ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಚಿತ್ರಸಾಹಿತಿಗಳಲ್ಲೊಬ್ಬರಾದ ಚಿ.ಉದಯಶಂಕರ್ ಜನ್ಮದಿನವಿಂದು (೧೮). ಅವರ ಪುತ್ರ, ನಟ-ನಿರ್ದೇಶಕ ಚಿ.ಗುರುದತ್ ಇಲ್ಲಿ ತಂದೆಯನ್ನು ಸ್ಮರಿಸಿಕೊಂಡಿದ್ದಾರೆ.
ನಮಗೆ ಸಿನಿಮಾ ನಂಟು ಬೆಳೆದದ್ದು ತಾತ, ಚಿತ್ರಸಾಹಿತಿ ಚಿ.ಸದಾಶಿವಯ್ಯನವರಿಂದ. ಅಪ್ಪನಿಗೆ ನಟನಾಗಬೇಕೆನ್ನುವ ಆಸೆಯಿತ್ತು. ಚಿಕ್ಕವಯಸ್ಸಿನಲ್ಲೇ ಅವರು ನಮ್ಮ ತಾತ ಚಿತ್ರಕಥೆ – ಸಂಭಾಷಣೆ ಬರೆಯುತ್ತಿದ್ದ ಚಿತ್ರಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಆರಂಭಿಸಿದ್ದರು. ನಟನಾಗುವ ತಮ್ಮ ಕನಸನ್ನು ಅವರೆಂದೂ ಬಿಟ್ಟುಕೊಟ್ಟಿರಲಿಲ್ಲ. ಮುಂದೊಂದು ದಿನ ನಟನಾಗುವ ಅವರ ಒತ್ತಾಸೆಗೆ ತಾತನ ಕಡೆಯಿಂದ ಒಪ್ಪಿಗೆ ಸಿಕ್ಕಿತು. ಆದರೆ ತಾವು ಶಿಫಾರಸು ಮಾಡಲು ಅವರು ಸಿದ್ಧರಿರಲಿಲ್ಲ. ಅಪ್ಪ ಅದೊಂದು ದಿನ ಹಿರಿಯ ಕನ್ನಡ ಚಿತ್ರನಿರ್ದೇಶಕರೊಬ್ಬರೆದುರು ಹೋಗಿ ತಮ್ಮ ಆಸೆಯನ್ನು ನಿವೇದಿಸಿಕೊಂಡರು. ತುಂಬಾ ಸಣ್ಣಗಿದ್ದ ಅಪ್ಪನಿಗೆ, ಆ ನಿರ್ದೇಶಕರು ದಪ್ಪಗಾಗುವಂತೆ ಸೂಚಿಸಿದರಂತೆ. ಇದರಿಂದ ಉತ್ತೇಜಿತರಾದ ಅಪ್ಪ ‘ಅತಿ ಬೇಗ ದಪ್ಪಗಾಗುವ’ ಪ್ರಕ್ರಿಯೆ ಆರಂಭಿಸಿದ್ದಾರೆ. ಅವರಿಗೆ ಹಲವರಿಂದ ವಿವಿಧ ರೀತಿಯ ಸಲಹೆಗಳು ಸಿಕ್ಕಿದ್ದವು. ಕಡಲೇಕಾಯಿ ನೀರಲ್ಲಿ ನೆನೆಸಿ ಬೆಳಗ್ಗೆ ಎದ್ದಾPಣ ತಿನ್ನುತ್ತಾ ಬಂದರೆ ಬೇಗ ದಪ್ಪಗಾಗಬಹುದು ಎನ್ನುವುದೂ ಸೇರಿದಂತೆ ಕೆಲವು ಸಲಹೆಗಳನ್ನು ಅವರು ಶ್ರದ್ಧೆಯಿಂದ ಪಾಲಿಸಿದ್ದಾರೆ. ಕೊನೆಗೆ ಈ ಉಪಾಯಗಳು ಫಲಿಸಿವೆ!
