ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಮತ್ತು ಅದೇ ಜಾಗದಲ್ಲಿ ಈ ಹಿಂದೆ ಕುಳಿತಿದ್ದ ಮಾಜಿ ಸಚಿವೆ ಉಮಾಶ್ರೀ ಅವರ ಹಣದ ಜ್ವರಕ್ಕೆ ಕಂಟ್ರಾಕ್ಟರೊಬ್ಬನ  ಹೆಣ ಬೀಳುವ ಪ್ರಸಂಗವೊಂದು ಸ್ವಲ್ಪದರಲ್ಲೇ ಮಿಸ್ ಆಗಿದೆ. ಸರ್ಕಾರಿ ಗುತ್ತಿಗೆಗಳನ್ನು ಪಡೆಯುತ್ತಿದ್ದ ದೇವನಹಳ್ಳಿ ಶಿವಕುಮಾರ್ ಎಂಬಾತ ಮಹಿಳಾ ಮತ್ತು ಮಕ್ಕಳ ಇಲಾಖೆಯ ವ್ಯಾಪ್ತಿಗೆ ಬರುವ ಅಂಗನವಾಡಿ ಆಹಾರ ಸರಬರಾಜು ಗುತ್ತಿಗೆ ಪಡೆಯಲು ಕೋಟಿಗಟ್ಟಲೆ ಲಂಚ ನೀಡಿದ್ದ.

ಈ ಹಿಂದೆ ಸಚಿವೆಯಾಗಿದ್ದ ಉಮಾಶ್ರೀ ಮತ್ತು ಆ ನಂತರ ಸಚಿವರಾದ ಶ್ರೀಮತಿ ಜಯಮಾಲಾ ಶಿವಕುಮಾರನಿಂದ ಗುತ್ತಿಗೆ ಕೆಲಸದ ಟೆಂಡರ್ ನೀಡಲು ಕೋಟಿಗಟ್ಟಲೆ ಹಣ ಪಡೆದಿದ್ದರಂತೆ. ಆದರೆ ಗುತ್ತಿಗೆ ಮಂಜೂರು ಮಾಡದೇ ಆಟವಾಡಿಸಿಬಿಟ್ಟಿದ್ದಾರೆ. ಇನ್ನೇನು ಟೆಂಡರ್ ಕೈಸೇರಲಿದೆ ಅನ್ನೋ ಆಸೆಯಲ್ಲಿ ಶಿವು ಸಿಕ್ಕ ಸಿಕ್ಕಲ್ಲಿ ಫೈನಾನ್ಸ್ ತಂದು ಲಂಚದ ರೂಪದಲ್ಲಿ ನೀಡಿದ್ದ. ಇನ್ನು ಸರ್ಕಾರ ಉರುಳೋದು ಗ್ಯಾರೆಂಟಿ. ಅಲ್ಲಿಗೆ ಗುತ್ತಿಗೆ ಸಿಗೋದು ಸಾಧ್ಯವಿಲ್ಲ ಅಂತಾ ಗೊತ್ತಾಗಿದ್ದೇ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.

ವಿಜಯನಗರದಲ್ಲಿ ನೆಲೆಸಿರುವ ದೇವನಹಳ್ಳಿ ಶಿವಕುಮಾರ್ ಇಂದು ಕ್ಲಬ್ ರಸ್ತೆಯಲ್ಲಿ ತನ್ನ ಕಾರಿನಲ್ಲಿ ಕುಂತು ವಿವರವಾಗಿ ಮಾತಾಡಿ ಅದನ್ನು ತನ್ನದೇ ಮೊಬೈಲಲ್ಲಿ ರೆಕಾರ್ಡು ಮಾಡಿ, ಡೆತ್ ನೋಟು ಬರೆದು ಬರೋಬ್ಬರಿ 60 ನಿದ್ರೆ ಮಾತ್ರೆ ನುಂಗಿ ಮಲಗಿಬಿಟ್ಟಿದ್ದ. ನಸೀಬು ನೆಟ್ಟಗಿದ್ದ ಕಾರಣ ಸದ್ಯ ಶಿವಕುಮಾರ್ ಪ್ರಾಣ ಹೋಗಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಶಿವಕುಮಾರ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾನೆ.

