ಕನ್ನಡ ರಿಯಾಲಿಟಿ ಶೋಗಳಲ್ಲಿ ತನ್ನದೇ ಆದಂಥ ಛಾಪು ಮೂಡಿಸಿದ ಡ್ರಾಮಾ ಜೂನಿಯರ್ಸ್ ರಾಜ್ಯದ ಪ್ರತಿಭಾವಂತ ಮಕ್ಕಳನ್ನು ಶೋಧಿಸಿ ಅವರ ನಟನಾ ಕೌಶಲ್ಯಕ್ಕೆ, ಅಭಿನಯ ಸಾಮರ್ಥ್ಯಕ್ಕೆ ವೇದಿಕೆ ಕಲ್ಪಿಸಿದೆ. ಪ್ರೇಕ್ಷಕರಿಗೆ ಕೇವಲ ಮನರಂಜನೆಯನ್ನಷ್ಟೆ ನೀಡದೆ, ಸಾಮಾಜಿಕ ಕಳಕಳಿಯ ಸಂದೇಶ ಸಾರುವ ನೂರಾರು ನಾಟಕಗಳನ್ನು ಡ್ರಾಮಾ ಜೂನಿಯರ್ಸ್ ಆರಂಭದಿಂದಲೂ ಮಾಡಿಕೊಂಡು ಬಂದಿದೆ.
ಈ ಬಾರಿಯ ಡ್ರಾಮಾ ಜೂನಿಯರ್ಸ್ ಸೀಜನ್ ೩ ಮತ್ತಷ್ಟು ವಿಶೇಷವಾದ ಪ್ರಯೋಗಗಳಿಗೆ ನಾಂದಿ ಹಾಡಿದೆ. ಮಕ್ಕಳಿಗೆ ಮನರಂಜನೆಯ ಜೊತೆಗೆ ಕನ್ನಡ ಮಾಧ್ಯಮದ ಒಂದನೆ ತರಗತಿಯಿಂದ ಹತ್ತನೆ ತರಗತಿಯ ಪಠ್ಯಪುಸ್ತಕದಲ್ಲಿನ ಪಾಠಗಳನ್ನು ತೆಗೆದುಕೊಂಡು ಮಕ್ಕಳಿಂದ ನಾಟಕ ಮಾಡಿಸುತ್ತಿರುವುದು ಶಾಲಾಮಕ್ಕಳ ಕನ್ನಡ ಕಲಿಕೆಗೆ ತುಂಬಾ ಸಹಕಾರಿಯಾಗಿದೆ.
ಇದರ ಜೊತೆಗೆ ತಮ್ಮ ಜೀವನವನ್ನ ಇತರರಿಗಾಗಿ ಮುಡಿಪಾಗಿಟ್ಟು ಸಾಮನ್ಯರೊಡನೆ, ಸಾಮಾನ್ಯರಂತೆ ಬದುಕುತ್ತಿರುವ ಅಸಾಮಾನ್ಯ ಸಾಧಕರನ್ನು ವೇದಿಕೆಗೆ ಕರೆಸಿ ಅವರನ್ನು ರಿಯಲ್ಸ್ಟಾರ್ ಎಂದು ಗೌರವಿಸುವ ಕೆಲಸ ಮಾಡುತ್ತಿದೆ. ಜೊತೆಗೆ ಅವರ ಜೀವನಕಥೆಯನ್ನ ನಾಟಕವನ್ನಾಗಿ ಸಿದ್ಧಪಡಿಸಿ, ಅವರ ಮುಂದೆಯೇ ಮಕ್ಕಳಿಂದ ಆಡಿ ತೋರಿಸಲಾಗುತ್ತಿದೆ. ಶ್ರೀಮತಿ ಅಶ್ವಿನಿ ಅಂಗಡಿ, ಕರ್ನಾಟಕದ ಭಗೀರಥ ಕೆರೆ ಕಾಮೇಗೌಡರು, ನಿರಾಶ್ರಿತರಿಗೆ ಬೆಳಕಾಗಿರುವ ಆಟೋರಾಜ, ವಿಜ್ಞಾನಿ ನೆಟ್ಕಲ್ ಪ್ರತಾಪ್, ಡಾ.ವಿಶಾಲ್ರಾವ್, ಅಕ್ಷರ ಸಂತ ಹರೇಕಳ ಹಜಬ್ಬ, ಆಧುನಿಕ ಸಂತ ಇಬ್ರಾಹಿಂ ಸುತಾರ, ಶ್ರೀಮತಿ ನಾಗರತ್ನರಂಥ ಸಾಧಕರೆಲ್ಲ ಈ ವೇದಿಕೆಗೆ ಬಂದು ಹೋಗಿದ್ದಾರೆ.
