ಥ್ರಿಲ್ಲರ್ ಕಥಾಹಂದರದ ಚಿತ್ರಗಳು ಬರುತ್ತಲೇ ಇರುತ್ತವೆ. ಆದರೆ ಈವರೆಗೂ ಯಾರೂ ಮುಟ್ಟದ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡು ತೀರಾ ಹೊಸದೆನಿಸುವ ನಿರೂಪಣೆಯ ಮೂಲಕ ರೂಪುಗೊಂಡು ಪರಿಣಾಮಕಾರಿ ಎನಿಸಿಕೊಂಡಿರುವ ಸಿನಿಮಾ ಚಿತ್ರಕಥಾ.
ಯಾವುದೇ ಒಂದು ಕಲಾಕೃತಿ ನೋಡುಗರಿಗೆ ಸುಂದರವೆನಿಸುವ ವಸ್ತುವಷ್ಟೇ. ಆದರೆ ಆ ಕಲಾಕೃತಿಯನ್ನು ಸೃಷ್ಟಿಸಿದವನ ಪಾಲಿಗೆ ಅದೊಂದು ಜೀವ. ಆತ ಅದನ್ನು ಮತ್ತಷ್ಟು ಸೊಗಸಾಗಿಸಲೂಬಹುದು ಅಥವಾ ಮುಕ್ಕಾಗಿಸಲೂಬಹುದು. ಅದು ಕಲಾವಿದನ ಮನಸ್ಥಿತಿಯ ಮೇಲೆ ಅವಲಂಭಿಸಿರುತ್ತದೆ. ಚಿತ್ರಕಥಾ ಚಿತ್ರ ಕೂಡಾ ಕಲಾವಿದ ಮತ್ತು ಕಲೆಯ ಕುರಿತಾದ, ಭ್ರಮೆ ಮತ್ತು ವಾಸ್ತವಕ್ಕೆ ಸಂಬಂಧಿಸಿದ ಸಿನಿಮಾ.

ತಮ್ಮದೇ ಆದ ಒತ್ತಡಗಳನ್ನು ನಿವಾರಿಸಿಕೊಳ್ಳಲು ಐವರು ಸ್ನೇಹಿತರು ಪ್ರವಾಸ ಹೋಗುತ್ತಾರೆ. ಅಲ್ಲಿ ಊಹಿಸಲಸಾಧ್ಯ ಘಟನೆಗಳು ನಡೆಯುತ್ತವೆ. ಅಘೋರಿಯೊಬ್ಬನ ಆಗಮನವಾಗುತ್ತದೆ. ಆ ಅಘೋರಿಗೂ ಈ ಹುಡುಗರಿಗೂ ಏನು ಸಂಬಂಧ ಅನ್ನೋದನ್ನು ತಿಳಿಯಬೇಕೆಂದರೆ ಇಡೀ ಸಿನಿಮಾವನ್ನೊಮ್ಮೆ ನೋಡಬೇಕು. ಮೊದಲ ಭಾಗ ಒಂಚೂರು ವೇಗವಾಗಿದ್ದಿದ್ದರೆ ‘ಚಿತ್ರ’ದ ‘ಕಥೆ’ ಬೇರೆಯದ್ದೇ ಮಟ್ಟಕ್ಕೆ ನಿಲ್ಲುತ್ತಿತ್ತು. ಇದು ಥ್ರಿಲ್ಲರ್ ಜಾನರಿನ ಸಿನಿಮಾ ಆಗಿರುವುದರಿಂದಲೋ ಏನೋ ಆರಂಭದಲ್ಲಿ ನಿಧಾನಿಸಿ ದೃಶ್ಯಕಳೆಯುತ್ತಿದ್ದಂತೇ ವೇಗ ಹೆಚ್ಚಿಸಿದ್ದಾರೆ. ಬಹುಶಃ ಅದು ನಿರ್ದೇಶಕರ ತಂತ್ರಗಾರಿಕೆ ಇದ್ದರೂ ಇರಬಹುದು.

ಇಡೀ ಸಿನಿಮಾ ಹೊಸ ಬಗೆಯದ್ದಾಗಿದ್ದರೂ ಬಿ.ಜಯಶ್ರೀ, ಸುಧಾರಾಣಿ, ದಿಲೀಪ್ ರಾಜ್ ರಂಥ ಪಳಗಿದ ಕಲಾವಿದರ ದಂಡೇ ಇರುವುದರಿಂದ ಸಲೀಸಾಗಿ ನೋಡಿಸಿಕೊಂಡು ಹೋಗುವಲ್ಲಿಯೂ ಚಿತ್ರಕಥಾ ಗೆದ್ದಿದೆ. ಚಿತ್ರಕಲಾವಿದ ಉತ್ತಮ್ ವರ್ಮ ಆಗಿ ದಿಲೀಪ್ ರಾಜ್ ಅಮೋಘವಾಗಿ ನಟಿಸಿದ್ದಾರೆ. ಅವರ ಮಗನಾಗಿ ನಟಿಸಿರುವ ಸುಜಿತ್ ಕೂಡಾ ಪ್ರತಿಭಾವಂತ ಅನ್ನೋದು ಸಾಬೀತಾಗಿದೆ. ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಕೂಡಾ ಚಿತ್ರಕ್ಕೆ ಪೂರಕವಾಗಿದೆ. ಥ್ರಿಲ್ಲರ್ ಸಿನಿಮಾಗಳನ್ನು ಬಯಸುವ ಪ್ರೇಕ್ಷಕರಿಗಂತೂ ಇದು ಹೇಳಿಮಾಡಿಸಿದ ಚಿತ್ರವಾಗಿದೆ. ನಿರ್ದೇಶಕ ಯಶಸ್ವಿ ಬಾಲಾದಿತ್ಯ ಭಿನ್ನ ಕತೆಗಳಿಗೂ ಜೀವ ಕೊಡುವ ಛಾತಿ ಹೊಂದಿದ್ದಾರೆ ಅನ್ನೋದು ಚಿತ್ರಕಥಾವನ್ನು ನೋಡಿದ ಯಾರಿಗೇ ಆದರೂ ಅನ್ನಿಸದೇ ಇರಲಾರದು.

CG ARUN

ಸಮೀರಾ ಮನೆಗೆ ಮಹಾಲಕ್ಷ್ಮಿ ಆಗಮನ!

Previous article

ಶಿವಣ್ಣ ಅವರನ್ನು ಭೇಟಿ ಮಾಡಿದ ಅನಿಲ್ ಕುಂಬ್ಳೆ!

Next article

You may also like

Comments

Leave a reply

Your email address will not be published. Required fields are marked *