ಶಿವಕುಮಾರ್ ಬರೆದ ಡೆತ್ ನೋಟ್’ನ ಯಥಾವತ್ತು ಪ್ರತಿ ಇಲ್ಲಿದೆ…

ಹಣ-ಅಧಿಕಾರಕ್ಕೆ ನನ್ನ ಬಲಿ

2015 ರಿಂದ ಪ್ರಯತ್ನಪಟ್ಟ 2016ರ ಮಧ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆಯಿಂದ ಜನತಾ ಬಜಾರ್‍ಗೆ ಅಂಗನವಾಡಿ ಮಕ್ಕಳ ಆಹಾರ ಸರಬರಾಜಿಗೆ ರಾಜ್ಯಮಟ್ಟಕ್ಕೆ ಸಚಿವ ಸಂಪುಟದಲ್ಲಿ ಆದೇಶ ಮಾಡಿಸಿದ ಆದೇಶ ಸಂಖ್ಯೆ ಮ.ಮ.ಇ. ICDC 302/2015 ರಂದು ಆದೇಶಿಸಲಾಯಿತು. ಈ ಆದೇಶದ ಹಿಂದೆ ಹಲವಾರು ನಾಯಕರು, ಹಿರಿಯರು, ಅಧಿಕಾರಿಗಳ ಸಹಾಯದಿಂದ ಆಯಿತು. ಆದರೆ ಕೆಲವರಿಂದ ಈ ಆದೇಶ ಜಾರಿಯಾಗಲಿಲ್ಲ. ಮತ್ತೆ ಪ್ರಯತ್ನಪಟ್ಟು 2018ರ ಜನವರಿ 2 ರಂದು ಮರು ಸಚಿವ ಸಂಪುಟದಲ್ಲಿ ಮತ್ತೊಮ್ಮೆ ಆದೇಶವಾಯಿತು.

ಮತ್ತೆ ಈ ಆದೇಶವನ್ನು ಜಾರಿ ಮಾಡಿಸಲು ಹೋರಾಟ ನಡೆಸಿದೆ. ಆದರೂ ಈ ಆದೇಶ ಇನ್ನೂ ಜಾರಿಯಾಗಿಲ್ಲ. ಕಾರಣ ಕಾಣದ ಕೆಲ ಹಳೆಯ ಸರಬರಾಜುದಾರರು ಇದರ ನಡುವೆ ಹೊಸ ಸರ್ಕಾರದ ಮಹಿಳಾ ಮತ್ತು ಮಕ್ಕಳ ಇಲಾಖೆಯ ನೂತನ ಸಚಿವರಾದಂತಹ ಶ್ರೀಮತಿ ಡಾ|| ಜಯಮಾಲಾ ಅವರೊಂದಿಗೆ ಮಾತನಾಡಿ ಸರಬರಾಜುದಾರರಿಂದ ತಿಂಗಳಿಗೆ 10%  ಕಮೀಷನ್ ನಂತೆ ಮುಂಗಡವಾಗಿ 25 ಲಕ್ಷ ರುಪಾಯಿ ನೀಡಿ ಸಚಿವರನ್ನು ಪರಿಚಯ ಮತ್ತು ವ್ಯವಹಾರ ಮಾಡಿಕೊಟ್ಟಂತಹ ಸಚಿವರ ಸ್ನೇಹಿತರಾದಂತಹ ಸಂತೋಷ್ ಪೈ ರವರಿಗೆ 10 ಲಕ್ಷ ರುಪಾಯಿ ನೀಡಿದೆ. ಅದರಂತೆ ಅವರು ನಿಂತಿದ್ದ ಆದೇಶಕ್ಕೆ ಚಾಲನೆ ನೀಡಿದ್ದರು ಆದರೆ ಒಂದು ವಾರ ಕಳೆದಂತೆ ನನ್ನ ತಿಂಗಳು, ತಿಂಗಳಿಗಿಂತ ಒಂದು ವರ್ಷದ ಸರಬರಾಜು ಮೊತ್ತ (ತಿಂಗಳಿಗೆ 70 ಕೋಟಿಯಂತೆ 10% 7 ಕೋಟಿ ವರ್ಷಕ್ಕೆ 84 ಕೋಟಿ)  ಕೊಟ್ಟರೆ ಮಾತ್ರ ನಾನು ನಿಮ್ಮ ಜೊತೆ ಕೈ ಜೋಡಿಸುತ್ತೇನೆ ಎಂದು ಸಚಿವರು ನನ್ನನ್ನು ಮನೆಗೆ ಕರೆಸಿ ಹೇಳಿದರು.

