ದುಡ್ಡಿನ ಮುಂದೆ ಸ್ವಾಭಿಮಾನ, ಆತ್ಮಸಾಕ್ಷಿ ಎಲ್ಲವೂ ಗೌಣ ಎನ್ನುವುದು ಬಾಲಿವುಡ್ನ ಕೆಲವು ತಾರೆಯರ ವಿಚಾರದಲ್ಲಿ ಸಾಬೀತಾಗಿದೆ. ಜನಪ್ರಿಯ ಮೀಡಿಯಾ ಕೋಬ್ರಾ ಪೋಸ್ಟ್ ನಡೆಸಿದ ಸ್ಟಿಂಗ್ ಆಪರೇಷನ್ನಲ್ಲಿ ೩೦ಕ್ಕೂ ಹೆಚ್ಚು ಬಾಲಿವುಡ್ ಮಂದಿ ಬೆತ್ತಲಾಗಿದ್ದಾರೆ. ದುಡ್ಡು ಕೊಟ್ಟರೆ ಯಾವುದೇ ಪಕ್ಷದ ಪರ ತಾವು ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಲು ಸಿದ್ಧ ಎನ್ನುತ್ತಾರವರು. ತಮ್ಮ ಜನಪ್ರಿಯತೆಯನ್ನು ರಾಜಕಾರಣಿಗಳ ಪ್ರಚಾರಕ್ಕಾಗಿ ಮೀಸಲಿಡಲು ಸಿದ್ಧವಿರುವ ಇವರು ಇದಕ್ಕಾಗಿ ದೊಡ್ಡ ಮೊತ್ತದ ಹಣ ಪಡೆಯಲು ಒಪ್ಪಿದ್ದಾರೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಜನರು ಇವರ ರಾಷ್ಟ್ರಪ್ರೇಮವನ್ನು ಪ್ರಶ್ನಿಸುತ್ತಿದ್ದಾರೆ.
ಸನ್ನಿ ಲಿಯೋನ್, ಜಾಕಿ ಶ್ರಾಫ್, ವಿವೇಕ್ ಒಬೆರಾಯ್, ಸೋನು ಸೂದ್, ಅಮಿಶಾ ಪಟೇಲ್, ಶ್ರೇಯಸ್ ತಲ್ಪಾಡೆ, ಶಕ್ತಿ ಕಪೂರ್, ಟಿಸ್ಕಾ ಚೋಪ್ರಾ, ರಾಖಿ ಸಾವಂತ್, ಪಂಕಜ್ ಧೀರ್, ಪುನೀತ್ ಇಸ್ಸಾರ್, ಕೊಯಿನಾ ಮಿತ್ರಾ, ರಾಜ್ಪಾಲ್ ಯಾದವ್, ಮಿನಿಶಾ ಲಂಬಾ, ಮಹಿಮಾ ಚೌಧರಿ, ರೋಹಿತ್ ರಾಯ್, ರಾಹುಲ್ ಭಟ್ ಸೇರಿದಂತೆ ಮತ್ತೆ ಕೆಲವು ನಟ-ನಟಿಯರು ಈ ಪಟ್ಟಿಯಲ್ಲಿದ್ದಾರೆ. ಗಾಯಕರಾದ ಕೈಲಾಶ್ ಖೇರ್, ಅಭಿಜಿತ್ ಭಟ್ಟಾಚಾರ್ಯ, ಬಾಬಾ ಸೆಹ್ಗಲ್, ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರೂ ಹಣ ಕೊಟ್ಟರೆ ಪಕ್ಷಗಳ ಪರ ಪ್ರಚಾರ ನಡೆಸಲು ದುಂಬಾಲು ಬಿದ್ದಿದ್ದಾರೆ.
ಸ್ಟಿಂಗ್ನಲ್ಲಿನ ಬಹುಪಾಲು ತಾರೆಯರು ಆತ್ಮಸಾಕ್ಷಿ ಬಿಟ್ಟು ಮಾತನಾಡಿರುವುದು ವಿಶೇಷ. ವಿದ್ಯಾ ಬಾಲನ್, ಆರ್ಷದ್ ವಾರ್ಸಿ ಸೇರಿದಂತೆ ನಾಲ್ಕೈದು ಮಂದಿಯಷ್ಟೇ ಈ ಆನ್ಲೈನ್ ಕ್ಯಾಂಪೇನ್ ಒಲ್ಲೆ ಎಂದಿದ್ದಾರೆ. ಹಿರಿಯ ನಟ ಜಾಕಿ ಶ್ರಾಫ್ ಮತ್ತೆ ಕೆಲವರು ತಮಗೆ ಕ್ಯಾಶ್ ರೂಪದಲ್ಲೇ ಹಣ ಸಂದಾಯವಾಗಬೇಕೆಂದು ಪಟ್ಟುಹಿಡಿದಿರುವ ವಿಡಿಯೋ ದೃಶ್ಯಗಳು ದಾಖಲಾಗಿವೆ. ಈ ಮೂಲಕ ಅವರು ಬ್ಲ್ಯಾಕ್ ಮನಿಗೆ ಬೇಡಿಕೆ ಇಟ್ಟಂತಾಗಿದೆ. ಸದ್ಯ ಬಾಲಿವುಡ್ನಲ್ಲಿ ಈ ಬಗ್ಗೆ ದೊಡ್ಡ ಚರ್ಚೆಯಾಗುತ್ತಿದ್ದು, ಆಮಿಷಕ್ಕೊಳಗಾದ ತಾರೆಯರು ಮುಜುಗರಕ್ಕೀಡಾಗಿದ್ದಾರೆ.