ಕನ್ನಡ ಚಿತ್ರರಂಗದಲ್ಲಿ ಈಗ ಅತಿ ಹೆಚ್ಚು ಸಿನಿಮಾಗಳನ್ನು ಒಪ್ಪಿಕೊಂಡು ತುಂಬಾ ಬ್ಯುಸಿ ಇರೋ ಹೀರೋ ಯಾರು ಗೊತ್ತಾ? ಅದು ಚಿರಂಜೀವಿ ಸರ್ಜಾ. ಮೇಘನಾ ರಾಜ್ ಅವರನ್ನು ಮದುವೆಯಾದ ಮೇಲೆ ಚಿರಂಜೀವಿ ಸರ್ಜಾ ನಸೀಬೇ ಬದಲಾಗಿ ಹೋಗಿದೆ. ಚಿರು ಕೈಲಿ ಏನಿಲ್ಲವೆಂದರೂ ಎರಡು ವರ್ಷಕ್ಕಾಗುವಷ್ಟು ಕನಿಷ್ಠ ಹತ್ತು ಸಿನಿಮಾಗಳಿವೆ. ರಾಜ ಮಾರ್ತಾಂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸಿಂಗ ರಿಲೀಸಿಗೆ ರೆಡಿಯಾಗಿದೆ. ಆಧ್ಯ, ಜುಗಾರಿ ಕ್ರಾಸ್, ಖಾಕಿ, ರಣಮ್ ಸಿನಿಮಾಗಳು ಚಿತ್ರೀಕರಣ ಇತ್ಯಾದಿ ಹಂತದಲ್ಲಿವೆ. ಈ ನಡುವೆ ಸದ್ದಿಲ್ಲದೆ ಶಿವತೇಜಸ್ ಅವರ ಮತ್ತೊಂದು ಸಿನಿಮಾ ಕೂಡಾ ಮುಹೂರ್ತ ಆಚರಿಸಿಕೊಂಡಿದೆ.
ಈ ಹಿಂದೆ ಮಳೆ, ಧೈರ್ಯಂ ಮತ್ತು ಲೌಡ್ ಸ್ಪೀಕರ್ ಸಿನಿಮಾಗಳನ್ನು ನಿರ್ದೇಶಿಸಿದ್ದವರು ಶಿವತೇಜಸ್. ಇವರು ಪಕ್ಕ ಕಮರ್ಷಿಯಲ್ ಫಾರ್ಮುಲಾಗಳನ್ನು ಬಳಸಿ ಸಿನಿಮಾ ಮಾಡುವವರು. ಒಂದು ಮೂಲದ ಪ್ರಕಾರ ಇನ್ನೂ ಹೆಸರಿಡದ ಈ ಸಿನಿಮಾ ಚಿರು ಸರ್ಜಾ ವೃತ್ತಿ ಬದುಕಿಗೆ ದೊಡ್ಡ ಬ್ರೇಕ್ ನೀಡಲಿದೆಯಂತೆ. ಯಾಕೆಂದರೆ ಎಲ್ಲ ಥರದ ಪ್ರೇಕ್ಷಕರು ಮೆಚ್ಚುವಂಥಾ ಸಬ್ಜೆಕ್ಟ್ ಇದಾಗಿದೆಯಂತೆ. ಇದಾದ ನಂತರ ಅನಿಲ್ ಮಂಡ್ಯ ನಿರ್ದೇಶನದ ಸಿನಿಮಾವೊಂದು ಕೂಡಾ ಇದೇ ಚಿರು ನಟನೆಯಲ್ಲಿ ಆರಂಭವಾಗಲಿದೆ. ಆ ಸಿನಿಮಾ ಕೂಡಾ ಪಕ್ಕಾ ಆ್ಯಕ್ಷನ್ ಮತ್ತು ಮಾಸ್ ಎಲಿಮೆಂಟುಗಳನ್ನು ಹೊಂದಿದೆಯಂತೆ. ಇವೆಲ್ಲವನ್ನೂ ನೋಡಿದರೆ ಮುಂದಿನ ಎರಡು ವರ್ಷಗಳಲ್ಲಿ ಚಿರು ಕೂಡಾ ಟಾಪ್ 5 ಸಾಲಿನಲ್ಲಿ ಬಂದು ನಿಲ್ಲೋ ಸಾಧ್ಯತೆ ಗೋಚರಿಸುತ್ತಿದೆ. ಎಲ್ಲಾ ಮದುವೆಯಿಂದ ಒಲಿದ ಲಕ್ಕು ಅನ್ನುತ್ತಿದೆ ಗಾಂಧಿನಗರ. ಆದರೆ ಶ್ರಮ ಹಾಕಬೇಕಿರೋದು ಮಾತ್ರ ಚಿರು ಅನ್ನೋದು ಹಗಲು ಸತ್ಯ!
No Comment! Be the first one.