ಅವರಿಗೆ ಒಂದೇ ಸಾರಿ 84 ಕೋಟಿ ರುಪಾಯಿ ಕೊಡಲು ಸಾಧ್ಯವಿಲ್ಲ ಎಂದಾಗ ಮಾನ್ಯ ಶ್ರೀಮತಿ ಡಾ|| ಜಯಮಾಲಾ ಅಮ್ಮನವರು ನಾನು ಕೊಟ್ಟ ಮಾತಿನಂತೆ ತಿಂಗಳ ಲೆಕ್ಕದಲ್ಲಿ ನೀಡುತ್ತೇನೆ ಎಂದರೂ ಕೇಳುವ ಸ್ಥಿತಿಯಲ್ಲಿ ಸಚಿವರು ಇಲ್ಲ. ಈ ಆದೇಶದಿಂದ ನನ್ನನ್ನು ಸಂಪೂರ್ಣವಾಗಿ ಹೊರ ಹಾಕಿ ಬೇರೆಯ ರಾಜ್ಯದ ಕೆಲ ಬಂಡವಾಳಶಾಹಿಗಳೊಂದಿಗೆ ಸಚಿವರು ಕೈ ಜೋಡಿಸಿ ನನಗೆ ಮೋಸ ಮಾಡುತ್ತಿದ್ದಾರೆ.

ಈ ಆದೇಶವನ್ನು ನಂಬಿಕೊಂಡು ಇಲ್ಲಿಯವರೆವಿಗೂ ಬಂದ ನನ್ನ ಗತಿ ಏನು..? ನನಗೆ ಹಣ ಕೊಟ್ಟಿರುವ ಸರಬರಾಜುದಾರರ ಗತಿ ಏನು? ನನಗೆ ಕೊಟ್ಟಿರುವ ಸಾಲವನ್ನು ಹೇಗೆ ತೀರಿಸಲಿ. ಸರಬರಾಜುದಾರರಿಗೆ ಏನು ಉತ್ತರ ನೀಡಲಿ ಹೇಳಿದ ಮಾತಿನಂತೆ ನಡೆದುಕೊಳ್ಳದೇ 1ನೇ ಕಂತಿನಲ್ಲಿ 25 ಲಕ್ಷ 2ನೇ ಕಂತಿನಲ್ಲಿ 60 ಲಕ್ಷ 3ನೇ ಕಂತಿನಲ್ಲಿ ನೀಡಿದ್ದೇನೆ. ಅದರಂತೆ 1 ಕೋಟಿಗೂ ಅಧಿಕ ಹಣ ಮಾನ್ಯ ಸಚಿವರಿಗೆ ನೀಡಿದ್ದೇನೆ. ಆದರೆ ಸಚಿವರ ಹಣದ ಬೇಡಿಕೆ ಇಲ್ಲಿಗೆ ಮುಗಿಯಲಿಲ್ಲ. ಎಲ್ಲ ಸರಬರಾಜುದಾರರಿಗೆ ಏನು ಹೇಳಲು ಆಗದೆ ಈ ಸಾಲದ ಸಂಕಷ್ಟದಿಂದ ಹೊರಬರಲು ಆಗದೇ ಹೇಳಿದ ಮಾತಿನಂತೆ ತಿಂಗಳು ತಿಂಗಳು ಹಣ ಪಡೆದು ಈಗ ಮೋಸ ಮಾಡುತ್ತಿರುವ ಡಾ|| ಜಯಮಾಲ ಅಮ್ಮನವರು ಅವರ ಹಣದ ಬೇಡಿಕೆ ಮತ್ತು ಹಿಂಸೆಯಿಂದ ಈ ದಿನ ನಾನು ಜೀವ ಕಳೆದುಕೊಳ್ಳುವಂತೆ ಮಾಡಿದೆ. ಈ ನನ್ನ ಸಾವಿಗೆ ಮಾನ್ಯ ಡಾ|| ಜಯಮಾಲ ಅಮ್ಮನೇ ನೇರ ಕಾರಣ.

     -ಶಿವಕುಮಾರ್  

ನಾನು ಈ ಅಂಗನವಾಡಿ ಸರಬರಾಜಿಗೆ ಸಂಪುಟ ತೀರ್ಮಾನಕ್ಕೆ ಈ ಕೆಳಗಿನಂತೆ ಹಣ ನೀಡಿದ್ದೇನೆ.

