ಮಾಡಬಾರದ್ದು ಮಾಡಿದರೆ ಆಗಬಾರದ್ದೇ ಆಗುವುದು ಎನ್ನುವ ಮಾತಿದೆಯಲ್ಲಾ? ಅದನ್ನು ಕೊರೋನಾ ವೈರಸ್ಸು ನಿಜ ಅಂತಾ ಇಡೀ ಜಗತ್ತಿಗೇ ಸಾರಿ ಹೇಳಿದೆ. ನಾವೇ ಮಾಡಿಕೊಂಡ ಅನಾಚಾರಗಳು ಇವತ್ತು ನಮ್ಮನ್ನು ಬಲಿ ತೆಗೆದುಕೊಳ್ಳುತ್ತಿದೆ. ಯಾವ ಭೇದವಿಲ್ಲದೆ ಎಲ್ಲರೂ ಒಕ್ಕೊರಲಿನಿಂದ ಕೊರೋನಾ ವೈರಸ್ಸಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಊರೆಲ್ಲಾ ಹೋದಮೇಲೆ ಊರ ಬಾಗಿಲು ಮುಚ್ಚಿದರು ಅನ್ನುವಂತೆ ಅಗಣಿತ ನಷ್ಟದ ನಂತರ ಎಚ್ಚರಗೊಳ್ಳುತ್ತಿದ್ದಾರೆ. ಯಾಕೆ ಹೀಗೆಲ್ಲಾ ನಡೆದುಹೋಯ್ತು? ಏನೆಲ್ಲಾ ಆಗಬಾರದಿತ್ತು? ನಂಬಿದ ದೇವರು ಎಲ್ಲಿದ್ದಾನೆ? ಅನ್ನೋದಕ್ಕೆ ಉತ್ತರ ನೀಡುವಂತಾ ಹಾಡೊಂದು ರಿಲೀಸಾಗಿದೆ…
ಕೊರೋನಾ ಯಾಕೆ ಕಂಟಕವಾಗಿ ಇಡೀ ಜಗತ್ತಿಗೆ ಕಾರಣವಾಯಿತು? ಯಾವುದೇ ಅನಾಹುತಗಳ ಹಿಂದೆ ಮನುಷ್ಯನ ಕೈವಾಡವಿದ್ದೇ ಇರುತ್ತದೆ. ನೈಸರ್ಗಿಕ ಪರಿಸರವನ್ನು ಅದರ ಪಾಡಿಗೆ ಬಿಡದೆ ಯುಗಯುಗಗಳಿಂದ ಮಾನವ ಜೀವಿ ಏನೆಲ್ಲಾ ಯಡವಟ್ಟುಗಳನ್ನು ಮಾಡುತ್ತಾ ಬರುತ್ತಿದ್ದಾನೆ? ತನ್ನ ಲಾಭ, ಸ್ವಾರ್ಥಕ್ಕಾಗಿ ಪ್ರಾಣಿ, ಪಕ್ಷಿ, ಮರ, ಗಿಡ, ನೀರು, ಗಾಳಿಗಳನ್ನೆಲ್ಲಾ ಬೇಕು ಬೇಕಾದಂತೆ ಬಳಸಿಕೊಳ್ಳುತ್ತಿದ್ದಾನೆ ಅಂತಾ ತೋರಿಸುವ ಅನಿಮೇಟೆಡ್ ವಿಡಿಯೋವೊಂದನ್ನು ಯುವಕರ ತಂಡ ಹೊರತಂದಿದೆ. https://youtu.be/I9vggcJpz3I
ಮನಮುಟ್ಟುವ ಸಾಲುಗಳನ್ನು ಹೊಂದಿರುವ ಹಾಡಿನ ಹಿನ್ನೆಲೆಯಲ್ಲಿ ಅನಿಮೇಟೆಡ್ ವಿಡಿಯೋ ಹೊಂದಿಸಲಾಗಿದೆ. ಸರ್ವ ಜೀವಜಂತುಗಳಿಗೆ ಜೀವ ನೀ ಕೊಟ್ಟೆ, ಎಲ್ಲ ಗೆಲ್ಲುವ ಹಠವ ಯಾಕೆ ನೀನಿಟ್ಟೆ? ದೇವರೇ ನೀನೆಲ್ಲಿ ಹೋಗಿರುವೆ?… ದೇವರೇ ನೀನೆಲ್ಲಿ ಅವಿತಿರುವೆ? ಹೀಗೆ ಶುರುವಾಗುವ ಹಾಡಿನ ಪ್ರತಿ ಪದವೂ ಮನುಷ್ಯನ ಪ್ರಾಯಶ್ಚಿತ್ತ ನುಡಿಗಳಾಗಿ ಕಾಡುವಂತಿದೆ. ವಿನಯ್ ಪ್ರಸಾದ್ ಮತ್ತು ದಯಾನಂದ್ – ಇಬ್ಬರೂ ಸೇರಿ ರೂಪಿಸಿರುವ ಈ ವಿಡಿಯೋಗೆ ಕೊರೋನಾ or ಕರ್ಮ ಅಂತಾ ಹೆಸರಿಟ್ಟಿದ್ದಾರೆ. ಈ ಹಾಡಿನ ಒಟ್ಟೂ ಸಾರಾಂಶ `ಮಾಡಿದ್ದುಣ್ಣೋ ಮಾರಾಯ’ ಎನ್ನುವಂತಿದೆ. ಪೂರ್ತಿ ವಿಡಿಯೋ ನೋಡುವ ಹೊತ್ತಿಗೆ ‘ಹೌದಲ್ವಾ ಮನುಷ್ಯರಾದ ನಾವು ಏನೆಲ್ಲಾ ಅನಾಹುತಗಳನ್ನು ಸೃಷ್ಟಿಸಿದ್ದೀವಿ? ಯಾವುದನ್ನೂ ಸಹಜವಾಗಿರಲು ಬಿಡದೆ ಪ್ರತಿಯೊಂದರ ಮೇಲೂ ಹಸ್ತಕ್ಷೇಪ ಮಾಡಿದ್ದೀವಲ್ಲಾ?’ ಅನ್ನೋ ಭಾವ ಮೂಡುತ್ತದೆ. ನೀವೂ ಒಮ್ಮೆ ಈ ವಿಡಿಯೋವನ್ನು ನೋಡಿ…