ಕ್ರಿಕೆಟ್‌ ಅನ್ನೋದು ಈಗ ಬರಿಯ ಆಟವಾಗಿ ಉಳಿದಿಲ್ಲ. ಸಾವಿರಾರು ಕೋಟಿ ರುಪಾಯಿಗಳ ಹೂಡಿಕೆ, ವ್ಯಾಪಾರ ವಹಿವಾಟು, ಜಾಹೀರಾತು, ಲಾಭ, ಲೋಭ, ಮಸ್ತಿ, ಕುಸ್ತಿಗಳೆಲ್ಲಾ ಇದರ ಹಿಂದಿವೆ. ಇವೆಲ್ಲಾ ಉಳ್ಳವರ ಪಾಲು. ದುರಂತವೆಂದರೆ ಈದೇ ಆಟವಿಂದು ಬಡ, ಮಧ್ಯಮ ವರ್ಗದವರ ಬದುಕಿನಲ್ಲೂ ಆಟವಾಡುತ್ತಿದೆ. ಮೋಜು ನೀಡಬೇಕಿದ್ದ ಕ್ರೀಡೆ ಅಮಾಯಕರನ್ನು ಮಸಣಕ್ಕೆ ಕರೆದೊಯ್ಯುತ್ತಿದೆ ಅನ್ನೋದು ಪದಶಃ ನಿಜ!

ರೋಡು ಸರಿಯಿಲ್ಲ, ಸರಿಯಾಗಿ ನೀರು ಬಿಡಲ್ಲ ಅಂತಾ ಇಲಾಖೆಗಳ ವಿರುದ್ಧ, ಅಫೇರು ಮಡಗಿಕೊಂಡ ಮಿನಿಸ್ಟರುಗಳ ಮೇಲೆ ಕೇಸು ಜಡಿಯುವ ಆದಾಯವಿಲ್ಲದ ವಕೀಲ ಆತ. ಹೆಸರು ಕರಿಯಪ್ಪ. ಈ ಸಲ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿರುತ್ತಾನೆ. ಅದು ಐಪಿಎಲ್‌ ಎನ್ನುವ ಅನಾಹುತಕಾರಿ ಆಟವನ್ನು ರದ್ದು ಮಾಡುವ ಕುರಿತು. ಅದರ ವಿಚಾರಣೆ ಶುರುವಾಗಿರುತ್ತದೆ. ಆ ಮೂಲಕ ತೆರೆದುಕೊಳ್ಳುವ ನಾಲ್ಕು ಜನರ ಬದುಕಿನ ದುರಂತ ಗಾಥೆಗೆ ಇಟ್ಟ ಹೆಸರು ಕ್ರಿಟಿಕಲ್‌ ಕೀರ್ತನೆಗಳು!

‌ಲವ್‌ ಬರ್ಡ್ಸ್, ಮುದ್ದು ಗೊಂಬೆ, ತುಘಲಕ್‌ ಕುಮಾರ, ಬೆಲ್ಲದಚ್ಚು ಎಂಬ  ನಾಲ್ಕು ಕೀರ್ತನೆಗಳು ಪ್ರತ್ಯೇಕವಾಗಿ ಶುರುವಾಗುತ್ತವೆ. ಕುಂದಾಪುರದ ಇಬ್ಬರು ಪ್ರೇಮಿಗಳು, ಬೆಳಗಾವಿಯ ಆಟೋ ಚಾಲಕ, ಮಂಡ್ಯದ ಆಲೆಮನೆಯಲ್ಲಿ ದುಡಿಯುವ ಬಡ ಮಹಿಳೆ, ಆಕೆಯ ಮಗ, ಬೆಂಗಳೂರಿನ ಟೆಕ್ಕಿ… ಈ ನಾಲ್ಕೂ ಜನರು ಹಣ ಮಾಡುವ ಧಾವಂತಕ್ಕೆ ಬಿದ್ದು, ಕ್ರಿಕೆಟ್ ಬೆಟ್ಟಿಂಗ್‌ ಪೀಡೆಯ ಕೈಗೆ ಹೇಗೆ ಸಿಕ್ಕಿಬೀಳುತ್ತಾರೆ ಅನ್ನೋದರ ವಿವರವನ್ನು ಮೊದಲ ಭಾಗದಲ್ಲಿಟ್ಟಿದ್ದಾರೆ.