  1. ಉಮಾಶ್ರೀ 2,10,00000 ಮೆಹಬೂಬ್ ಪಾಷಾ ಮುಖಾಂತರ ಉಮಾಶ್ರೀ ಅವರ ಸಹಾಯಕ ನಾಗೇಶ್ ಮತ್ತು ರಂಗನಾಥ್ ರವರಿಗೆ ನಾನು ಜೊತೆಯಲ್ಲಿ ಹೋಗಿ ನೀಡಿದ್ದೇನೆ.
  2. ರಜನೀಶ್ ಗೋಯಲ್ (ಮಹಿಳಾ ಮತ್ತು ಮಕ್ಕಳ ಇಲಾಖೆ ಪ್ರಧಾನ ಕಾರ್ಯದರ್ಶಿ) ಮೆಹಬೂಬ್ ಪಾಷಾರವರ ಮುಖಾಂತರ ಆರ್.ಕೆ. ರವರ ಸಹಾಯದಿಂದ (ಖರ್ಗೆ ಅಳಿಯ) ರಜನೀಶ್ ಗೋಯಲ್ ಸಹಾಯಕ ಸತೀಶ್ ರವರಿಗೆ 1,20,00000 ನೀಡಿದ್ದೇನೆ.
  3. ವಿಜಯ ಶಂಕರ್ (ಮಹಿಳಾ ಇಲಾಖೆ ನಿರ್ದೇಶಕರು) ಲೋಕಾಯುಕ್ತ ಪ್ರಕರಣದ ಮರುದಿನ ಮೆಹಬೂಬ್ ಪಾಷಾರವರೊಂದಿಗೆ 1,50,00000 ನೀಡಿದ್ದೇನೆ.
  4. ಆರ್ಥಿಕ ಇಲಾಖೆ ಮತ್ತು ಲೀಗಲ್ ಇಲಾಖೆಯ ಅಧಿಕಾರಿಗಳಿಗೆ ಹಾಗೂ ರಜನೀಶ್ ಗೋಯಲ್ ರವರಿಗೆ ಹಲವಾರು ಇಲಾಖೆಗಳ ಅಭಿಪ್ರಾಯಕ್ಕೆ ಹಾಕಿದ್ದಾಗ ಸುಮಾರು 6 ರಿಂದ 7 ಇಲಾಖೆಯ ಅಧಿಕಾರಿಗಳಿಗೆ ಸೂಕ್ತ ಅಭಿಪ್ರಾಯ ನೀಡುವಂತೆ ಸುಮಾರು 3 ರಿಂದ 4 ಕೋಟಿ ರುಪಾಯಿಗಳನ್ನು ಮಹಬೂಬ್ ಪಾಷಾರವರ ಸಹಾಯದಿಂದ ಪಾಷಾರವರನ್ನು ಒಳಗೊಂಡಂತೆ ನೀಡಿರುತ್ತೇನೆ. ಮಹಿಳಾ ಮತ್ತು ಮಕ್ಕಳ ಇಲಾಖೆಯ ಸುಮಾರು 10 ಜನ ಅಧಿಕಾರಿಗಳಿಗೆ 2 ಕೋಟಿ ರುಪಾಯಿ ನೀಡಿದ್ದೇನೆ. (ಬರಮರಾಜಪ್ಪ, ಸಂಧ್ಯಾ ನಾಯಕ್) ಇನ್ನೂ ಮುಂತಾದವರಿಗೆ ನೀಡಿದ್ದೇನೆ. ನಾನು ಈ ಸರಬರಾಜುಗೆ ಸರಬರಾಜುದಾರರಿಂದ ಸುಮಾರು 4 ಕೋಟಿ ರುಪಾಯಿಯವರೆಗೆ ತೆಗೆದುಕೊಂಡು ಮತ್ತು ನನ್ನ ಸ್ವಂತ ಹಣ ಹಾಗೂ ಸಾಲದ ರೂಪದಲ್ಲಿರುವ ಹಣವನ್ನು ತಂದು ನೀಡಿದ್ದೇನೆ. ನವೆಂಬರ್ 15ನೇ ತಾರೀಖು ಜಯಮಾಲರವರೊಂದಿಗೆ ಚರ್ಚೆ ನಡೆಸಿಯೂ ಸಹ ಅವರಿಗೂ ಹಣ ನೀಡಿದ್ದೇನೆ.

