ಈ ಹಿಂದೆ ತುಳು ಭಾಷೆಯ ಗೋಲ್ಮಾಲ್ ಎನ್ನುವ ಸಿನಿಮಾದಲ್ಲಿ ಪೃಥ್ವಿ ಅಂಬಾರ್ ಮತ್ತು ಸಾಯಿಕುಮಾರ್ ಒಟ್ಟಾಗಿ ಅಭಿನಯಿಸಿದ್ದರು. ಆಗಿನ್ನೂ ಪೃಥ್ವಿ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿರಲೇ ಇಲ್ಲ. ಧಾರಾವಾಹಿಗಳಲ್ಲಷ್ಟೇ ಬ್ಯುಸಿಯಾಗಿದ್ದರು. ದಿಯಾ ಚಿತ್ರವಿನ್ನೂ ಚಿತ್ರೀಕರಣದ ಹಂತದಲ್ಲಿತ್ತು. ಇವತ್ತಿಗೆ ಪೃಥ್ವಿ ಅಂಬಾರ್ ಕನ್ನಡದ ಭರವಸೆಯ ನಟ. ಕೈತುಂಬಾ ಅವಕಾಶಗಳನ್ನು ಹೊಂದಿರುವ ಹೀರೋ. ಈ ಹೊತ್ತಿನಲ್ಲಿ ಮತ್ತೆ ಪೃಥ್ವಿ ಮತ್ತು ಸಾಯಿ ಕುಮಾರ್ ಒಂದಾಗಿ ಅಭಿನಯಿಸುತ್ತಿದ್ದಾರೆ. ಅದು ಬಹುಭಾಷೆಯ ಚೌಕಿದಾರ್…!
ಯಾರೂ ಮುಟ್ಟದ ಕಥಾವಸ್ತುಗಳನ್ನು ಕೈಗೆತ್ತಿಕೊಂಡು, ಅದನ್ನು ಪರಿಣಾಮಕಾರಿಯಾಗಿ ಚಿತ್ರಿಸುವ ನಿರ್ದೇಶಕ ಚಂದ್ರಶೇಖರ ಬಂಡಿಯಪ್ಪ. ಈ ಹಿಂದೆ ಇವರು ನಿರ್ದೇಶಿಸಿದ ರಥಾವರ, ತಾರಕಾಸುರ ಸಿನಿಮಾಗಳೆಲ್ಲಾ ತೀರಾ ಅಪರೂಪದ ಕಥಾನಕಗಳನ್ನು ಹೊಂದಿತ್ತು. ಈ ಸಲ ಬಂಡಿಯಪ್ಪನವರು ತಮ್ಮ ಚಿತ್ರಕ್ಕೆ ಪೃಥ್ವಿಯನ್ನು ಆಯ್ಕೆ ಮಾಡಿಕೊಂಡು, ಅನೌನ್ಸ್ ಮಾಡಿದಾಗ ಜನ ಆಶ್ಚರ್ಯಗೊಂಡಿದ್ದು ನಿಜ. ಲವರ್ ಬಾಯ್ ಜಾನರಿನ ಸಿನಿಮಾಗಳಲ್ಲೇ ಹೆಚ್ಚು ಕಾಣಿಸುವ ಪೃಥ್ವಿ ಮತ್ತು ಪಕ್ಕಾ ಕಮರ್ಷಿಯಲ್ ಫಾರ್ಮುಲಾದ ಚಂದ್ರಶೇಖರ್ ಯಾವ ಕಾರಣಕ್ಕೆ ಒಂದಾದರು ಅನ್ನೋದು ಎಲ್ಲರ ಕುತೂಹಲವಾಗಿತ್ತು. ಸದ್ಯ ಶೂಟಿಂಗ್ ಸ್ಪಾಟ್ನಿಂದ ಬರುತ್ತಿರುವ ಮಾಹಿತಿಗಳ ಪ್ರಕಾರ ನಿಜಕ್ಕೂ ಈ ಸಲ ಪೃಥ್ವಿಗೆ ಕಮರ್ಷಿಯಲ್ ಓಪನಿಂಗ್ ಸಿಗೋದು ಗ್ಯಾರೆಂಟಿ ಅನ್ನುವಂತಿದೆ. ಇದು ಮಾತ್ರವಲ್ಲದೆ, ನಟ ಸಾಯಿ ಕುಮಾರ್ ಅದ್ಭುತವಾದ ಪಾತ್ರವೊಂದರಲ್ಲಿ ನಟಿಸಿದ್ದಾರಂತೆ. ಎಂಥವರನ್ನೂ ಭಾವುಕತೆಗೆ ದೂಡುವ ಪಾತ್ರ ಅವರದ್ದಂತೆ. ಶೂಟಿಂಗ್ ಟೈಮಲ್ಲಿ ಸುತ್ತ ನೆರೆದಿದ್ದವರ ಕಣ್ಣುಗಳಲ್ಲಿ ನೀರುಕ್ಕುವಂತೆ ಸಾಯಿಕುಮಾರ್ ಅಭಿನಯಿಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಒಂದು ಕಾಲದಲ್ಲಿ ತಮ್ಮ ಡೈಲಾಗುಗಳಿಂದಲೇ ಪ್ರೇಕ್ಷಕರನ್ನು ಬೆಚ್ಚಿಬೀಳುಸುತ್ತಿದ್ದವರು ಸಾಯಿ ಕುಮಾರ್. ಈ ಚಿತ್ರದಲ್ಲಿ ಮಾತುಗಳು ಕಡಿಮೆ ಇದ್ದರೂ ತಮ್ಮ ಅಮೋಘ ಅಭಿನಯದಿಂದಲೇ ಎಲ್ಲರನ್ನೂ ಸೆಳೆಯಲಿದ್ದಾರಂತೆ. ಇದರ ಜೊತೆಗೆ ನಟ ಧರ್ಮ ಈ ಹಿಂದೆ ಎಲ್ಲೂ ಕಾಣಿಸಿಕೊಳ್ಳದ ರೀತಿಯಲ್ಲಿ ಅಬ್ಬರಿಸಲಿದ್ದಾರಂತೆ!
ಸಿನಿಮಾವೊಂದು ಚಿತ್ರೀಕರಣದ ಹಂತದಲ್ಲಿರುವಾಗಲೇ ಈ ರೀತಿಯ ಪಾಸಿಟೀವ್ ವಿಚಾರಗಳು ಹೊರಬರೋದು ಖಂಡಿತಾ ಖುಷಿ ಕೊಡುವಂಥದ್ದು. ಚಂದ್ರಶೇಖರ ಬಂಡಿಯಪ್ಪ ಬರೀ ಸಿನಿಮಾ ಮಾಡೋದು ಮಾತ್ರವಲ್ಲದೆ, ಅದನ್ನು ಉತ್ತಮ ಪ್ರಚಾರದ ಮೂಲಕ ಪ್ರೇಕ್ಷಕರಿಗೆ ತಲುಪಿಸುತ್ತಾರೆ. ಈಗಾಗಲೇ ಮೂವತ್ತಕ್ಕೂ ಹೆಚ್ಚು ದಿನಗಳ ಚಿತ್ರೀಕರಣ ನಡೆಸಿರುವ ʻಚೌಕಿದಾರ್ʼ ತಂಡ ಆದಷ್ಟು ಬೇಗ ಫಸ್ಟ್ ಲುಕ್ ಇತ್ಯಾದಿಗಳನ್ನು ಹೊರಬಿಡಲಿ. ಆ ಮೂಲಕ ಸದ್ಯ ಚೇತೋಹಾರಿಯಾಗುತ್ತಿರುವ ಕನ್ನಡ ಚಿತ್ರರಂಗ ಮತ್ತಷ್ಟು ಕಳೆಕಟ್ಟುವಂತೆ ಮಾಡಲಿ.
ತೀರಾ ಸಣ್ಣ ವಯಸ್ಸಿಗೇ ಶಿಕ್ಷಣ ಕ್ಷೇತ್ರದಲ್ಲಿ ಒಂದೊಳ್ಳೆ ಹೆಸರು ಮಾಡಿರುವ ಕಲ್ಲಹಳ್ಳಿ ಚಂದ್ರಶೇಖರ್ ತಮ್ಮದೇ ವಿದ್ಯಾಶೇಖರ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ‘ಚೌಕಿದಾರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಚಿನ್ ಬಸ್ರೂರು ಸಂಗೀತ ನಿರ್ದೇಶನ, ವಿ. ನಾಗೇಂದ್ರ ಪ್ರಸಾದ್, ಪ್ರಮೋದ್ ಮರವಂತೆ ಸಾಹಿತ್ಯ ಚಿತ್ರಕ್ಕಿದೆ. ʻಚೌಕಿದಾರ್’ ಬಹುಭಾಷೆಯಲ್ಲಿ ಮೂಡಿ ಬರುತ್ತಿದ್ದು, ಪೃಥ್ವಿ ಅಂಬಾರ್ ಜೊತೆಗೆ ಧನ್ಯಾ ರಾಮ್ ಕುಮಾರ್ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
No Comment! Be the first one.