ಅದ್ಯಾವುದೋ ಮೈದಾನದಲ್ಲಿ ಪಂದ್ಯ ಆರಂಭವಾದರೆ, ಇನ್ನೆಲ್ಲೋ ಕೂತು ವ್ಯವಹಾರ ಕುದುರಿಸಿ ಬೆಟ್ಟಿಂಗ್‌ ಆಡಿಸುವ ಬುಕ್ಕಿಗಳು. ಆನ್‌ ಲೈನಿನಲ್ಲೇ ಓಡಾಡುವ ದುಡ್ಡು. ಅಗ್ನಿ ಮೂಲೆಯಲ್ಲಿ ಟೀವಿ ಇಟ್ಟರೆ ಪಂದ್ಯ ಗೆಲ್ಲುತ್ತದೆ, ಸಾಕ್ಷಿ ಸ್ಟೇಡಿಯಮ್ಮಿಗೆ ಬಂದ್ರೆ ದೋನಿಗೆ ಲಕ್ಕು, ಪ್ರೀತಿ ಚೆಡ್ಡಿ ಹಾಕೊಂಡ್‌ ಬಂದ್ರೆ ಪಂದ್ಯಕ್ಕೆ ಪವರು  ಎಂಬಿತ್ಯಾದಿ  ಮೂಢ ನಂಬಿಕೆಗಳು. ಮಗು ಮುಟ್ಟಿದ ಬೆರಳಿನ ಮೇಲೆ ನಂಬಿಕೆ ಇಟ್ಟು ಬಾಜಿ ಕಟ್ಟುವ ಅವಿವೇಕಿ ಅಪ್ಪ. ನಂಬಿದವಳ ನಿಯತ್ತಿಗೆ ಗುನ್ನ ಇಟ್ಟು ಜೂಜಾಡುವ ಲವರ್‌ ಬಾಯ್.‌ ಡಿ.ಕೆ. ರವಿ ಥರಾ ಓದಿ ಡಿಸಿ ಆಗ್ತೀನಿ ಅಂತಾ ಅಮ್ಮನಿಗೆ ಭರವಸೆ ಕೊಟ್ಟ ಹುಡುಗ ಮಾಡಿಕೊಳ್ಳುವ ಯಡವಟ್ಟುಗಳು, ಗೆದ್ದವರ ದುರಾಸೆ, ಸೋತವರ ಹತಾಶೆಗಳೇ ʻಕ್ರಿಟಿಕಲ್‌ ಕೀರ್ತನೆʼಯ ಮೂಲ ಧಾತು.

ಬುಕ್ಕಿಗಳು, ಸಂಖ್ಯಾಶಾಸ್ತ್ರಜ್ಞರು, ಫೈನಾನ್ಷಿಯರುಗಳು, ಜ್ಯೋತಿಷಿಗಳು ಸೇರಿದಂತೆ ಐ ಪಿ ಎಲ್‌ ಬೆಟ್ಟಿಂಗ್‌ ಸುತ್ತ ಅನೇಕರು ಅನ್ನದ ದಾರಿ ಕಂಡುಕೊಂಡಿದ್ದಾರೆ. ಅಂಥ ಪಾತ್ರಗಳೆಲ್ಲಾ ʻಕೀರ್ತನೆʼಯ ಭಾಗವಾಗಿ ಹಾದುಹೋಗುತ್ತವೆ.

ಕೆಲವೊಮ್ಮೆ ಸಾವಾಸ ದೋಷದಿಂದ ಎಂಥವರೂ ಅಡ್ಡದಾರಿ ಹಿಡಿಯುತ್ತಾರೆ, ವಿವೇಕ ಕಳೆದುಕೊಂಡರೆ ವಿದ್ಯಾವಂತರು ಕೂಡಾ ದಟ್ಟ ದರಿದ್ರದ ಕೆಲಸ ಮಾಡಿಬಿಡುತ್ತಾರೆ. ದಿಢೀರಂತಾ ಕಾಸು ಮಾಡಲು ಹೋದರೆ ಮನಸ್ಸು ಸ್ಥಿಮಿತ ಕಳೆದುಕೊಳ್ಳುತ್ತದೆ ಅನ್ನೋ  ಸೂಕ್ಷ್ಮ ವಿಚಾರಗಳೆಲ್ಲಾ ʻಕ್ರಿಟಿಕಲ್‌ ಕೀರ್ತನೆʼಯ ಸತ್ವವನ್ನು ಹೆಚ್ಚಿಸಿದೆ.