ಈವಾರ ಸೈಯದ್ ಸಲ್ಲಾವುದ್ದೀನ್ ಪಾಷಾ ಎಂಬ ಮತ್ತೊಬ್ಬ ಸಾಧಕರನ್ನು ಕರೆಸಿ ವಾರದ ರಿಯಲ್ಸ್ಟಾರ್ ಬಿರುದು ನೀಡಿ ಗೌರವಿಸುತ್ತಿದೆ. ಇವರ ಮುತ್ತಾತ ಮೈಸೂರು ಮಹರಾಜರ ಆಸ್ಥಾನದಲ್ಲಿ ನಾಟಿ ವೈದ್ಯರಾಗಿದ್ದವರು. ಇವರ ತಾತ ವಿಶೇಷಚೇತನ ಮಕ್ಕಳಿಗೆ ನಾಟಿ ಔಷಧ ನೀಡುತ್ತಿದ್ದರು, ತಾತನೊಡನೆ ಸೇರಿ ವಿಶೇಷಚೇತನ ಮಕ್ಕಳಿಗೆ ಔಷಧ ನೀಡುತ್ತಿದ್ದ ಸಲ್ಲಾವುದ್ದೀನ್ರಿಗೆ ಅಂಥ ಮಕ್ಕಳ ಮೇಲೆ ವಿಶೇಷ ಒಲವು. ಬಾಲ್ಯದಲ್ಲೆ ನೃತ್ಯ, ನಾಟಕಗಳಲ್ಲಿ ಆಸಕ್ತಿ ಬೆಳೆಸಿಕೊಂಡ ಸಲ್ಲಾವುದ್ದೀನ್, ಹಲವಾರು ಸಾಂಸ್ಕೃತಿಕ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ಭಗವದ್ಗೀತೆಯನ್ನು ಅಧ್ಯಯನ ಮಾಡಿರುವ ಸಲ್ಲಾವುದ್ದೀನ್ರ ಬಾಯಲ್ಲಿ ಬರುವ ಭಗವದ್ಗೀತೆಯ ಶ್ಲೋಕಗಳು, ಬಸವಣ್ಣನವರ ವಚನಗಳು ಪಂಡಿತರನ್ನು ನಾಚಿಸುತ್ತವೆ. ತಾವು ಕಲಿತ ಕಲೆಯನ್ನು ವಿಶೇಷಚೇತನ ಮಕ್ಕಳಿಗೆ ಧಾರೆಎರೆದು ಅವರಿಂದ ವೀಲ್ಚೇರ್ ಮೇಲೆ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳನ್ನು, ಭರತನಾಟ್ಯ, ಕಥಕ್ನಂತಹ ವಿನೂತನ ನೃತ್ಯ ರೂಪಕಗಳನ್ನು ಪ್ರಪಂಚಕ್ಕೆ ಪರಿಚಯಿಸಿದ್ದಾರೆ. ಇಂಗ್ಲೆಂಡ್ ಪಾರ್ಲಿಮೆಂಟ್, ಕೆನಡ ಪಾರ್ಲಿಮೆಂಟ್ ಸಲ್ಲಾವುದ್ದೀನ್ರನ್ನು ಗೌರವಿಸಿವೆ. ಇದಲ್ಲದೆ ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ಸೇರಿದಂತೆ ಮೂವತ್ತುಕ್ಕು ಹೆಚ್ಚು ದೇಶಗಳಲ್ಲಿ ತಮ್ಮ ಎಬಿಲಿಟಿ ಅನ್ಲಿಮಿಟೆಡ್ ಸಂಸ್ಥೆಯ ಮಕ್ಕಳ ಮೂಲಕ ಅದ್ಭುತವಾದ ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ. ಇಂತಹ ಸಾಧಕರಿಗೆ ರಾಜ್ಯ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ, ಅಂತರರಾಷ್ಟ್ರಿಯ ಮಟ್ಟದ ಪ್ರಶಸ್ತಿಗಳು ಕೂಡ ಸಂದಿವೆ.
ಸಂಕ್ರಾಂತಿ ಹಬ್ಬದ ಪ್ರಯುಕ್ತ ನಾಡಿನ ಜನತೆಗೆ ಈ ವಾರದ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ೪ ಕಾಮಿಡಿ ಆಕ್ಟ್ಗಳ ಜೊತೆಗೆ ಸೈಯ್ಯದ್ ಸಲ್ಲಾವುದ್ದೀನ್ ಪಾಷಾರವರ ಜೀವನದ ಕಥೆ ಹಾಗೂ ಶ್ರೀ ಶಬರಿಮಲೆ ಸ್ವಾಮಿ ಅಯ್ಯಪ್ಪನ ಕಥೆಯನ್ನ ಮಕ್ಕಳು ಸಣ್ಣ ನಾಟಕದ ಮೂಲಕ ಪ್ರಸ್ತುತ ಪಡಿಸುತ್ತಾರೆ. ಇದೇ ೧೨, ೧೩ರ ಶನಿವಾರ ಮತ್ತು ಭಾನುವಾರ ರಾತ್ರಿ ೯:೩೦ಕ್ಕೆ ಜ಼ೀ ಕನ್ನಡ ವಾಹಿನಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.
#