***

ಮೂಲತಃ ದೇವನಹಳ್ಳಿಯವನಾದ ಶಿವಕುಮಾರ್ ತಂದೆ ಅಲ್ಲಿ ಸಣ್ಣದಾಗಿ ಹೋಟೆಲ್ ನಡೆಸುತ್ತಿದ್ದವರು. ತಾಯಿ ಈಗ್ಗೆ ಏಳು ತಿಂಗಳ ಹಿಂದಷ್ಟೇ ಕ್ಯಾನ್ಸರ್’ಗೆ ಬಲಿಯಾಗಿದ್ದರು. ಸರಿಸುಮಾರು ಹತ್ತು ವರ್ಷಗಳ ಹಿಂದೆ ಉದಯ ಟೀವಿಗಾಗಿ ಕರಿಮಾಯಿ, ಗಂಗಾ ಸೇರಿದಂತೆ ಐದು ಧಾರಾವಾಹಿಗಳನ್ನು ನಿರ್ಮಿಸಿದ್ದ.  ಆದರೆ ಯಾವುವೂ ನೆಟ್ಟಗೆ ಪ್ರಸಾರವಾಗಲಿಲ್ಲ.

ಅಷ್ಟರಲ್ಲಿ ಸರ್ಕಾರಿ ಗುತ್ತಿಗೆಗಳನ್ನು ಪಡೆದುಕೊಳ್ಳಲು ಶುರು ಮಾಡಿದ ಶಿವಕುಮಾರ್’ಗೆ ಹಣವಂತ ಗಣ್ಯರ ಪರಿಚಯವಾಗಿತ್ತು. ಬೇನಾಮಿ ದುಡ್ಡನ್ನು ಈತ ಗುತ್ತಿಗೆ ಕೆಲಸಗಳಿಗೆ ಪಡೆದು, ಬಡ್ಡಿ ಸಮೇತ ವಾಪಾಸು ನೀಡುತ್ತಿದ್ದ. ಹಾಗೆ ಪಡೆದು ತಂದ ಹಣವನ್ನೇ ಈತ ಈ ಸಿನಿಮಾ ರಾಜಕಾರಣಿಗಳಾದ ಉಮಾಶ್ರೀ ಮತ್ತು ಜಯಮಾಲಾ ಸೆರಗಿಗೆ ಸುರಿದದ್ದು. ಶಿವಕುಮಾರನೇನೋ ಈ ಮಹಿಳಾ ಮಿನಿಸ್ಟರುಗಳಿಂದ ಯಾಮಾರಿ ಸಾಯುವ ತೀರ್ಮಾನಕ್ಕೆ ಬಂದಿದ್ದಾನೆ. ಆದರೆ ಈತನನ್ನು ನಂಬಿರುವ ಮಡದಿ ಹೇಮಾ ಮತ್ತು ಎಳೆ ಮಗು ಚಿನ್ಮಯಿ ಪಾಡೇನಾಗಬೇಡ? ಶಿವಕುಮಾರ್ ಇವತ್ತು ಸಾವಿನ ಹಾಸಿಗೆಯಲ್ಲಿ ಮಲಗಿದ್ದಾನೆ. ಹಣ ಪಡೆದು ತೆಪ್ಪಗಾದ ಉಮಾಶ್ರೀ ಮತ್ತು ಜಯಮಾಲಾ ಮೇಡಂ ಇದಕ್ಕೆ ಏನು ಉತ್ತರ ನೀಡುತ್ತೀರ?

CG ARUN

ಕೊಯ್ನಾ ಮಿತ್ರಾಗೆ ಎದುರಾಯ್ತು ಚೆಕ್ ಬೌನ್ಸ್ ಕಂಟಕ!

Previous article

ಕಿಸ್ ಬೆಟ್ಟೇಗೌಡ v/s ಚಿಕ್ಕಬೋರಮ್ಮ ಹಾಡಿಗೆ ಪವರ್ ಸ್ಟಾರ್ ದನಿ!

Next article

You may also like

1 Comment

  1. A ploy to cover up his misdeeds and to avoid return of money to ICDS contractors. More details call

Leave a reply

Your email address will not be published. Required fields are marked *