ಸಿನಿಮಾ ಅಂದರೇನೇ ಹಾಗೆ. ನೇರಾನೇರವಾಗಿ ಅರ್ಥವಾಗುವ ಶೀರ್ಷಿಕೆಗಿಂತಾ ʼಏನಿದು ವಿಚಿತ್ರವಾಗಿದೆಯಲ್ಲಾ?ʼ ಅನ್ನಿಸುವ ಟೈಟಲ್ಲುಗಳಿಗೇ ಇಲ್ಲಿ ಹೆಚ್ಚು ವ್ಯಾಲ್ಯೂ. ಉಪೇಂದ್ರರ ʻಶ್ʼ, ʻಓಂʼ, ʻಎʼ ಇಂದ ಹಿಡಿದು ಈಚಿನ ವರ್ಷಗಳಲ್ಲಿ ಬಂದ 6-2=5, ರಂಗಿತರಂಗ, ಯೂ ಟರ್ನ್, ಗುಳ್ಟೂ… ಹೀಗೆ ʻಡಿಫರೆಂಟ್ ಟೈಟಲ್ʼ ಅನ್ನಿಸಿಕೊಂಡ ಎಷ್ಟೋ ಸಿನಿಮಾಗಳು ಬಿಡುಗಡೆಯ ನಂತರ ಸೂಪರ್ ಹಿಟ್ ಆಗಿ, ಪ್ರೇಕ್ಷಕರನ್ನು ಸೆಳೆದ, ಮನಸ್ಸಿಗೆ ಆಪ್ತವಾದ ಉದಾಹರಣೆಗಳಿವೆ!
ಇತ್ತೀಚೆಗೆ ʻಕಾನ್ಸೀಲಿಯಂʼ ಎನ್ನುವ ಹೊಸಾ ಸೌಂಡಿಂಗ್ ಹೊಮ್ಮಿಸುವ ಸಿನಿಮಾದ ಹೆಸರು ಪದೇ ಪದೇ ಕೇಳಿಬರುತ್ತಿದೆ. ಅಷ್ಟು ಸುಲಭಕ್ಕೆ ನಾಲಿಗೆ ಮೇಲೆ ನಿಲ್ಲದ ಮತ್ತು ತಲೆಯಲ್ಲಿ ಉಳಿಯದ ಹೆಸರು ಇದಾಗಿದ್ದರೂ, ಅದರೊಳಗಿರುವ ಕಂಟೆಂಟು ನೋಡುಗರ ಮನಸ್ಸಿನಲ್ಲಿ ಪರ್ಮನೆಂಟಾಗಿ ಉಳಿಯುವಂಥಾದ್ದು ಅನ್ನೋದು ನೋಡಿದವರ ಮಾತು. ಯಾವ ಸೂಪರ್ ಸ್ಟಾರೇ ಇದ್ದರೂ, ಸಿನಿಮಾವೊಂದರ ಬಗ್ಗೆ ಸ್ಟುಡಿಯೋದಿಂದ ಹೊರಬೀಳುವ ʻರಿಪೋರ್ಟುʼ ಆ ಚಿತ್ರದ ಹಣೇಬರಹವನ್ನು ಮೊದಲೇ ಅನಾವರಣ ಮಾಡಿರುತ್ತದೆ. ಈ ನಿಟ್ಟಿನಲ್ಲಿ ನೋಡಿದರೆ, ʻಕಾನ್ಸೀಲಿಯಂʼನ ತಾಂತ್ರಿಕತೆ, ಸಿನಿಮಾ ರೂಪಿಸಿರುವ ಬಗೆಯ ಕುರಿತಾಗಿ ಒಳ್ಳೆ ಟಾಕ್ ಕೇಳಿಬರುತ್ತಿದೆ. ಲ್ಯಾಟಿನ್ ಪದಮೂಲ ಹೊಂದಿರುವ ʻಕಾನ್ಸೀಲಿಯಂʼಗೆ ಸಲಹೆ, ಉದ್ದೇಶ ಮುಂತಾದ ಅರ್ಥವಿದೆಯಂತೆ.
