ಕೆಲ ತಿಂಗಳ ಹಿಂದೆ ಬಿಡುಗಡೆಯಾಗಿದ್ದ ಹಂಬಲ್ ಪೊಲಿಟೀಷಿಯನ್ ನೊಗ್ರಾಜ್ ಚಿತ್ರವನ್ನು ನೆನಪಿಟ್ಟುಕೊಂಡಿದ್ದೀರಾದರೆ ಡ್ಯಾನಿಶ್ ಸೇಠ್ ಎಂಬ ನಟ ಕೂಡಾ ನೆನಪಿರುತ್ತಾರೆ. ಅಷ್ಟಕ್ಕೂ ಆ ಚಿತ್ರ ಕ್ರಿಯೇಟ್ ಮಾಡಿದ್ದ ಹೈಪ್ ಏನು ಸಣ್ಣದಾ? ಅಂಥಾದ್ದೊಂದು ಭಯಾನಕ ಪಬ್ಲಿಸಿಟಿಯಿದ್ದರೂ ಕೂಡಾ ಹಂಬಲ್ ಪೊಲಿಟಿಷಿಯನ್ ನೊಗ್ರಾಜ ಥೇಟರುಗಳಲ್ಲಿ ಜನ ಇಲ್ಲದೆ ಮುಗ್ಗಲು ಹಿಡಿದಿದ್ದ!
ಈ ಸೋಲಿನಾಚೆಗೂ ಕೂಡಾ ಕನ್ನಡದ ಪ್ರೇಕ್ಷಕರು ಡ್ಯಾನಿಶ್ ಸೇಠ್ ಬಗ್ಗೆ ಸಂಪೂರ್ಣವಾಗೇನೂ ನಂಬಿಕೆ ಕಳೆದುಕೊಂಡಿರಲಿಲ್ಲ. ಯಾಕೆಂದರೆ ಕ್ರಿಯೇಟಿವ್ ಆಗಿ ಆಲೋಚಿಸುವ ಮತ್ತು ಒಂದೊಳ್ಳೆ ಚಿತ್ರ ಮಾಡ ಬಹುದಾದ ಕಸುವು ಅವರಲ್ಲಿದೆ ಅಂತಲೇ ನಂಬಿದ್ದರು. ಹೀಗಿದ್ದರೂ ನಾಪತ್ತೆಯಾಗಿದ್ದ ಡ್ಯಾನಿಶ್ ಎರಡನೇ ಚಿತ್ರವೊಂದೀಗ ಸದ್ದು ಮಾಡಲಾರಂಭಿಸಿದೆ!
ಈಗ ಹರಡಿಕೊಂಡಿರೋ ಸುದ್ದಿಯ ಪ್ರಕಾರವೇ ಹೇಳೋದಾದರೆ ಡ್ಯಾನಿಶ್ ಸೇಠ್ ಅವರ ಎರಡನೇ ಚಿತ್ರವನ್ನು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಿರ್ಮಾಣ ಮಾಡಲಿದ್ದಾರೆ. ಈ ಚಿತ್ರವನ್ನು ಖ್ಯಾತ ನಿರ್ದೇಶಕ ನಾಗಾಭರಣರ ಪುತ್ರ ಪನ್ನಗಾಭರಣ ನಿರ್ದೇಶನ ಮಾಡಲಿದ್ದಾರೆ. ನಂಬಲರ್ಹ ಮೂಲಗಳ ಪ್ರಕಾರ ಈ ಚಿತ್ರದ ಬಗ್ಗೆ ಪುನೀತ್ ಅವರು ಮಾತುಕತೆಯಲ್ಲಿ ತಲ್ಲೀನರಾಗಿದ್ದಾರೆ. ಪನ್ನಗ ಹೇಳಿದ ಕಥೆಯೂ ಓಕೆ ಆಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳೋದಷ್ಟೇ ಬಾಕಿ ಉಳಿದಿದೆ!
ಪುನೀತ್ ರಾಜ್ ಕುಮಾರ್ ನಿರ್ಮಾಣ ಮಾಡಿರೋ ಪಿಆರ್ಕೆ ಆಡಿಯೋ ಸಂಸ್ಥೆ ಈಗಾಗಲೇ ಗೆಲುವು ಕಂಡಿದೆ. ಅದರ ಮೂಲಕ ಚೆಂದದ ಹಾಡುಗಳು ಲೋಕಾರ್ಪಣೆಗೊಳ್ಳುತ್ತಿವೆ. ಈ ಮೂಲಕ ಹೊಸಾ ಬಗೆಯ ಚಿತ್ರಗಳಿಗೆ ಪುನೀತ್ ಬೆಂಬಲವಾಗಿ ನಿಂತಿದ್ದಾರೆ. ಇದೀಗ ಪುನೀತ್ ತಮ್ಮ ಸಂಸ್ಥೆಯ ಮೂಲಕ ಚಿತ್ರ ನಿರ್ಮಾಣಕ್ಕೂ ಇಳಿದಿದ್ದಾರೆ. ಈಗ ಹರಡಿಕೊಂಡಿರೋ ಸುದ್ದಿಗಳೆಲ್ಲ ಹೌದೆಂದಾದರೆ ಇಷ್ಟರಲ್ಲಿಯೇ ಪುನೀತ್ ನಿರ್ಮಾಣದ ಡ್ಯಾನಿಶ್ ಸೇಠ್ ಎರಡನೇ ಚಿತ್ರ ಅಧಿಕೃತವಾಗಿಯೇ ಘೋಷಣೆಯಾಗಲಿದೆ!
#
No Comment! Be the first one.