ಕಥಾವಸ್ತುವೇ ಗಂಭೀರವಾಗಿರುವುದರಿಂದ ಕಾಮಿಡಿಗಿಂತಾ ಎಮೋಷನಲ್‌ ದೃಶ್ಯಗಳು ಹೆಚ್ಚು ಆಪ್ತವಾಗುತ್ತವೆ. ತಬಲಾ ನಾಣಿ-ಅಪೂರ್ವ ಜೋಡಿಯನ್ನು ಬಳಸಿಕೊಂಡು ಇನ್ನೊಂದಿಷ್ಟು ಮಜವಾದ ದೃಶ್ಯಗಳನ್ನು ಕಟ್ಟಿಲ್ಲವಲ್ಲಾ ಅನ್ನೋದು ʻಕ್ರಿಟಿಕಲ್ʼ‌ ಕೊರತೆ. ಬೆಳಗಾವಿ ಭಾಷೆಯಲ್ಲಿ ಮಾತಾಡಿ ತರಂಗ ವಿಶ್ವ ತಾಕತ್ತು ತೋರಿದ್ದಾರೆ.  ರಾಜೇಶ್‌ ನಟರಂಗ ಎಂದಿನಂತೆ ಅದ್ಭುತವಾಗಿ ನಟಿಸಿದ್ದಾರೆ. ನಟಿ ಅಪೂರ್ವ ಅವರ ದನಿ, ನೋಟಗಳಲ್ಲಿ ಏನೋ ಒಂಥರಾ ಆಕರ್ಷಣೆಯಿದೆ. ʻನನ್ನೆಸ್ರು ಮಾದ, ನಾನು ಯಾರಿಗೂ ಮಾಡಲ್ಲ ಬೇಧʼ ಅಂತಾ ಸಿಗ್ನೇಚರ್‌ ಡೈಲಾಗ್‌ ಉದುರಿಸುವ ಬಾಲನಟ ಮಹೇಂದ್ರ ಮಜಾ ಕೊಡುತ್ತಾನೆ. ಯಶಸ್‌ ಅಭಿ ಸಹಜವಾಗಿ ನಟಿಸಿದ್ದಾರೆ. ಕಡಿಮೆ ದೃಶ್ಯಗಳಲ್ಲಿ ಬಂದರೂ ಯಶ್‌ ಶೆಟ್ಟಿ ಹೆದರಿಸಿ ಹೋಗುತ್ತಾರೆ. ಶಿವ ಸೇನಾ ಮತ್ತು ಶಿವಶಂಕರ್‌ ಛಾಯಾಗ್ರಹಣ ನ್ಯಾಚುರಲ್ಲಾಗಿದೆ. ವೀರಸಮರ್ಥ ಗುಣಮಟ್ಟದ ಹಾಡುಗಳನ್ನು ಕೊಟ್ಟಿದ್ದಾರೆ. ವಿಶ್ವವಿಜೇತ ಚುರುಕಾಗಿ ಸಂಕಲನ ಮಾಡಿದ್ದಾರೆ.

ಈ ಹಿಂದೆ ಕೆಮಿಸ್ಟ್ರಿ ಆಫ್‌ ಕರಿಯಪ್ಪ ಮೂಲಕ ಹೆಸರು ಮಾಡಿದ್ದ ನಿರ್ದೇಶಕ ಕುಮಾರ್‌ ಈ ಸಲ ಕೂಡಾ ಬಡ-ಮಧ್ಯಮವರ್ಗದ ಮೇಲೆಯೇ ಕಣ್ಣಿಟ್ಟು ʻಕ್ರಿಟಿಕಲ್‌ ಕೀರ್ತನೆʼ ಸೃಷ್ಟಿಸಿದ್ದಾರೆ. ಸೋತವರ ಬದುಕನ್ನು ಪರಿಣಾಮಕಾರಿಯಾಗಿ ತೆರೆಗೆ ತರುವಲ್ಲಿ ಗೆದ್ದಿದ್ದಾರೆ. ಐ ಪಿ ಎಲ್‌ ಕ್ರಿಕೆಟ್ ಬೆಟ್ಟಿಂಗ್‌ ಆಡುವವರು, ಆಡಲು ಬಯಸಿರುವವರು ಮಾತ್ರವಲ್ಲ ಪ್ರತಿಯೊಬ್ಬರೂ‌ ʻಕ್ರಿಟಿಕಲ್‌ ಕೀರ್ತನೆʼಯನ್ನು ಒಂದ್ಸಲ ನೋಡಲೇಬೇಕು.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಅಪ್ಪನ ಹೆಸರು ಉಳಿಸ್ತೀನಿ ಅಂದ ಕ್ರೇಜ಼ಿ ಪುತ್ರ!

Previous article

“ಗರುಡ”ನ ಹಾಡಿಗೆ ಗಣ್ಯರು ಫಿದಾ!

Next article

You may also like

Comments

Leave a reply

Your email address will not be published. Required fields are marked *