2018ರ ಸುಮಾರಿಗೆ ಆರಂಭಗೊಂಡ ಸಿನಿಮಾ ʻಕಾನ್ಸೀಲಿಯಂʼ. ಅನಿಷ್ಟಕ್ಕೆಲ್ಲಾ ಶನೇಶ್ವರ ಕಾರಣ ಎನ್ನುವಂತೆ, ಈಗೀಗ ಯಾವ್ಯಾವುದೋ ಕಾರಣಕ್ಕೆ ಸಿನಿಮಾ ನಿಲ್ಲಿಸಿದವರು, ತಡ ಮಾಡಿಕೊಂಡವರೆಲ್ಲಾ ಕೊರೋನಾ ಮೇಲೆ ಭಾರ ಹೊರಿಸುತ್ತಿದ್ದಾರೆ. ಆದರೆ, ʻಕಾನ್ಸೀಲಿಯಂʼ ಶುರುವಾದಾಗಿಂದ ಈ ತನಕ ನಿರಂತರ ಒಂದಲ್ಲಾ ಒಂದು ಕೆಲಸ ನಡೆದೇ ಇದೆ. ಕನ್ನಡ ಸಿನಿಮಾವನ್ನು ಬೇರೊಂದು ಮಟ್ಟಕ್ಕೆ ಕೊಂಡಯ್ಯಬಲ್ಲಷ್ಟು ತಾಂತ್ರಿಕ ಶ್ರೀಮಂತಿಕೆ ಈ ಚಿತ್ರದಲ್ಲಿದೆ. ಗ್ರಾಫಿಕ್ಸ್ ಇತ್ಯಾದಿ ಕೆಲಸಗಳೇ ವರ್ಷಗಟ್ಟಲೆ ಸಮಯ ತಿಂದಿದೆ.
ಸೈನ್ಸ್ ಫಿಕ್ಷನ್, ಸೈಕಲಾಜಿಕಲ್ ಥ್ರಿಲ್ಲರ್ ಕಥೆಗಳನ್ನು ಹೊಂದಿರುವ ಸಿನಿಮಾವನ್ನು ಮಲ್ಟಿ ಲಾಂಗ್ವೇಜಿನಲ್ಲಿ ಗಟ್ಟಿಮುಟ್ಟಾಗಿ ಕಟ್ಟಿನಿಲ್ಲಿಸೋದು ಕಷ್ಟದ ಕೆಲಸ. ನಿರ್ದೇಶಕ ಸಮರ್ಥ್ ಅವರ ಮೊದಲ ಪ್ರಯತ್ನ ‘ಕಾನ್ಸೀಲಿಯಂ’. ಹಾಗಂತ ಏಕಾಏಕಿ ನಿರ್ದೇಶನದ ಸಾಹಸಕ್ಕೂ ಇಳಿದವರಲ್ಲ.
