ಭಾರತದ ಮಟ್ಟಿಗೆ ಕ್ರಿಕೆಟ್ ಅನ್ನೋದು ಎಂಟರ್ ಟೈನ್ಮೆಂಟ್ ಆಗಿ ಉಳಿದಿಲ್ಲ.. ಅದು ಪಕ್ಕಾ ಬ್ಯುಸಿನೆಸ್ ಆಗಿಬಿಟ್ಟಿದೆ… ಯಾವ ಕ್ರೀಡೆ ಮನರಂಜನೆಗೆ ಸೀಮಿತವಾಗಬೇಕಿತ್ತೋ ಅದು ಇಂದು ಅದೆಷ್ಟೋ ಮನೆಗಳನ್ನು ಹಾಳುಮಾಡಿ, ಲೆಕ್ಕವಿಲ್ಲದವರನ್ನು ಬೀದಿಗೆ ತಂದು ನಿಲ್ಲಿಸಿದೆ.
ಐಪಿಎಲ್ ಕ್ರಿಕೆಟ್ ಸಮಯದಲ್ಲಿ ಬೆಟ್ಟಿಂಗ್ ಕಟ್ಟಿ, ಅದರಿಂದ ಸೋತು ಜೀವ ಕಳೆದುಕೊಂಡವರ ಲೆಕ್ಕ ಸಿಗೋದಿಲ್ಲ. ಆಟೋ ಚಾಲಕರು, ವ್ಯಾಪಾರಿಗಳು, ಟೆಕ್ಕಿಗಳು, ಗೃಹಿಣಿಯರಿಂದ ಹಿಡಿದು ಸ್ಕೂಲ್ ಮಕ್ಕಳ ತನಕ ಐಪಿಎಲ್ ಬೆಟ್ಟಿಂಗ್ ಗೆ ಎಲ್ಲ ವರ್ಗದವರೂ ಅಡಿಕ್ಟ್ ಆಗಿದ್ದಾರೆ. ಇಡೀ ದೇಶವನ್ನು ಸಂಕಟದ ಇಕ್ಕಳಕ್ಕೆ ಸಿಲುಕಿಸಿರುವ ಈ ಸಮಸ್ಯೆಯ ಸುತ್ತ ಕಥೆ ಹೆಣೆದು, ಅದಕ್ಕೆ ಹಾಸ್ಯವನ್ನು ಬೆರೆಸಿ ಸಿನಿಮಾ ರೂಪದಲ್ಲಿ ಕಟ್ಟಿ ನಿಲ್ಲಿಸಿದ್ದಾರೆ. ಅದುವೇ ʻಕ್ರಿಟಿಕಲ್ ಕೀರ್ತನೆಗಳುʼ!
೨೦೧೯ರ ಹಿಟ್ ಸಿನಿಮಾಗಳಲ್ಲಿ ಬಹುಮುಖ್ಯವಾದ ಚಿತ್ರ ಕೆಮಿಸ್ಟ್ರಿ ಆಫ್ ಕರಿಯಪ್ಪ. ಎಂ. ಸಿರಿ ಮಂಜುನಾಥ್ ನಿರ್ಮಾಣದ ಕರಿಯಪ್ಪನನ್ನು ನಿರ್ದೇಶನ ಮಾಡಿದ್ದವರು ಕುಮಾರ್. ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ ನೋಡುಗರನ್ನು ಸೆಳೆಯುವುದರೊಂದಿಗೆ ಉತ್ತಮ ವ್ಯಾಪಾರ ಕೂಡಾ ಕುದುರಿಸಿಕೊಂಡಿತ್ತು. ಇದೇ ಸಿನಿಮಾದ ಮುಂದುವರೆದ ಭಾಗವಾಗಿ ಕ್ರಿಟಿಕಲ್ ಕೀರ್ತನೆಗಳು ತಯಾರಾಗಿದೆ. ಕುಂದಾಪುರ, ಬೆಂಗಳೂರು, ಮಂಡ್ಯ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ನಡೆಯುವ ಐಪಿ ಎಲ್ ಕೋರ್ಟ್ ಮೆಟ್ಟಿಲೇರುತ್ತದೆ. ಅದರ ಸುತ್ತ ಕಥೆ ಬಿಚ್ಚಿಕೊಳ್ಳುತ್ತಾ ಸಾಗುತ್ತದೆ.
