಟಪ್ಪಾಂಗುಚ್ಚಿ ಶೈಲಿಯಲ್ಲಿ ಮೂಡಿ ಬಂದಿದೆ. ಯುವ ನಿರ್ದೇಶಕ ಕುಮಾರ್ ನಿರ್ದೇಶನವಿರುವ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ‘ಕಿರಿಕ್ ಪಾರ್ಟಿ’ ಚಂದನ್ ಆಚಾರ್, ಯುವ ನಾಯಕಿ ಸಂಜನಾ ಆನಂದ್, ತಬಲ ನಾಣಿ, ಸುಚೇಂದ್ರ ಪ್ರಸಾದ್ ಹಾಗೂ ನಿರ್ಮಾಪಕರಾದ ಡಾ.ಮಂಜುನಾಥ್ ಡಿ.ಎಸ್, ಮೈಕೋ ನಾಗರಾಜ್, ರಾಕ್’ಲೈನ್ ಸುಧಾಕರ್ ತಾರಾಬಳಗದಲ್ಲಿದ್ದಾರೆ. ಮೊದಲ ಹಾಡಿನಿಂದಲೇ ಸದ್ದು ಮಾಡಿರುವ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಟ್ರೇಲರ್ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆ ಮಾಡುವ ಆಲೋಚನೆಯಲ್ಲಿದೆ ಚಿತ್ರತಂಡ. ಸಜಯ್ ಕುಮಾರ್ ಹಿನ್ನೆಲೆ ಸಂಗೀತ ನೀಡಿರುವ ಈ ಚಿತ್ರಕ್ಕೆ ಶಿವ ಸೇನಾ ಛಾಯಾಗ್ರಹಣ, ವೆಂಕಿ ಸಂಕಲನ ಮತ್ತು ಲಕ್ಷ್ಮಿತ್ ವಿನಯ್ ನೃತ್ಯ ನಿರ್ದೇಶನ ಮಾಡಿದ್ದಾರೆ.
#
No Comment! Be the first one.