ತನ್ನ ವಿಶಿಷ್ಟವಾದ ಶೀರ್ಷಿಕೆ, ಬಾಲಿವುಡ್ ಮಟ್ಟದಲ್ಲಿಯೂ ಟಾಕ್ ಕ್ರಿಯೇಟ್ ಮಾಡಿದ್ದ ಸಿನಿಮಾ ಕೆಮಿಸ್ಟ್ರಿ ಆಫ್ ಕರಿಯಪ್ಪ. ಇದು ಯಾವ ಜಾನರಿನ ಸಿನಿಮಾ, ಕಥೆ ಎಂಥಾದ್ದೆಂಬುದೂ ಸೇರಿದಂತೆ ಕರಿಯಪ್ಪನ ಕೆಮಿಸ್ಟ್ರಿ ಹೇಗಿದ್ದಿರ ಬಹುದೆಂಬ ಕುತೂಹಲ ಎಲ್ಲೆಡೆ ಮಿರುಗುಟ್ಟಿತ್ತು. ಇಂಥಾದ್ದರಿಂದ ಅಪಾರ ನಿರೀಕ್ಷಿಯಿಟ್ಟುಕೊಂಡು ಥೇಟರಿಗೆ ಬಂದವರು ಮನಸಾರೆ ನಕ್ಕು, ಒಂದರೆಕ್ಷಣ ಭಾವುಕರಾಗಿ, ಕೆಲ ತಿರುವುಗಳಲ್ಲಿ ಬೆರಗಾಗುತ್ತಲೇ ವಿಶಿಷ್ಟವಾದೊಂದು ಸಿನಿಮಾ ನೋಡಿದ ಖುಷಿಯ ಕೈ ಹಿಡಿದೇ ಮನೆ ಸೇರಿಕೊಳ್ಳೋದು ಗ್ಯಾರೆಂಟಿ. ಇದು ಕರಿಯಪ್ಪನ ಕೆಮಿಸ್ಟ್ರಿಯ ನಿಜವಾದ ವಿಶೇಷತೆ ಅನ್ನಲಡ್ಡಿಯಿಲ್ಲ.
ಡಾ. ಡಿ.ಎಸ್ ಮಂಜುನಾಥ್ ನಿರ್ಮಾಣ ಮಾಡಿರುವ ಕೆಮಿಸ್ಟ್ರಿ ಆಫ್ ಕರಿಯಪ್ಪ ಭಿನ್ನ ಬಗೆಯ ಕಾಮಿಡಿ ಜಾನರಿನ ಚಿತ್ರ. ಇಡೀ ಹೂರಣವನ್ನ ನೋಡಿದರೆ ಇದನ್ನು ಬರೀ ಕಾಮಿಡಿಗೆ ಕಟ್ಟು ಹಾಕಲು ಖಂಡಿತಾ ಸಾಧ್ಯವಾಗೋದಿಲ್ಲ. ಒಂದು ಸರಳವಾದ ಕಥೆಯನ್ನು ಸಣ್ಣಪುಟ್ಟ ವಿಚಾರಗಳಲ್ಲಿಯೂ ಗಮನವಿಟ್ಟು ಶೃಂಗರಿಸಿರುವ ನಿರ್ದೇಶಕ ಕುಮಾರ್ ಅವರ ಕಸುಬುದಾರಿಕೆ ಬೆರಗಾಗಿಸುವಂತಿದೆ. ಮಧ್ಯಮ ವರ್ಗದ ಕಥೆಯಾದರೂ ಎಲ್ಲರಿಗೂ ಕನೆಕ್ಟ್ ಆಗುವಂಥಾ ಕಥೆ, ಕಾಮಿಡಿ ಮತ್ತು ಗಾಢವಾದ ಭಾವುಕ ಸನ್ನಿವೇಶಗಳೊಂದಿಗೆ ಕರಿಯಪ್ಪನ ಕೆಮಿಸ್ಟ್ರಿ ಮೋಡಿ ಮಾಡಿದೆ.