ದಪ್ಪಗಾದ ಅಪ್ಪ ಸೀದಾ ಹೋಗಿ ಹಿಂದೊಮ್ಮೆ ತಾವು ಭೇಟಿ ಮಾಡಿದ್ದ ನಿರ್ದೇಶಕರೆದುರು ನಿಂತಿದ್ದಾರೆ. ಆಗ ಆ ನಿರ್ದೇಶಕರು, “ನಾನು ದಪ್ಪಗಾಗು ಎಂದು ಹೇಳಿzನೋ ಹೌದು. ಆದರೆ ಅದಕ್ಕೂ ಒಂದು ಮಿತಿ ಇರಬೇಕು. ನೀನು ಹೀಗೆ ಮೈ ಬೆಳೆಸಿಕೊಂಡು ಬಂದರೆ ನಾನು ನಿನಗೆ ರಾPಸನ ಪಾತ್ರ ಸೃಷ್ಟಿಸಬೇಕಷ್ಟೆ!” ಎಂದಿದ್ದಾರೆ. ಅಲ್ಲಿಗೆ ನಟನಾಗುವ ಅಪ್ಪನ ಆಸೆ ಕಮರಿತು. ಮುಂದೆ ಚಿತ್ರಸಾಹಿತಿಯಾಗಿ ಮಿಂಚಿದ ಅವರು ಹಲವಾರು ಸಿನಿಮಾಗಳಲ್ಲಿ ನಟಿಸಿ ತಮ್ಮ ಆಸೆ ಪೂರೈಸಿಕೊಂಡರು. ಆದರೆ ದಪ್ಪಗಿದ್ದುದರಿಂದ ಹಾಸ್ಯಪಾತ್ರಗಳಿಗಷ್ಟೇ ಅವರು ಸೀಮಿತರಾಗಬೇಕಾಯ್ತು.
೫೦-೬೦ರ ದಶಕಗಳಲ್ಲಿ ವರ್ಷವೊಂದಕ್ಕೆ ತಯಾರಾಗುತ್ತಿದ್ದುದು ಬೆರಳೆಣಿಕೆಯ ಕನ್ನಡ ಚಿತ್ರಗಳಷ್ಟೆ. ಹಾಗಾಗಿ ಸಂಪಾದನೆಗೂ ಮಿತಿ ಇರುತ್ತಿತ್ತು. ತಾತನ (ಚಿತ್ರಸಾಹಿತಿ ಚಿ.ಸದಾಶಿವಯ್ಯ) ಜೊತೆ ತಾವೂ ಮನೆಗೆ ದುಡಿಯಬೇಕೆಂದು ಅಪ್ಪ ಪ್ರಯತ್ನಿಸುತ್ತಿದ್ದರು. ಎಲ್ಐಸಿ ಏಜೆಂಟ್ ಆಗಿದ್ದ ಅಪ್ಪ ಒಂದು ಹಂತದಲ್ಲಿ ಮದರಾಸಿನಿಂದ ಬೆಂಗಳೂರಿಗೆ ಹಿಂತಿರುಗಿ ಬೇರೆ ಏನಾದರೂ ವೃತ್ತಿ ಕೈಗೊಳ್ಳಬೇಕೆಂದು ಆಲೋಚಿಸಿದ್ದರಂತೆ. ಆಗ ಅವರಿಗೆ ರಾಜಕುಮಾರ್ ನೌತಿಕ ಬೆಂಬಲ ನೀಡಿ ಸಂತೈಸಿದ್ದರು. “ಆತುರ ಬೇಡ, ಎಲ್ಲದಕ್ಕೂ ಕಾಲ ಕೂಡಿ ಬರಬೇಕು…” ಎನ್ನುವ ರಾಜ್ರ ಹಿತನುಡಿಯಿಂದಾಗಿ ಅಪ್ಪ ಮದರಾಸಿನಲ್ಲೇ ಉಳಿದರು. ರಾಜ್ರ ಮಾತುಗಳಂತೆ ಮುಂದೆ ಅಪ್ಪ ಬಿಡುವಿಲ್ಲದ ಚಿತ್ರಸಾಹಿತಿಯಾಗಿ ಬೆಳೆದದ್ದು ಇತಿಹಾಸ.
