ಕನ್ನಡದ ಕಿರಿಕ್ ಪಾರ್ಟಿಯ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆದ ನಟಿ ಸಂಯುಕ್ತ ಹೆಗಡೆ. ಅದಾದಮೇಲೆ ಸಿನಿಮಾ ಹೊರತಾಗಿ ಬೇಕಿಲ್ಲದ ವಿಚಾರಕ್ಕೆ ಸುದ್ದಿಯಾದ ಇದೇ ಸಂಯುಕ್ತಾ ಹೆಗಡೆ ಸದ್ಯ ತಮಿಳಿನ ಕೋಮಾಲಿ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಸದ್ಯ ಕಾಲಿವುಡ್ ಮಂದಿ ಅದರಲ್ಲೂ ರಜನಿ ಫ್ಯಾನ್ಸ್ ಈ ಚಿತ್ರದ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಕೋಮಾಲಿ ಚಿತ್ರದ ಒಂದು ದೃಶ್ಯದ ವಿರುದ್ಧ ರಜನಿಕಾಂತ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಆ ದೃಶ್ಯವನ್ನು ತೆಗೆಯಲು ಸಹ ಚಿತ್ರತಂಡವು ಸಮ್ಮತಿ ನೀಡಿದೆ.
ಇತ್ತೀಚಿಗಷ್ಟೇ ಕೋಮಾಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶ ಮಾಡಿರುವ ತುಣುಕೊಂದನ್ನು ಬಳಕೆ ಮಾಡಿದ್ದಾರೆ. ಆದರೆ ವಿಡಿಯೋದಲ್ಲಿ ರಜನಿಕಾಂತ್ ಅವರನ್ನು ಕಿಂಡಲ್ ಮಾಡಿದ್ದಾರೆ ಎಂದು ಚಿತ್ರತಂಡದ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ರಜನಿ ಫ್ಯಾನ್ಸ್ ಗಳು ಕಿಡಿಕಾರಿದ್ದಾರೆ.
ಸಿನಿಮಾದಲ್ಲಿ ‘ಕೋಮಾಲಿ’ ಚಿತ್ರದ ನಾಯಕ ಕೋಮಾದಿಂದ 16 ವರ್ಷಗಳ ಬಳಿಕ ಏಳುತ್ತಾನೆ. ಆಗ ಏನೆಲ್ಲ ಆಗುತ್ತದೆ, ಸಮಾಜದ ಬದಲಾವಣೆಯನ್ನು ಆತ ಹೇಗೆ ಸ್ವೀಕರಿಸುತ್ತಾನೆ ಎನ್ನುವುದನ್ನು ಹಾಸ್ಯ ರೂಪದಲ್ಲಿ ಹೇಳಲಾಗಿದೆ. ಈ ರೀತಿ ಕೋಮಾದಿಂದ ಎದ್ದ ನಾಯಕ ‘ಈಗ ಯಾವ ವರ್ಷ’ ಎಂದು ಕೇಳುತ್ತಾನೆ. ಆಗ ರಜನಿಕಾಂತ್ ರಾಜಕೀಯಕ್ಕೆ ಬಂದ ವಿಡಿಯೋ ಪ್ಲೇ ಮಾಡಿ 2016 ಎಂದು ಹೇಳಲಾಗುತ್ತದೆ. ಅದನ್ನು ನೋಡಿದ ನಾಯಕ ‘ನಾನು ಈ ಮಾತನ್ನು 1996ರಲ್ಲಿಯೇ ಕೇಳಿದ್ದೆ.’ ಎಂದು ಹೇಳುತ್ತಾನೆ. ಸದ್ಯ ಈ ವಿಚಾರವೇ ವಿವಾದಕ್ಕೆ ಕಾರಣವಾಗಿದೆ. ಇನ್ನು ಈ ಸಿನಿಮಾದಲ್ಲಿ ಜಯಂ ರವಿ, ಕಾಜಲ್ ಅಗರ್ವಾಲ್ ಹಾಗೂ ಕನ್ನಡದ ಸಂಯುಕ್ತ ಹೆಗಡೆ ನಟಿಸಿದ್ದಾರೆ. ವೆಲ್ಸ್ ಫಿಲಂ ಇಂಟರ್ ನ್ಯಾಷನಲ್ ಬ್ಯಾನರ್ ನಲ್ಲಿ ಡಾ. ಇಷಾರಿ ಕೆ ಗಣೇಶ್ ಅವರು ಕೋಮಾಲಿಗೆ ಬಂಡವಾಳ ಹೂಡಿದ್ದಾರೆ.