ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಸಿನಿಮಾಗಳೆಂದರೆ ಕೆ.ಜಿ. ರಸ್ತೆಯ ಪ್ರಮುಖ ಚಿತ್ರಮಂದಿರಗಳಲ್ಲಿ ಏನಿಲ್ಲವೆಂದರೂ ಹಂಡ್ರೆಡ್ ಡೇಸ್, ಕಡೇ ಪಕ್ಷ ಫಿಫ್ಟಿ ಡೇಸ್ ಕನ್ಫರ್ಮ್ ಅನ್ನುವಂತಿತ್ತು. ಆದರೆ ರಜನಿಕಾಂತ್ ನಟನೆಯ ದರ್ಬಾರ್ ಚಿತ್ರವನ್ನು ನರ್ತಕಿ ಥಿಯೇಟರಿನಲ್ಲಿ ರಿಲೀಸ್ ಮಾಡಲಾಗುತ್ತಿದೆ. ಆ ಮೂಲಕ ಇಪ್ಪತ್ತೈದೇ ದಿನಕ್ಕೆ ಒಡೆಯನನ್ನು ಚಿತ್ರಮಂದಿರದಿಂದ ಒಕ್ಕಲೆಬ್ಬಿಸಲಾಗುತ್ತಿದೆ!
ಪರಭಾಷೆಯ ಸ್ಟಾರ್ ಸಿನಿಮಾಗಳನ್ನು ಆಯಾ ರಾಜ್ಯದಲ್ಲಿ ಬಿಡುಗಡೆಯಾದ ಒಂದು ವಾರದ ನಂತರವಷ್ಟೇ ಕರ್ನಾಟಕದಲ್ಲಿ ರಿಲೀಸ್ ಮಾಡಬೇಕು ಅನ್ನೋ ಕೂಗು ಆಗಾಗ ಕೇಳಿಬರುತ್ತಲೇ ಇರುತ್ತದೆ. ನಿಗದಿತ ಚಿತ್ರಮಂದಿರಗಳಲ್ಲಿ ಮಾತ್ರ ಇತರೆ ಭಾಷೆಯ ಸಿನಿಮಾಗಳು ಬಿಡಗಡೆಯಾಗಬೇಕು ಅಂತಾ ಜನ ಅನಾದಿಕಾಲದಿಂದಲೂ ಬಾಯಿ ಬಡಿದುಕೊಳ್ಳುತ್ತಲೇ ಇದ್ದಾರೆ. ಆದರೆ ಅದ್ಯಾವುದೂ ಕಾರ್ಯರೂಪಕ್ಕೆ ಬರಲೇ ಇಲ್ಲ. ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳನ್ನು ವಿತರಿಸೋರು ನಮ್ಮವರೇ ಆದ್ದರಿಂದ ಹಾವಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲದಂತಾಗಿದೆ. ಇನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಾಗಲಿ, ಇಲ್ಲಿರುವ ಇತರೇ ಸಿನಿಮಾ ಸಂಘಟನೆಗಳಾಗಲಿ ಮೇಲ್ನೋಟಕ್ಕೆ ಪ್ರತಿರೋಧ ವ್ಯಕ್ತಪಡಿಸಿ ಒಳಗಿಂದೊಳಗೇ ಮಿಲಾಕತ್ ಮಾಡಿಕೊಂಡು ಸೈಲೆಂಟಾಗಿಬಿಡುತ್ತವೆ. ಬೇರೆ ರಾಜ್ಯದ ಸಿನಿಮಾಗಳು ನಿಯಮ ಉಲ್ಲಂಘಿಸಿ ಬಿಡುಗಡೆಯಾದಾಗ ಉಗ್ರ ಹೋರಾಟಕ್ಕೆ ಮುಂದಾಗುವ ಕೆಲ ಕನ್ನಡಪರ ಸಂಘಟನೆಗಳಿಗೆ ಕೈ ಬೆಚ್ಚಗೆ ಮಾಡಿದರೆ ಬಾಯಿ ಮುಚ್ಚುತ್ತವೆ ಅನ್ನೋ ಆರೋಪ ಕೂಡಾ ಇದೆ. ಕನ್ನಡ ಚಿತ್ರರಂಗದ ಹಿತ ಕಾಯಲೆಂದೇ ಇರುವ ಫಿಲಂ ಚೇಂಬರ್’ನಲ್ಲಿ ಇಷ್ಟು ದಿನ ಬಂದ ಅನೇಕರು ಅಳುವ ಮಕ್ಕಳಂತೆ ವರ್ತಿಸಿದ್ದು, ಹಾಲು ಕುಡಿಸಿದಾಗ ಕಣ್ಮುಚ್ಚಿ ಮಲಗಿದ್ದು ಎಲ್ಲರಿಗೂ ಗೊತ್ತು!
