ನಿಜಕ್ಕೂ ಈತನಿಗೆ ಶೋಷಿತರ ಪರವಾದ ಕಾಳಜಿ, ಸಾಯುತ್ತಿರುವವರ ಬಗ್ಗೆ ಕನಿಕರವಿದ್ದರೆ, ಈತನ ಕುಟುಂಬದವರ ಖಾಸಗೀ ಆಸ್ಪತ್ರೆಗಳಲ್ಲಿ ಉಚಿತ ಸೌಲಭ್ಯ ಕಲ್ಪಿಸಲಿ. ಅಮೆರಿಕದಲ್ಲಿರುವ ತನ್ನ ವೈದ್ಯ ತಂದೆ ತಾಯಿಯನ್ನು ಕರೆಸಿ ಇಲ್ಲಿ ಕೈ ಸೋತವರಿಗೆ ನೆರವಾಗುವಂತೆ ಮಾಡಲಿ. ಅದು ಸಾಧ್ಯವಾಗದಿದ್ದರೂ ಪರವಾಗಿಲ್ಲ ಕಾಟಾಚಾರದ ಭಾಷಣವನ್ನಾದರೂ ನಿಲ್ಲಿಸಲಿ!
ನಟ ಚೇತನ್ ಗೊತ್ತಲ್ಲಾ? ಆ ದಿನಗಳು ಸಿನಿಮಾದ ಮೂಲಕ ಹೆಸರು ಮಾಡಿ ಹೀರೋ ಅನ್ನಿಸಿಕೊಂಡವರು. ಬಹುಶಃ ಆ ದಿನಗಳು ತಂದುಕೊಟ್ಟ ಕೀರ್ತಿಯನ್ನು ಈತ ಸರಿಯಾಗಿ ಬಳಸಿಕೊಂಡಿದ್ದಿದ್ದರೆ ಈಷ್ಟೊತ್ತಿಗೆ ಕನ್ನಡದ ಪ್ರಮುಖ ಹೀರೋಗಳಲ್ಲಿ ಒಬ್ಬನಾಗಿರುತ್ತಿದ್ದ. ʻʻಕಥೆ ಹೇಳಲು ಹೋದರೆ ತಲೆ ತಿಂತಾನೆ. ಯಾವ ಸಬ್ಜೆಕ್ಟ್ ಹೇಳಿದರೂ ಒಪ್ಪೋದಿಲ್ಲ” ಅನ್ನೋ ಮಾತು ಈತನ ವಿರುದ್ದ ಆರಂಭದಲ್ಲೇ ಕೇಳಿಬಂತು. ಮಾತೆತ್ತಿದರೆ ಮಾವೋ ಅವರಿಂದ ಶುರು ಮಾಡಿ ಭೂಪಟದ ತುಂಬಾ ರೌಂಡು ಹೊಡೆಯುವ ಚೇತನ್ ಬಳಿ ಗಾಂಧಿನಗರದ ನಿರ್ದೇಶಕರು ಸುಳಿದಾಡಲೂ ಹೆದರುತ್ತಾರೆ. ಇಷ್ಟೆಲ್ಲಾ ಪುಂಗುವ ಅಣ್ಣ ಇತ್ತೀಚೆಗೆ ನಟಿಸಿದ್ದು ಮಾತ್ರ ರಣಂ ಎನ್ನುವ ದಟ್ಟದರಿದ್ರದ ಸಿನಿಮಾದಲ್ಲಿ.
ಅಮೆರಿಕದಲ್ಲಿ ಹುಟ್ಟಿಬೆಳೆದು ಬಂದ ಚೇತನ್ ಈಗೀಗ ಕೆಲವು ಪ್ರಗತಿಪರ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದಾರೆ. ಪುಂಖಾನುಪುಂಖವಾಗಿ ಭಾಷಣ ಮಾಡುವುದನ್ನೂ ಕಲಿತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳನ್ನು ಬಿಚ್ಚಿಡುತ್ತಿದ್ದಾರೆ. ಕೊರೋನಾದಿಂದ ಆಗುತ್ತಿರುವ ಸಾವು ಬರಿಯ ಸಾವಲ್ಲ, ವ್ಯವಸ್ಥಿತ ಕೊಲೆ ಅಂತಾ ವೀರಾವೇಷದ ಮಾತಾಡುತ್ತಿದ್ದಾರೆ. ʻʻಎಲ್ಲರಿಗೂ ಒಂದೇ ರೀತಿಯ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ಖಾಸಗೀ ಆಸ್ಪತ್ರೆಗಳು ಉಳ್ಳವರ ಹಿತ ಕಾಪಾಡುತ್ತಿವೆ. ಇದು ಶ್ರೀಮಂತರ ಹೆಲ್ತ್ ಕೇರ್ ಸಿಸ್ಟಂ…ʼʼ ಅಂತಾ ಮಾತಾಡಿ, ವಿಡಿಯೋ ಮಾಡಿ ಬಿಟ್ಟಿದ್ದಾರೆ.
ಹೌದು… ಇದು ಈ ದೇಶ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವವರ ಸೋಲು. ಅದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ, ಸರ್ಕಾರಗಳನ್ನು ಆರೋಪಿಸುತ್ತಿರುವ ಚೇತನ್ ಎಷ್ಟು ಸಾಚಾ ಅಂತಾ ಜನ ಪ್ರಶ್ನಿಸುತ್ತಿದ್ದಾರೆ.