ಗಂಭೀರವಾದ ವಿಚಾರವಿದ್ದರೂ ಪ್ರತಿ ಕ್ಷಣ ನಗುತ್ತಲೇ ನೋಡುವಂತೆ ಕ್ರಿಟಿಕಲ್ ಕೀರ್ತನೆಗಳು ಸೃಷ್ಟಿಯಾಗಿದೆಯಂತೆ. ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದಲ್ಲಿದ್ದ ಚಂದನ್ ಆಚಾರ್ಯ ಹೊರತುಪಡಿಸಿದರೆ ಬಹುತೇಕ ಅಲ್ಲಿದ್ದ ಕಲಾವಿದರೇ ಇಲ್ಲೂ ಇದ್ದಾರೆ. ತಬಲಾ ನಾಣಿ, ಅಪೂರ್ವ, ರಾಜೇಶ್ ನಟರಂಗ, ತರಂಗ ವಿಶ್ವ, ಅರುಣಾ ಬಾಲರಾಜ್, ಗುರುರಾಜ ಹೊಸಕೋಟೆ ಸೇರಿದಂತೆ ಸಾಕಷ್ಟು ಕಲಾವಿದರು ಕ್ರಿಟಿಕಲ್ ಕೀರ್ತನೆಗಳಲ್ಲಿ ಪಾತ್ರ ನಿರ್ವಹಿಸಿದ್ದಾರೆ. ಸ್ವತಃ ನಿರ್ದೇಶಕ ಕುಮಾರ್ ತಮ್ಮ ಸ್ನೇಹಿತರೊಡಗೂಡಿ ಚಿತ್ರ ನಿರ್ಮಾಣ ಮಾಡಿದ್ದಾರೆ.
ಸದ್ಯ ಕ್ರಿಟಿಕಲ್ ಕೀರ್ತನೆಗಳು ಚಿತ್ರದ ಅಫಿಷಿಯಲ್ ಟ್ರೇಲರ್ ಹೊರಬಂದಿದೆ. ಐಪಿಎಲ್ ಮಾಫಿಯಾದ ಸಂಪರ್ಕಕ್ಕೆ ತಗುಲಿಕೊಂಡ ನೂರಾರು ಮಂದಿ ಪ್ರತಿವರ್ಷ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ʻಐಪಿಎಲ್ ಬ್ಯಾನ್ ಆಗಬೇಕುʼ ಎನ್ನುವ ವಕೀಲರ ವಾದಕ್ಕೆ ಜಡ್ಜ್ ಹೇಳುವ ಮಾತು ʻಪೋರ್ನ್ ವೆಬ್ ಸೈಟ್ ಗಳು ಬ್ಯಾನ್ ಮಾಡಬೇಕು ಅಂದಾಗ ಅಭಿವ್ಯಕ್ತಿ ಸ್ವಾತಂತ್ರದ ಹೆಸರಲ್ಲಿ ಜನ ಬೀದಿಗಿಳಿದು ಹೋರಾಟ ಮಾಡಲಿಲ್ವಾ? ಇನ್ನು ಐಪಿಎಲ್ ಬ್ಯಾನ್ ಮಾಡಲು ಸಾಧ್ಯವಾ?ʼ ಎನ್ನುವ ದೃಶ್ಯ ಟ್ರೇಲರಿನಲ್ಲಿದೆ.
ಇದೊಂದು ತುಣುಕು ಎಷ್ಟೊಂದು ಪ್ರಶ್ನೆಗಳನ್ನು ಪ್ರೇಕ್ಷಕರ ಮನಸ್ಸಿನಲ್ಲಿ ಮೂಡಿಸುತ್ತದೆ. ಇನ್ನು ಪೂರ್ತಿ ಸಿನಿಮಾ ನೋಡುಗರನ್ನು ಸೆಳೆಯೋದರಲ್ಲಿ ಡೌಟಿಲ್ಲ. ಈ ಸಾಮಾಜಿಕ ಪಿಡುಗಿನ ವಿರುದ್ಧದ ಕಾಡುವ ಕಥೆಯೊಂದಿಗೆ ಭರಪೂರ ಮನರಂಜನೆಯನ್ನು ಬೆರೆಸಿ ಕ್ರಿಟಿಕಲ್ ಕೀರ್ತನೆಗಳು ತಯಾರಾಗಿದೆ ಅನ್ನೋದು ಟ್ರೇಲರಿನಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ನಿರ್ದೇಶಕ ಕುಮಾರ್ ಅವರಿಗೆ ಗಂಭೀರ ಸಮಸ್ಯೆಗಳನ್ನು ಸರಳವಾಗಿ ನೋಡುಗರ ಎದೆಗೆ ದಾಟಿಸುವ ಕಲೆ ಗೊತ್ತು. ಕ್ರಿಟಿಕಲ್ ಕೀರ್ತನೆಯ ಟ್ರೇಲರ್ ನೋಡಿ.. ಮಿಕ್ಕಿದ್ದು ನಿಮಗೇ ಗೊತ್ತಾಗುತ್ತದೆ.
No Comment! Be the first one.