ಇನ್ನು, ಡಬ್ಬಿಂಗ್ ಸಿನಿಮಾಗಳು ಬರುತ್ತವೆ ಅಂತಾ ನಿರ್ಧಾರವಾದಾಗ ಕನ್ನಡ ಸಿನಿಮಾಗಳಿಗೆ ಉಳಿಗಾಲವಿಲ್ಲವೆನ್ನುವ ಅಭಿಪ್ರಾಯ ವ್ಯಾಪಕವಾಗಿ ಕೇಳಿಬಂದಿತ್ತು. ಆದರೆ, ಸೈರಾ ಮತ್ತು ದಬಾಂಗ್-೩ ಅಲ್ಪಸ್ವಲ್ಪ ಲಾಭ ಮಾಡಿದ್ದು ಬಿಟ್ಟರೆ, ಬಂದ ಡಬ್ಬಿಂಗ್ ಸಿನಿಮಾಗಳು ಮೇಲಿಂದ ಮೇಲೆ ಅಸುನೀಗಿದ್ದೇ ಹೆಚ್ಚು. ಹೀಗಾಗಿ ತೆಲುಗು, ತಮಿಳು, ಹಿಂದಿ ಚಿತ್ರರಂಗದ ಸ್ಟಾರ್ ಸಿನಿಮಾಗಳನ್ನು ಡಬ್ಬಿಂಗ್ ಮಾಡಿ ಕನ್ನಡಿಗರ ಮೇಲೆ ಹೇರುವ ಪ್ರಯತ್ನ ಬಹುತೇಕ ವಿಫಲವಾಗಿದೆ. ಹಾಗೆ ನೋಡಿದರೆ ರಜನಿಕಾಂತ್ ನಟನೆಯ ಸಿನಿಮಾಗಳನ್ನು ಡಬ್ಬಿಂಗ್ ಮಾಡಿ ಬಿಡುಗಡೆ ಮಾಡಿದರೆ ಅದು ಗೆಲ್ಲುವ ಸಾಧ್ಯತೆಯೂ ಇದೆ. ಸ್ವತಃ ರಜನೀಕಾಂತ್ ಅವರದ್ದೇ ದನಿಯಲ್ಲಿ ಡಬ್ಬಿಂಗ್ ಮಾಡಿಸಿದರೆ ಮಾತ್ರ ಅದು ಸಾಧ್ಯ. ಆದರೆ ರಜನಿ ಈ ಹಿಂದೆ ರೋಬೋ-೨ ಸಿನಿಮಾಗಾಗಲಿ, ಈಗ ದರ್ಬಾರ್ ಚಿತ್ರಕ್ಕಾಗಲಿ ಕನ್ನಡದಲ್ಲಿ ಡಬ್ ಮಾಡಲು ಒಪ್ಪಿಲ್ಲ.
ಆದರೇನಂತೆ, ನೇರವಾಗಿ ಕನ್ನಡ ಚಿತ್ರಮಂದಿರಗಳನ್ನು ಕಸಿದುಕೊಂಡು ತಮಿಳಿನ ದರ್ಬಾರ್ ಸಿನಿಮಾವನ್ನು ನುಗ್ಗಿಸುವ ಆನಾಹುತಕಾರಿ ಕೆಲಸಕ್ಕೆ ವಿತರಕರು ಮುಂದಾಗಿದ್ದಾರೆ. ಧೀರಜ್ ಎಂಟರ್ ಪ್ರೈಸಸ್’ನ ಮೋಹನ್ ದಾಸ್ ಪೈ ಸದ್ಯ ದರ್ಬಾರ್ ಚಿತ್ರದ ವಿತರಣೆಯ ಹಕ್ಕು ಪಡೆದಿದ್ದು, ಕನ್ನಡ ಸಿನಿಮಾಗಳಿಗೆ ಕಂಟಕವಾಗುವ ಕೆಲಸಕ್ಕೆ ಕೈ ಇಟ್ಟಿದ್ದಾರೆ.
ನರ್ತಕಿ ಚಿತ್ರಮಂದಿರ ಈ ಹಿಂದಿನಿಂದಲೂ ಕನ್ನಡ ಸಿನಿಮಾಗಳಿಗೆ ಮೀಸಲಾದ ಪ್ರಮುಖ ಥಿಯೇಟರ್ ಎಂಬ ಹೆಸರು ಪಡೆದಿದೆ. ಪಕ್ಕದಲ್ಲೇ ಇರುವ ಸಂತೋಷ್ ಚಿತ್ರಮಂದಿರದಲ್ಲಿ ಆಗೊಮ್ಮೆ ಈಗೊಮ್ಮೆ ಅನ್ಯಭಾಷೆಯ ಸಿನಿಮಾಗಳು ರಿಲೀಸಾದರೂ, ನರ್ತಕಿ ಮಾತ್ರ ಕನ್ನಡದ ಕ್ವಾಲಿಟಿ ಸಿನಿಮಾಗಳಿಗೆ ಮಾತ್ರ ಮೀಸಲಾಗಿದೆ. ಹೀಗಿರುವಾಗ ಉತ್ತಮ ಪ್ರದರ್ಶನ ಕಾಣುತ್ತಿರುವ ಒಡೆಯ ಸಿನಿಮಾವನ್ನು ಬಲವಂತವಾಗಿ ಹೊರಹಾಕಿ ಆ ಜಾಗಕ್ಕೆ ದರ್ಬಾರ್ ಚಿತ್ರವನ್ನು ತಂದು ಕೂರಿಸಲಾಗುತ್ತಿದೆ. ಅಲ್ಲದೆ, ಕರ್ನಾಟಕದಲ್ಲಿ ಸರಿಸುಮಾರು ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ದರ್ಬಾರ್ ಪ್ರದರ್ಶನಗೊಳ್ಳಲಿದೆ.
ಬಾಕ್ಸಾಫೀಸ್ ಕಿಂಗ್ ಅಂತಲೇ ಹೆಸರು ಮಾಡಿರುವ, ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕನ್ನಡದ ಸೂಪರ್ ಸ್ಟಾರ್ ದರ್ಶನ್ ಅವರ ಸಿನಿಮಾಗೇ ಇಂತಾ ಗತಿ ಬಂದೊದಗಿದರೆ, ಇನ್ನು ಇತರೆ ಸ್ಟಾರ್ಗಳು, ಸಣ್ಣ ಪುಟ್ಟ ಹೀರೋಗಳ ಚಿತ್ರಗಳಿಗೆ ಕರ್ನಾಟಕದಲ್ಲಿ ಉಳಿಗಾಲವೆಲ್ಲಿ?!
ಜೈ ಕರ್ನಾಟಕ ಮಾತೆ!!
Comments