ಹಣವಿರುವವರ ಹೆಲ್ತ್ ಕೇರ್ ಮಾಡುತ್ತಿದೆ ಅನ್ನೋದು ಚೇತನ್ ಹೇಳಿಯೇ ಗೊತ್ತಾಗಬೇಕಿಲ್ಲ. ಇಂಜೆಕ್ಷನ್ನು, ಬೆಡ್ಡು, ವೆಂಟಿಲೇಟರುಗಳ ಹೆಸರಲ್ಲಿ ಆಸ್ಪತ್ರೆಗಳು ಲೂಟಿ ಮಾಡುತ್ತಿವೆ. ಕಳೆದ ವರ್ಷ ತಲೆ ಮೇಲೆ ಹೂ ಉದುರಿಸಿಕೊಂಡ ವೈದ್ಯರು ಈ ಸಲ ಕಾಸಿಲ್ಲದ ಬಡವರನ್ನು ಕೊಂದು ಪ್ಯಾಕ್ ಮಾಡಿ ಕಳಿಸುತ್ತಿದ್ದಾರೆ.
ಚೇತನ್ ಬಲು ನಾಜೂಕು ಗಿರಾಕಿ. ಹಿಂದೆ ಕಾಂಗ್ರೆಸ್ ಸರ್ಕಾರ ಖಾಸಗಿ ಆಸ್ಪತ್ರೆಗಳ ಸುಲಿಗೆಗೆ ಕಡಿವಾಣ ಹಾಕೋ ಸಲುವಾಗಿ ನಿಯಂತ್ರಣಾ ಕಾಯ್ದೆ ತರಲು ಹೊರಟಿತ್ತಲ್ಲಾ? ಆ ಸಂದರ್ಭದಲ್ಲಿ ಇದೇ ಚೇತನ್ ತುಟಿ ಪಿಟಿಕ್ ಎನ್ನದೆ ಸೈಲೆಂಟಾಗಿದ್ದ. ವೈದ್ಯ ವೃತ್ತಿಯ ಆದರ್ಶವನ್ನೇ ಮರೆತ ವೈದ್ಯರು ಎಷ್ಟೋ ಜನರ ಸಾವಿಗೆ ಕಾರಣವಾದಾಗ ಕೂಡಾ ತೆಪ್ಪಗಿದ್ದುಬಿಟ್ಟಿದ್ದ. ಈತನ ಕುಟುಂಬದ ಅನೇಕರು ವೈದ್ಯರು ಮತ್ತು ಕರ್ನಾಟಕದಲ್ಲಿ ಖಾಸಗೀ ಆಸ್ಪತ್ರೆಗಳನ್ನು ನಡೆಸುತ್ತಿರುವವರು ಅನ್ನೋದು ಅದಕ್ಕೆ ಕಾರಣ. ಈಗ ಬಾಯಿಮಾತಿಗೆ ಖಾಸಗಿ ಆಸ್ಪತ್ರೆಗಳ ಬಗ್ಗೆ ಮಾತಾಡುತ್ತಿದ್ದಾನೆ.
ತಾನೊಬ್ಬ ಪ್ರಗತಿಪರ ಹೋರಾಟಗಾರ, ಸಮಾಜ ಸುಧಾರಕ ಅನ್ನಿಸಿಕೊಳ್ಳಬೇಕು. ಆಗಾಗ ಒಂದಿಷ್ಟು ವಿವಾದಾತ್ಮಕ ಹೇಳಿಕೆ ಕೊಡಬೇಕು. ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಬೇಕು. ಆ ಮೂಲಕ ಭವಿಷ್ಯದಲ್ಲಿ ಜಾಗತಿಕ ರಾಜಕಾರಣದಲ್ಲಿ ತೊಡಗಿಸಿಕೊಳ್ಳಬೇಕು ಅನ್ನೋದು ಚೇತನ್ ಅಹಿಂಸಾನ ಅಸಲೀ ಸ್ಕೆಚ್ಚಂತೆ. ನಿಜಕ್ಕೂ ಈತನಿಗೆ ಶೋಷಿತರ ಪರವಾದ ಕಾಳಜಿ, ಸಾಯುತ್ತಿರುವವರ ಬಗ್ಗೆ ಕನಿಕರವಿದ್ದರೆ, ಈತನ ಕುಟುಂಬದವರ ಖಾಸಗೀ ಆಸ್ಪತ್ರೆಗಳಲ್ಲಿ ಉಚಿತ ಸೌಲಭ್ಯ ಕಲ್ಪಿಸಲಿ. ಅಮೆರಿಕದಲ್ಲಿರುವ ತನ್ನ ವೈದ್ಯ ತಂದೆ ತಾಯಿಯನ್ನು ಕರೆಸಿ ಇಲ್ಲಿ ಕೈ ಸೋತವರಿಗೆ ನೆರವಾಗುವಂತೆ ಮಾಡಲಿ. ಅದು ಸಾಧ್ಯವಾಗದಿದ್ದರೂ ಪರವಾಗಿಲ್ಲ ಕಾಟಾಚಾರದ ಭಾಷಣವನ್ನಾದರೂ ನಿಲ್ಲಿಸಲಿ!