ಅಭಿಮಾನವೆಂದರೆ ಏನು? ತಮ್ಮ ನೆಚ್ಚಿನ ನಾಯಕನಟನ ಸಿನಿಮಾ ಬಿಡುಗಡೆಯಾದಾಗ ಥಿಯೇಟರಿನ ಮುಂದೆ ಸ್ಟಾರ್ ಕಟ್ಟುವುದು, ದೊಡ್ಡ ಗಾತ್ರದ ಹಾರ ಹಾಕುವುದು, ಕೆಲವೊಮ್ಮೆ ಹಾಲಿನ ಅಭಿಷೇಕ ಮಾಡುವುದು, ಕಟೌಟು ನಿರ್ಮಿಸುವುದು, ಥಿಯೇಟರಿನ ಒಳಗೆ ನಾಣ್ಯಗಳನ್ನು, ಹೂವನ್ನು ಎರಚುವುದು, ಅವರ ಹುಟ್ಟುಹಬ್ಬವನ್ನು ತಮ್ಮದೇ ಹುಟ್ಟಿದ ದಿನದಂತೆ ಆಚರಿಸುವುದು, ಜೊತೆಗೆ ಜೈಕಾರ ಮೊಳಗಿಸುವುದು… ಬರೀ ಕನ್ನಡ ಮಾತ್ರವಲ್ಲ ಭಾರತೀಯ ಇತರೆ ರಾಜ್ಯಗಳಲ್ಲೂ ತೀರಾ ಹಿಂದಿನಿಂದ ನಡೆದುಕೊಂಡುಬಂದ ಸಂಪ್ರದಾಯವಿದು.

ತಮ್ಮ ಅಭಿಮಾನದ ನಟನ ಸಿನಿಮಾ ಬಿಡುಗಡೆ ಮತ್ತು ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸುತ್ತಲೇ ಜೊತೆ ಜೊತೆಗೆ ಸಮಾಜಸ್ನೇಹಿ, ಪರಿಸರವ್ಯಾಮೋಹಿ ಕೆಲಸಗಳನ್ನು ಮಾಡಿ ಇಡೀ ದೇಶವಲ್ಲ, ಜಗತ್ತಿಗೇ ಮಾದರಿಯಾಗುವ ನಿಟ್ಟಿನಲ್ಲಿ ಒಬ್ಬ ಸ್ಟಾರ್ ನಟನ ಆರಾಧಕರು ಮತ್ತವರ ಸಂಘ ನೆರವೇರಿಸುತ್ತಿದೆ. ಇದನ್ನು ಸಿನಿಮಾ, ಹೀರೋ, ಅಭಿಮಾನಗಳಾಚೆಗೂ ಎಲ್ಲರೂ ಮೆಚ್ಚಲೇಬೇಕು.

ಅದು ‘ಡಿ’ ಕಂಪನಿ!
ಎಂಟು ವರ್ಷಗಳ ಹಿಂದೆ ಆರಂಭಗೊಂಡ ‘ಡಿ ಕಂಪನಿ’ ಒಂದಲ್ಲಾ ಒಂದು ಸಾಮಾಜಿಕ ಕಾರ್ಯಗಳು, ಜನಪರ ಕೆಲಸಗಳನ್ನು ಮಾಡುತ್ತಲೇ ಬಂದಿದೆ. ಕರ್ನಾಟಕದ ಇಪ್ಪತ್ತು ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಡಿ ಕಂಪನಿ’ ಹಾಸನ ಘಟಕದವರು ಮೊನ್ನೆ ಸಕಲೇಶಪುರದ ರಾಮೇನಹಳ್ಳಿಯ ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದರು. ದಿನಕರ್ ತೂಗುದೀಪ ಅವರ ಹುಟ್ಟುಹಬ್ಬದ ಪ್ರಯುಕ್ತ ‘ದಿನಕರೋತ್ಸವ’ವನ್ನು ಏರ್ಪಡಿಸಿ ಶಾಲೆಯನ್ನು ಶ್ರೇಯೋಭಿವೃದ್ಧಿಗಾಗಿ ಎರಡು ವರ್ಷಗಳ ಕಾಲಕ್ಕೆ ದತ್ತು ಸ್ವೀಕರಿಸಿದರು. ‘ಟಕ್ಕರ್’ ಚಿತ್ರತಂಡ ಈ ಸಂದರ್ಭದಲ್ಲಿ ಹಾಜರಿತ್ತು. ತೂಗುದೀಪ ಕುಟುಂಬದ ಮನೋಜ್ ಕುಮಾರ್, ನಾಯಕಿ ರಂಜನಿ ರಾಘವನ್ ಮತ್ತು ನಿರ್ಮಾಪಕ ನಾಗೇಶ್ ಕೋಗಿಲು ‘ಡಿ ಕಂಪನಿ’ಯ ಕೆಲಸಕ್ಕೆ ಜೊತೆಯಾಗಿದ್ದರು. ತಮ್ಮ ಹುಟ್ಟುಹಬ್ಬವನ್ನು ಅರ್ಥಪೂರ್ಣಗೊಳಿಸಿದ ಅಭಿಮಾನಿಗಳ ಕೆಲಸವನ್ನು ಕಂಡು ಸ್ವತಃ ದಿನಕರ್ ತೂಗುದೀಪ ಸಂತಸ ವ್ಯಕ್ತಪಡಿಸಿದ್ದರು.

“ಈ ಅನುಕರಣೀಯ ಕಾರ್ಯ ಮಾಡಿರುವ ಚಾಲೆಂಜಿಗ್ ಸ್ಟಾರ್ ದರ್ಶನ್ (ಡಿ ಬಾಸ್) ಅಭಿಮಾನಿಗಳಿಗೆ ರಾಜ್ಯದ ಶಿಕ್ಷಣ ಸಚಿವನಾಗಿ ನನ್ನ ಹೃದ್ಪೂರ್ವಕ ಅಭಿನಂದನೆಗಳು” ಎಂದು ಕರ್ನಾಟಕ ರಾಜ್ಯ ಮಾನ್ಯ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಅಭಿನಂದಿಸಿ ಟ್ವೀಟ್ ಕೂಡಾ ಮಾಡಿದ್ದಾರೆ. ಒಬ್ಬ ನಟನ ಅಭಿಮಾನಿಗಳ ಮಾದರಿ ಕೆಲಸವನ್ನು ಈ ರಾಜ್ಯದ ಮಂತ್ರಿಗಳು ಮೆಚ್ಚುತ್ತಾರೆ ಎಂದರೆ ಅದರಿಂದ ಆ ನಟನ ಹೆಸರಿಗೆ ಮತ್ತಷ್ಟು ಕಳೆ ಬಂದಂತೆ ತಾನೆ?

ಇದೆಲ್ಲದಕ್ಕೂ ಕಾರಣವಾದ ‘ಡಿ ಕಂಪನಿ’ ಮತ್ತದರ ಹಿಂದಿರುವ ಶಕ್ತಿಗೆ ಒಮ್ಮೆ ಜೈ ಅನ್ನೋಣ…