ಮಂಡ್ಯ ಮೂಲದ ಸಮರ್ಥ್ ಕಳೆದ ಹತ್ತು ವರ್ಷಗಳಿಂದ ಸಿನಿಮಾರಂಗದ ಸಾಕಷ್ಟು ವಿಭಾಗಗಳನ್ನು ಗಮನಿಸುತ್ತಾ, ಒಂದಷ್ಟು ಕಿರುಚಿತ್ರಗಳನ್ನು ರೂಪಿಸಿ ʻದೊಡ್ಡ ಸಿನಿಮಾ ಮಾಡಬಹುದುʼ ಅನ್ನೋದನ್ನು ಖಾತ್ರಿ ಮಾಡಿಕೊಂಡ ನಂತರವಷ್ಟೇ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದು. ನಿರ್ದೇಶನದ ಜೊತೆ ಪ್ರಧಾನ ಪಾತ್ರದಲ್ಲಿ ಕೂಡಾ ಸಮರ್ಥ್ ಕಾಣಿಸಿಕೊಂಡಿದ್ದಾರೆ. ಮತ್ತೊಂದು ಲೀಡ್ ರೋಲನ್ನು ಪ್ರೀತಂ ಎನ್ನುವ ಹೊಸ ನಟ ನಿರ್ವಹಿಸಿದ್ದಾರೆ. ಮನೆದೇವ್ರು ಸೀರಿಯಲ್ಲಿಂದ ಸಖತ್ ಫೇಮಸ್ಸಾಗಿರುವ ಅರ್ಚನಾ ಲಕ್ಷೀನರಸಿಂಹಸ್ವಾಮಿ ಈ ಚಿತ್ರದ ಹೀರೋಯಿನ್. ಲವ್ ಮಾಕ್ʼಟೇಲ್ ಖ್ಯಾತಿಯ ಖುಷಿ ಆಚಾರ್ ಈ ಸಿನಿಮಾದ ಮತ್ತೊಬ್ಬ ಹೀರೋಯಿನ್.
ಶಂಕರ್ ನಾಗ್ ತಂಡದಲ್ಲಿ ಪ್ರಮುಖ ಸದಸ್ಯರಾಗಿ ಗುರುತಿಸಿಕೊಂಡಿದ್ದ ಜಗದೀಶ್ ಮಲ್ನಾಡ್ ‘ಕಾನ್ಸೀಲಿಯಂ’ನ ಬಹುಮುಖ್ಯ ಪಾತ್ರವನ್ನು ನಿಭಾಯಿಸಿದ್ದಾರೆ. ಸೌಂಡ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಲೇ, ಶಾರ್ಟ್ ಮೂವಿಗಳು ಮತ್ತು ಸಿಂಗಲ್ಸ್ ಮೂಲಕವೂ ಹೆಸರು ಮಾಡುತ್ತಿರುವ ದ್ವೈಪಾಯಣ್ ಸಿಂಘ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಕಾನ್ಸೀಲಿಯಂ’ನ ಛಾಯಾಗ್ರಹಣ ಸುದರ್ಶನ್ ಅವರದ್ದು.
ತೀರಾ ಹೊಸದೆನಿಸುವ ಕಥಾವಸ್ತು, ಅಷ್ಟೇ ಫ್ರೆಶ್ ಮೇಕಿಂಗ್ ಹೊಂದಿರುವ ‘ಕಾನ್ಸೀಲಿಯಂ’ ಕನ್ನಡದ ಜೊತೆಗೆ ತಮಿಳು, ಮಲೆಯಾಳಂ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲೂ ಏಕಕಾಲದಲ್ಲಿ ರಿಲೀಸಾಗಲಿದೆ. ಥೇಟರಿನಲ್ಲೇ ಬಿಡುಗಡೆ ಮಾಡಬೇಕು ಎನ್ನುವ ಯಾವ ಹಠವನ್ನೂ ಮಾಡದೆ, ಓಟಿಟಿಯಲ್ಲಿ ಅನಾವರಣಗೊಳಿಸಲು ಚಿತ್ರತಂಡ ಸಕಲ ರೀತಿಯ ತಯಾರಿ ನಡೆಸಿದೆ. ಶೀರ್ಷಿಕೆಯ ಕಾರಣಕ್ಕೆ ಕುತೂಹಲ ಮೂಡಿಸಿರುವ ‘ಕಾನ್ಸೀಲಿಯಂ’ ಒಂದೊಳ್ಳೆ ಸಿನಿಮಾವಾಗಿ ಇಂಡಿಯಾ ಪೂರ್ತಿ ಹೆಸರು ಮಾಡುವ ಎಲ್ಲ ಕುರುಹುಗಳೂ ಸದ್ಯಕ್ಕೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
No Comment! Be the first one.