ಯಾರದ್ದೇ ಬದುಕಿನ ದುಃಖ, ಕಣ್ಣೀರು ಮಾರಾಟದ ಸರಕಾಗಬಾರದು. ಹೆಸರು ಮಾಡಿದವರು ಸತ್ತರೆ ಟೀವಿ ಮೀಡಿಯಾಗಳು ಅತಿ ಎನಿಸುವ ಮಟ್ಟಕ್ಕೆ ಅದನ್ನು ಪ್ರಸಾರ ಮಾಡುತ್ತವೆ. ಕಳೆದ ವಾರ ಚಿರಂಜೀವಿ ಸರ್ಜಾ ತೀರಿಕೊಂಡಾಗಲೂ ಕೆಲವು ಟಿವಿ ಮಾಧ್ಯಮ ಅದನ್ನೇ ಮಾಡಿತು. ಚಿರು ಕುಟುಂಬದವರು ಗೇಟು ಹಾಕಿ ಸಾಕು ಹೋಗಿ ಎನ್ನುವ ತನಕವೂ ಸಾವು, ನೋವಿನ ವಿಚಾರಗಳನ್ನು ಬಿತ್ತರಿಸಿತು. ಅಂತ್ಯಸಂಸ್ಕಾರದ ಮಾರನೇ ದಿನ ಹಾಲುತುಪ್ಪದ ಕಾರ್ಯವನ್ನೂ ಲೈವ್ ಟೆಲಿಕಾಸ್ಟ್ ಮಾಡಲು ಕ್ಯಾಮೆರಾಗಳು ಸಾಲುಗಟ್ಟಿ ನಿಂತಿದ್ದವು. ಇದನ್ನೆಲ್ಲಾ ನ್ಯೂಸ್ ಮಾಡೋದು ಬೇಡ ಹೋಗಿ ಅಂತಾ ಚಿರು ಫ್ಯಾಮಿಲಿ ಸದಸ್ಯರು ವರದಿಗಾರರನ್ನು ಹೊರಹಾಕಿದ್ದರು. ತೀರಾ ಈ ಮಟ್ಟಕ್ಕೆ ನಡೆದುಕೊಳ್ಳುವುದು ಯಾವ ವಾಹಿನಿಯವರಿಗಾದರೂ ಘನತೆಯಲ್ಲ. ನ್ಯೂಸ್ ಚಾನೆಲ್ಲುಗಳು ತಿಥಿ ಕಾರ್ಯವನ್ನೂ ನೇರಪ್ರಸಾರದ ಸರಕಾಗಿಸಿಕೊಳ್ಳುತ್ತವೋ ಎನ್ನುವ ಭಯ ಸರ್ಜಾ ಫ್ಯಾಮಿಲಿಯನ್ನು ಕಾಡುತ್ತಿದೆ. ಹೀಗಾಗಿ, ಮೊದಲೇ ಎಚ್ಚೆತ್ತುಕೊಂಡ ಅರ್ಜುನ್ ಸರ್ಜಾ ಪತ್ರವೊಂದನ್ನು ರವಾನಿಸಿದ್ದಾರೆ.
ಮಾಧ್ಯಮದ ಮಿತ್ರರಿಗೆ ನಮಸ್ಕಾರ, ವಿಧಿಯಾಟದ ಮುಂದೆ ಏನು ಇಲ್ಲ ಎಂಬುದು ನಮ್ಮ ಚಿರಂಜೀವಿ ಸರ್ಜಾ ಅಕಾಲಿಕ ಮರಣದಿಂದ ಮತ್ತಷ್ಟು ಮನದಟ್ಟಾಗಿದೆ.. ನಮ್ಮ ಕುಟುಂಬದಲ್ಲಿ ಈ ತರಹದ ಒಂದು ಸಂದರ್ಭ ಬರುತ್ತದೆ ಎಂದು ಕನಸಿನಲ್ಲೂ ಎಣಿಸಿರಲಿಲ್ಲ… ನಮ್ಮ ಸುಖ ಹಾಗೂ ಕಷ್ಟ ಎರಡರಲ್ಲಿ ತಾವು ಮಾಧ್ಯಮದವರು ನಮ್ಮ ಜೊತೆಗಿದ್ದೀರಿ… ಕನಕಪುರ ರಸ್ತೆಯ ಬೃಂದಾವನ ಫಾರಂ ಹೌಸ್ನಲ್ಲಿ ಚಿರಂಜೀವಿ ಸರ್ಜಾ ಹನ್ನೊಂದನೇ ದಿನದ ಪುಣ್ಯತಿಥಿಯನ್ನು ಹಮ್ಮಿಕೊಂಡಿದ್ದೇವೆ. ಅಂದು ತಾವು ಆಗಮಿಸಬೇಕೆಂದು ವಿನಂತಿ.. ನಾವು, ನೀವು ಸೇರಿ ಚಿರು ಆತ್ಮಕ್ಕೆ ಸದ್ಗತಿ ದೊರೆಯಲೆಂದು ಪ್ರಾರ್ಥಿಸೋಣ… ಇಂತಿ ನಿಮ್ಮ ಅರ್ಜುನ್ ಸರ್ಜಾ. ಚಿಕ್ಕ ಮನವಿ – ಇದು ಕುಟುಂಬದ ಖಾಸಗಿ ಕಾರ್ಯಕ್ರಮ ಆಗಿರುವುದರಿಂದ ಕ್ಯಾಮೆರಾಗಳಿಗೆ ಪ್ರವೇಶವಿರುವುದಿಲ್ಲ.. ದಯವಿಟ್ಟು ಸಹಕರಿಸಿ..
ಕ್ಯಾಮೆರಾಗಳಿಗೆ ಪ್ರವೇಶವಿಲ್ಲ ಅನ್ನಿಸಿಕೊಳ್ಳುವ ಮಟ್ಟಿಗೆ ಯಾಕೆ ವಾಹಿನಿಗಳು ಮರ್ಯಾದೆ ಕೆಡಿಸಿಕೊಳ್ಳುತ್ತವೋ ಗೊತ್ತಿಲ್ಲ. ಇನ್ನು ಕೆಲವು ಫೇಕ್ ನ್ಯೂಸ್ ಹರಡಿಸುವ ಪೇಜುಗಳು ಬಾಯಿಗೆ ಬಂದಿದ್ದನ್ನೆಲ್ಲಾ ಪೋಸ್ಟ್ ಮಾಡಿ ʻಶಾಕ್ʼ ಟ್ರೀಟ್ಮೆಂಟ್ ಕೊಡುತ್ತಿವೆ. ಚಿರಂಜೀವಿಯಾಗಿ ಬದುಕಿ, ಬಾಳಬೇಕಿದ್ದ ಮನೆಮಗ ಅರ್ಧದಲ್ಲೇ ಎದ್ದು ನಡೆದಿದ್ದಾನೆ. ಅವರ ಮನೆಯವರಿಗೆ ಅಗಾಧ ನೋವಿರುತ್ತದೆ. ನೊಂದ ಕುಟುಂಬದವರು ಯಾತನೆ, ಸಂಕಟವನ್ನು ಹೊರಹಾಕಿ, ನಿರುಮ್ಮಳವಾಗಲೂ ಬಿಡದಿದ್ದರೆ ಹೇಗೆ?