ಕಳೆದ ವರ್ಷ ಮೀಟೂ ವಿವಾದದ ಸಂದರ್ಭದಲ್ಲಿ ಸುದ್ದಿಯಾಗಿದ್ದ ಗಾಯಕಿ ಚಿನ್ಮಯಿ ಈಗ ಮತ್ತೆ ಸುದ್ದಿಯಾಗಿದ್ದಾರೆ. ಹೈದರಾಬಾದ್ ಸಾಹಿತ್ಯೋತ್ಸವದಲ್ಲಿ ವಿವರವಾಗಿ ಮಾತನಾಡಿರುವ ಅವರು, ಮೀಟೂ ಆಪಾದನೆಯಿಂದ ತಮ್ಮ ವೃತ್ತಿ ಬದುಕಿಗೆ ತೀವ್ರ ತೊಂದರೆಯಾಗಿದೆ ಎಂದಿದ್ದಾರೆ. ತಮಿಳು ಚಿತ್ರಗಳ ಮುಂಚೂಣಿ ನಟಿಯರಿಗೆ ಚಿನ್ಮಯಿ ಡಬ್ ಮಾಡುತ್ತಿದ್ದರು. ಮೀಟೂ ಪ್ರಕರಣದ ನಂತರ ಅವರನ್ನು ತಮಿಳುನಾಡು ಡಬ್ಬಿಂಗ್ ಆರ್ಟಿಸ್ಟ್ ಅಸೋಸಿಯೇಷನ್ ಸದಸ್ಯತ್ವದಿಂದ ವಜಾ ಮಾಡಲಾಯ್ತಂತೆ. ಕಾರ್ಯಕ್ರಮದಲ್ಲಿ ಈ ಬಗ್ಗೆ ಹೇಳಿಕೊಂಡ ಅವರು ಮೀಟೂಗೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ತಮಿಳು ಚಿತ್ರರಂಗದ ಖ್ಯಾತ ಚಿತ್ರಸಾಹಿತಿ ವೈರಮುತ್ತು ಅವರ ಮೇಲೆ ಚಿನ್ಮಯಿ ಮೀಟೂ ಆರೋಪ ಹೊರಿಸಿದ್ದರು. ಅಲ್ಲದೆ ಲೈಂಗಿಕ ಕಿರುಕುಳಕ್ಕೀಡಾದ ಚಿತ್ರರಂಗದ ತಮ್ಮ ಆತ್ಮೀಯ ಯುವತಿಯರ ಪೋಸ್ಟ್ಗಳನ್ನೂ ಚಿನ್ಮಯಿ ಟ್ವಿಟರ್ನಲ್ಲಿ ಶೇರ್ ಮಾಡಿದ್ದರು. “ಈ ಬೆಳವಣಿಗೆಗಳಿಂದ ನಾನು ವೃತ್ತಿಬದುಕಿನಲ್ಲಿ ಹಿನ್ನೆಡೆ ಅನುಭವಿಸುವಂತಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ನೂರಾರು ಕೆಟ್ಟ ಕಾಮೆಂಟ್ಗಳು ಬಂದವು. ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ವಿಷಯವನ್ನು ರಾಜಕೀಯಗೊಳಿಸಲಾಯ್ತು” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಕರಣದ ನಂತರ ಅವರು ಸಾರ್ವಜನಿಕವಾಗಿ ಓಡಾಟ ನಡೆಸುವುದೂ ಕಡಿಮೆಯಾಗಿದೆಯಂತೆ. “ಯಾರಿಂದಾದರೂ ಅಪಾಯ ಸಂಭವಿಸಬಹುದು. ರಸ್ತೆಯಲ್ಲಿ ಓಡಾಡುವಾಗ ತುಂಬಾ ಹುಷಾರಾಗಿರು” ಎಂದು ಹಿತೈಷಿಗಳು ಸಲಹೆ ಮಾಡುತ್ತಾರೆ ಎನ್ನುವ ಚಿನ್ಮಯಿ ಚಿತ್ರರಂಗದಲ್ಲಿನ ಪುರುಷ ಪ್ರಧಾನ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ. “ಇಲ್ಲಿ ಮಹಿಳೆ ಸತಿ ಸಾವಿತ್ರಿಯಂತೆ ಇರಬೇಕೆಂದು ಅಪೇಕ್ಷಿಸುತ್ತಾರೆ. ಮೀಟೂ ಆರೋಪ ಮಾಡುವಾಗಲೇ ನನಗೆ ಮುಂದಿನ ಪರಿಣಾಮಗಳ ಬಗ್ಗೆ ಅರಿವಿತ್ತು. ಅಂದುಕೊಂಡಂತೆಯೇ ಕೆಲಸ ಕಡಿಮೆ ಆಗಿದೆ. ದಕ್ಷಿಣದ ಇತರೆ ಭಾಷೆಗಳಲ್ಲೂ ನಾನು ಕೆಲಸ ಮಾಡುತ್ತಿರುವುದರಿಂದ ಬದುಕು ಕಟ್ಟಿಕೊಳ್ಳುವುದು ಕಷ್ಟವೇನೂ ಆಗದು” ಎನ್ನುತ್ತಾರೆ ಚಿನ್ಮಯಿ.
#