ನನಗೆ ಈಗಲೂ ನೆನಪಿದೆ. ಅಪ್ಪ ಸಿನಿಮಾಗೆ ಹಾಡು, ಚಿತ್ರಕಥೆ, ಸಂಭಾಷಣೆ ಬರೆಯುವಾಗ ಬರವಣಿಗೆಯಲ್ಲಿ ಲೀನವಾಗಿಬಿಡುತ್ತಿದ್ದರು. ದುಃಖ, ಹಾಸ್ಯದ ಸನ್ನಿವೇಶಗಳನ್ನು ಬರೆಯುವಾಗ ಸ್ವತಃ ತಾವೂ ಭಾವುಕರಾಗುವುದು, ನಗುವುದೂ ಇತ್ತು! ಆಗೆಲ್ಲಾ ನಾನು ಮತ್ತು ಅಮ್ಮ ಇಬ್ಬರೂ ಅವರನ್ನು ನೋಡಿ ನಗುತ್ತಿದ್ದೆವು. ಇದರ ಪರಿವೆಯಿಲ್ಲದೆ ಅವರು ತಮ್ಮ ಪಾಡಿಗೆ ತಾವು ಸನ್ನಿವೇಶಗಳಲ್ಲಿ ಮುಳುಗಿರುತ್ತಿದ್ದರು.
ಇಲ್ಲೊಂದು ಘಟನೆಯನ್ನು ಪ್ರಸ್ತಾಪಿಸಲು ಇಚ್ಛಿಸುತ್ತೇನೆ. ಆಗ ಕನ್ನದಾಸನ್ ದಕ್ಷಿಣ ಭಾರತದ ಬಹುದೊಡ್ಡ ಚಿತ್ರಸಾಹಿತಿ. ತಮಿಳು, ತೆಲುಗು ಮತ್ತು ಕನ್ನಡ ಮೂರೂ ಭಾಷೆಗಳಲ್ಲಿ ಚಿತ್ರವೊಂದು ಸೆಟ್ಟೇರಿತ್ತು. ಸ್ಟುಡಿಯೋಗೆ ಬಂದ ಕನ್ನದಾಸನ್ ಟ್ಯೂನ್ಗೆ ಸರಿಯಾಗಿ ತಮಿಳು ಅವತರಣಿಕೆಗೆ ಹದಿನೈದು ನಿಮಿಷಗಳಲ್ಲೇ ಸಾಹಿತ್ಯ ಬರೆದರಂತೆ. ಅದೇ ವೇಳೆ ಅಪ್ಪ ಕೂಡ ಕನ್ನಡ ಅವತರಣಿಕೆಗೆ ಹಾಡು ಬರೆದುಕೊಟ್ಟಿದ್ದಾರೆ. ಹದಿನೈದು ನಿಮಿಷದಲ್ಲೇ ಟ್ಯೂನ್ಗೆ ಗೀತೆ ರಚಿಸಿಕೊಟ್ಟ ಅಪ್ಪನ ಬಗ್ಗೆ ಕನ್ನದಾಸನ್ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರಂತೆ. “ನಿಮಗೆ ಸರಸ್ವತಿ ಒಲಿದಿದ್ದಾಳೆ. ದೊಡ್ಡ ಸಾಧನೆ ಮಾಡುತ್ತೀರಿ” ಎಂದು ಕನ್ನದಾಸನ್ ಆಲಂಗಿಸಿಕೊಂಡದ್ದನ್ನು ಅಪ್ಪ ನಮ್ಮಲ್ಲಿ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಕನ್ನದಾಸನ್ ಹಾರೈಕೆ, ಆಶೀರ್ವಾದ ಫಲಿಸಿದ್ದಕ್ಕೆ ಕನ್ನಡಿಗರಾದ ನಾವೆಲ್ಲಾ ಸಾಕ್ಷಿಯಾಗಿzವೆ.
#
No Comment! Be the first one.