ರವಿಚಂದರನ್ ಯಾಕೆ ಇನ್ನೂ ಮಗಳಿಗೆ ಮದುವೆ ಮಾಡಿಲ್ಲ? ಅನ್ನೋ ಪ್ರಶ್ನೆ ಇತ್ತೀಚಿನ ವರ್ಷಗಳಲ್ಲಿ ಹಲವರ ಬಾಯಲ್ಲಿ ಪದೇ ಪದೇ ಸುಳಿದಾಡುತ್ತಿತ್ತು. ಇನ್ನು ರವಿಚಂದ್ರನ್ ಅವರಿಗೆ ಈ ಪ್ರಶ್ನೆಯನ್ನು ಅದೆಷ್ಟು ಜನ ಕೇಳಿದ್ದಾರೋ ಏನೋ? ಒಟ್ಟಿನಲ್ಲಿ ರವಿಮಾಮ ಮಗಳ ಮದುವೆ ಮಾಡಲು ಕಡೆಗೂ ತಯಾರಾಗಿದ್ದಾರೆ.
ಉದ್ಯಮಿ ಅಜಯ್ ಎಂಬ ವರನ ಜೊತೆ ತಮ್ಮ ಮಗಳು ಗೀತಾಂಜಲಿಯ ವಿವಾಹ ನೆರವೇರಿಸಲು ರವಿಚಂದ್ರನ್ ಕುಟುಂಬ ನಿರ್ಧರಿಸಿದೆ. ಅದರಂತೆ ನೆನ್ನೆ ನಿಶ್ಚಿತಾರ್ಥವನ್ನೂ ಮಾಡಿದ್ದಾರೆ. ತೀರಾ ಆಪ್ತರ ಸಮ್ಮುಖದಲ್ಲಿ ನಡೆದ ಈ ನಿಶ್ಚಿತಾರ್ಥದಲ್ಲಿ ಮದುವೆಯ ದಿನಾಂಕ ನಿಗಧಿಯಾಗಿದೆಯಾದರೂ ಅದು ಯಾವತ್ತೆಂಬುದಿನ್ನೂ ಬಹಿರಂಗವಾಗಿಲ್ಲ.
ರವಿಚಂದ್ರನ್ ಅವರು ತೊಡುವ ಬಟ್ಟೆಗಳ ವಿನ್ಯಾಸದ ಬಗ್ಗೆ ಆಗಾಗ ಚರ್ಚೆಯಾಗುತ್ತಲೇ ಇರುತ್ತದೆ. ತನ್ನ ತಂದೆ ಯಾವಾಗ ಯಾವ ಬಣ್ಣದ, ಎಂಥಾ ಬಟ್ಟೆ ತೊಡಬೇಕು ಅನ್ನೋದನ್ನೆಲ್ಲಾ ನೋಡಿಕೊಳ್ಳೋದು ರವಿ ಪುತ್ರಿ ಗೀತಾಂಜಲಿ. ಮದುವೆ ಮಾಡಿಕೊಂಡು ಗಂಡನಮನೆಗೆ ಹೋದಮೇಲೆ ಗೀತಾಂಜಲಿ ಈ ಕೆಲಸವನ್ನು ಯಾರಿಗೆ ವಹಿಸುತ್ತಾರೋ ಗೊತ್ತಿಲ್ಲ. ಅಂದಹಾಗೆ ರವಿಚಂದ್ರನ್ ಅದೆಷ್ಟು ಸಿನಿಮಾಗಳಲ್ಲಿ ಮಾವನಿಂದ ಕಾಲು ತೊಳೆಸಿಕೊಂಡು, ಮದುವೆ ದೃಶ್ಯಗಳಲ್ಲಿ ನಟಿಸಿದ್ದಾರೋ ಈಗ ನಿಜಜೀವನದಲ್ಲಿ ತಾವೇ ಖುದ್ದು ಅಳಿಯನ ಪಾದ ಪೂಜೆ ಮಾಡಿ ಮಗಳನ್ನು ಕಳುಹಿಸಿಕೊಡುವ ದಿನಗಳು ಸನ್ನಿಹಿತವಾಗಿವೆ.