ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ, ತರುಣ್ ಸುಧೀರ್ ದರ್ಶನ್ ಅವರಿಗಾಗಿ ನಿರ್ದೇಶಿಸುತ್ತಿರುವ ಸಿನಿಮಾ ಡಿ-೫೬. ಈ ಸಿನಿಮಾದ ಶೀರ್ಷಿಕೆ ಏನಾಗಿರಬಹುದು ಅನ್ನೋದು ಸದ್ಯ ಎಲ್ಲರ ಮುಂದಿರುವ ಕುತೂಹಲ. ಕಾಟೇರಿ ಎನ್ನುವ ಟೈಟಲ್ ಇಡಲಾಗುತ್ತದೆ ಅಂತಾ ಎಲ್ಲ ಕಡೆ ಪುಕಾರಾಗಿದೆ. ಆದರೆ ಈ ಹೆಸರಿನ ಬಗ್ಗೆ ದರ್ಶನ್ ಅಭಿಮಾನಿ ವಲಯದಲ್ಲಿ ಅಂತಾ ಒಲವು ಕಾಣುತ್ತಿಲ್ಲ.
ಇನ್ನು ಈ ಸಿನಿಮಾದಲ್ಲಿ ದರ್ಶನ್ ʻಚೌಡಯ್ಯʼನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಸಿನಿಮಾಗೆ ʻಚೌಡಯ್ಯʼ ಎನ್ನುವ ಹೆಸರೇ ಇಡಬಹುದು ಅಂತಾ ಚಿತ್ರತಂಡ ತೀರ್ಮಾನಿಸಿತ್ತಂತೆ. ಈ ನಡುವೆ ಹಿರಿಯ ನಿರ್ದೇಶಕ ಎನ್. ಓಂ ಪ್ರಕಾಶ್ ಹೊಸ ಸಿನಿಮಾವೊಂದನ್ನು ಆರಂಭಿಸಿದ್ದು, ಆ ಚಿತ್ರಕ್ಕೆ ʻಚೌಡʼ ಅಂತಾ ಹೆಸರಿಡಲಾಗಿದೆ. ಅದಾಗಲೇ ಪೋಸ್ಟರ್ ಕೂಡಾ ಹೊರಬಂದಿದೆ.
ಸವೆನ್ ಹಿಲ್ಸ್ ಸ್ಟುಡಿಯೋ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ʻನಮ್ಮ ಜಗದೀಶ್ʼ ಎನ್ನುವ ಹೊಸ ಪ್ರತಿಭೆ ನಾಯಕನಟನಾಗಿ ನಟಿಸುತ್ತಿದ್ದಾರೆ. ಎಂ.ಎಸ್. ರಮೇಶ್ ಸಂಭಾಷಣೆ, ರಮೇಶ್ ಕುಮಾರ್ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ. ಅನಿಲ್ ಯಾದವ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾ ಕೂಡಾ ಇನ್ನೊಂದು ತಿಂಗಳಲ್ಲಿ ಚಿತ್ರೀಕರಣಕ್ಕೆ ತೆರಳುತ್ತಿದೆ. ಏಕಕಾಲದಲ್ಲಿ ಹೆಚ್ಚೂ ಕಮ್ಮಿ ಒಂದೇ ಶೀರ್ಷಿಕೆಯ ಸಿನಿಮಾ ತಯಾರಾಗಿ ತೆರೆಗೆ ಬಂದರೆ ಗೊಂದಲವಿದ್ದೇ ಇರುತ್ತದೆ. ʻಚೌಡʼ ಸಿನಿಮಾದವರನ್ನು ಒಪ್ಪಿಸಿ ಬೇರೆ ಶೀರ್ಷಿಕೆ ಇಡುವಂತೆ ವಿನಂತಿಸುವುದು ಅಥವಾ ತಮ್ಮ ಸಿನಿಮಾಗೆ ಬೇರೆ ಹೆಸರಿಡೋದು ಬಿಟ್ಟರೆ ಡಿ.-೫೬ ತಂಡದ ಮುಂದೆ ಬೇರೆ ದಾರಿಯಿಲ್ಲ. ಯಾವುದು ಸಾಧ್ಯವಾಗುತ್ತದೋ, ʻಚೌಡʼ ಯಾರಿಗೆ ಒಲಿಯುತ್ತಾನೋ ಸದ್ಯಕ್ಕೆ ಗೊತ್ತಿಲ್ಲ.
ಒಂದು ಕಾಲದಕ್ಕೆ ದರ್ಶನ್ ಅವರಿಗೆ ಬ್ಯಾಕ್ ಟು ಬ್ಯಾಕ್ ಸಿನಿಮಾ ನಿರ್ದೇಶಿಸಿ, ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದವರು ಓಂ ಪ್ರಕಾಶ್ ರಾವ್. ಈಗ ಅದೇ ದರ್ಶನ್ ಅವರ ಸಿನಿಮಾಗೆ ಓಂ ಪ್ರಕಾಶ್ ನಿರ್ದೇಶನದ ಚಿತ್ರವೊಂದು ಅಡ್ಡಬಂದಿದೆ. ಕಾಲ ಇನ್ನೂ ಏನೇನು ಮಾಡಿಸುತ್ತದೋ?!
No Comment! Be the first one.