ಅದು ಅಪ್ಪ ಅಮ್ಮ ಮತ್ತು ಮಗನ ಪುಟ್ಟ ಸಂಸಾರ. ಕರಿಯಪ್ಪ ಆ ಸಂಸಾರದ ಯಜಮಾನ. ಈತನ ಮಗ ಉತ್ತರ ಕುಮಾರ. ತನ್ನ ಮಗನಿಗೊಂದು ಮದುವೆ ಮಾಡಿ ಆತ ನೆಲೆ ಕಂಡುಕೊಳ್ಳಬೇಕೆಂಬುದೇ ಕರಿಯಪ್ಪನ ಆಸೆ ಮತ್ತು ಉದ್ದೇಶ. ಆದರೆ ನೂರಾರು ಹುಡುಗೀರನ್ನು ನೋಡಿದರೂ ಒಂದೇ ಒಂದು ಸಂಬಂಧವೂ ಉತ್ತರ ಕುಮಾರನಿಗೆ ಕೂಡಿ ಬರೋದಿಲ್ಲ. ಈ ಬಗ್ಗೆ ಕರಿಯಪ್ಪ ಮಂಡೆಬಿಸಿ ಮಾಡಿಕೊಂಡು ಕೂತಿರುವಾಗಲೇ ಪುತ್ರ ಉತ್ತರ ಕುಮಾರ ಚೆಲುವೆಯೊಬ್ಬಳಿಗೆ ಬಲೆ ಬೀಸಿ ಬಿಟ್ಟಿರುತ್ತಾನೆ. ಆಮೇಲೆ ಮದುವೆ. ಆದರೆ ಉತ್ತರ ಕುಮಾರನಿಗೆ ಫಸ್ಟ್ ನೈಟಲ್ಲಿಯೇ ಘೋರ ಆಘಾತವೊಂದು ಎದುರಾಗುತ್ತೆ. ಅದಕ್ಕೆ ಕಾರಣವೇನು. ಅಂಥಾದ್ದೇನಾಗುತ್ತೆ ಅನ್ನೋ ಕುತೂಹಲದ ಸುತ್ತಾ ಎಲ್ಲಿಯೂ ಬೋರು ಹೊಡೆಸದಂತೆ ಈ ಚಿತ್ರ ಮುಂದುವರೆಯುತ್ತದೆ.
ಮಗನ ಜೀವನದಲ್ಲಾಗೋ ಯಡವಟ್ಟುಗಳನ್ನು ಸರಿಪಡಿಸಲು ಪಡಿ ಪಾಟಲು ಪಡೋ ತಂದೆಯಾಗಿ ಕರಿಯಪ್ಪನ ಪಾತ್ರಕ್ಕೆ ತಬಲಾ ನಾಣಿ ಜೀವ ತುಂಬಿದ್ದಾರೆ. ಇದರಲ್ಲವರು ಈ ವರೆಗಿನ ಪಾತ್ರಗಳಿಗಿಂತಲೂ ಭಿನ್ನವಾಗಿ ಕಾಣಿಸುತ್ತಾರೆ. ನಾಯಕ ಚಂಣದನ್ ಆಚಾರ್ಯ ಮತ್ತು ನಾಯಕಿ ಸಂಜನಾ ಆನಂದ್ ಕೂಡಾ ಮುದ್ದಾಗಿ ನಟಿಸಿದ್ದಾರೆ. ಎಲ್ಲ ಪಾತ್ರ ವರ್ಗವೂ ಪ್ರೇಕ್ಷಕರನ್ನು ನೇರವಾಗಿ ತಟ್ಟುವಂತಿದೆ. ಖುದ್ದು ನಿರ್ಮಾಪಕ ಮಂಜುನಾಥ್ ಅವರೇ ಪಾತ್ರವೊಂದರ ಮೂಲಕ ಪ್ರೇಕ್ಷಕರಿಗೆ ಆಪ್ತವಾಗುತ್ತಾರೆ.
ಒಟ್ಟಾರೆ ಚಿತ್ರದಲ್ಲಿ ಗಂಭೀರವಾದ ಅಂಶಗಳಿವೆ, ಭಾವನಾತ್ಮಕ ಸನ್ನಿವೇಶಗಳಿವೆ. ಆದರೆ ಅದರ ಬೆನ್ನಿಗೇ ನಗು ಅರಳಿಕೊಳ್ಳುತ್ತೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಸ್ಪೆಷಲ್ಲು ಅನ್ನಿಸೋದೇ ಈ ಕಾರಣದಿಂದ. ನೀವೂ ಒಮ್ಮೆ ನೋಡಿ. ಕರಿಯಪ್ಪನ ಕೆಮಿಸ್ಟ್ರಿ ಖಂಡಿತಾ ಇಷ್ಟವಾಗುತ್ತೆ!
cinibuzz ರೇಟಿಂಗ್ : ****/***** #
No Comment! Be the first one.