ಸೂಪರ್ ಸ್ಟಾರ್ ರಜನಿಕಾಂತ್, ಲೇಡಿ ಸೂಪರ್ ಸ್ಟಾರ್ ನಯನ್ ತಾರಾ, ಸುನೀಲ್ ಶೆಟ್ಟಿ, ಯೋಗಿ ಬಾಬು, ದಿಲೀಪ್ ತಾಹೀರ್ ಮುಂತಾದ ನಟರ ದಂಡು, ಅನಿರುದ್ಧ್ ಸಂಗೀತ ನಿರ್ದೇಶನದ ಜೊತೆಗೆ ಭಾರತೀಯ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಮುರುಗದಾಸ್ ನಿರ್ದೇಶನದ ಸಿನಿಮಾ ದರ್ಬಾರ್ ತೆರೆಗೆ ಬಂದಿದೆ.

ಮುರುಗದಾಸ್ ಸಿನಿಮಾ ಅಂದರೆ ಸಾಮಾಜಿಕ ಸಂದೇಶದ ಜೊತೆಗೆ ಭರ್ತಿ ಮನರಂಜನೆಯಿರುತ್ತದೆ ಅನ್ನೋದು ನಂಬಿಕೆ. ಸಮಾಜವನ್ನು ಹಿಂಡುತ್ತಿರುವ, ಜಾಗತಿಕ ಸಮಸ್ಯೆಯನ್ನು ಪ್ರಧಾನವಾಗಿಟ್ಟುಕೊಂಡು ಕಥೆ ಕಟ್ಟುವುದು, ಅದರ ಜೊತೆಗೆ ಫ್ಯಾಮಿಲಿ ಆಡಿಯನ್ಸ್’ಗೆ ಬೇಕಿರುವ ಸೆಂಟಿಮೆಂಟನ್ನು ಮಿಕ್ಸ್ ಮಾಡಿ ತೆರೆಗರ್ಪಿಸೋದು ಮುರುಗದಾಸ್ ಶೈಲಿ. ಈ ಸಲ ಮುರುಗದಾಸ್ ಯಾವ ಸಮಸ್ಯೆಯನ್ನು ಟಾರ್ಗೆಟ್ ಮಾಡಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲಿತ್ತು. ಸಾಕಷ್ಟು ವರ್ಷಗಳ ನಂತರ ರಜನಿ ಇಲ್ಲಿ ಖಾಕಿ ತೊಟ್ಟಿದ್ದು ಮತ್ತಷ್ಟು ಕ್ಯೂರಿಯಾಸಿಟಿಗೆ ಕಾರಣವಾಗಿತ್ತು.

ತೀರಾ ಸಣ್ಣ ವಯಸ್ಸಿಗೇ ಹೆಂಡತಿಯನ್ನು ಕಳೆದುಕೊಂಡು, ಮಗಳೊಂದಿಗೆ ಬದುಕು ಸಾಗಿಸುವ ಪೊಲೀಸ್ ಕಮಿಷನರ್ ಆದಿತ್ಯ ಅರುಣಾಚಲಂ ಆಗಿ ರಜನಿ ಇಲ್ಲಿ ಅವತಾರವೆತ್ತಿದ್ದಾರೆ. ಮೊದಲು ಅಪ್ಪನಿಗೊಬ್ಬಳು ಹೆಂಡತಿಯನ್ನು ಹುಡುಕಿ, ನಂತರ ತಾನು ಮದುವೆಯಾಗಲು ಬಯಸುವ ಮಗಳು, ಹಿಂದೂ ಮುಂದು ನೋಡದೆ ದುಷ್ಟರನ್ನು ಸದೆ ಬಡೆಯುವ ಅಪ್ಪ, ಅದರ ನಡುವೆಯೇ ಸಂಗಾತಿಯ ಹುಡುಕಾಟ, ಕಾಮಿಡಿ ಎಲ್ಲವೂ ಸೇರಿಕೊಂಡು ಮೊದಲ ಭಾಗ ರಜನಿ ಅಭಿಮಾನಿಗಳಿಗೆ ರಸದೌತಣ ಸಿಕ್ಕಂತಾಗಿದೆ. ಹೆಣ್ಣುಮಕ್ಕಳ ಅಪಹರಣ, ಕಳ್ಳಸಾಗಾಣಿಕೆ, ಡ್ರಗ್ಸ್ ಮಾಫಿಯಾದ ಸುತ್ತ ಕಥೆ ಚಲಿಸುತ್ತದೆ. ಈ ಕಥೆಯನ್ನು ಮುಂಬೈ ಮಹಾನಗರವನ್ನು ಕೇಂದ್ರೀಕರಿಸಿ ರೂಪಿಸಲಾಗಿದೆ. ಅಲ್ಲಿಂದ ಅಂತಾರಾಷ್ಟ್ರೀಯ ಮಾಫಿಯಾದತ್ತ ಕಥೆ ಹೊರಳಿಕೊಳ್ಳುತ್ತದೆ. ಡ್ರಗ್ ಡೀಲುಗಳು, ಹೆಣ್ಣುಮಕ್ಕಳ ಶೋಷಣೆ, ಜೈಲು, ರೌಡಿಸಂ, ಕೊಲೆ, ರಕ್ತಪಾತ, ಪೊಲೀಸ್ ಇಲಾಖೆಯ ಅಸಹಾಯಕತೆಗಳು ಹಂತ ಹಂತವಾಗಿ ತೆರೆದುಕೊಂಡಿದೆ. ದ್ವಿತೀಯಾರ್ಧದಲ್ಲಿ ಮಗಳ ಸಾವಿನ ನಂತರ ಕಥೆಗೆ ಕೂಡಾ ಮಂಕು ಆವರಿಸಿಕೊಳ್ಳುತ್ತದೆ.

ರೋಬೋದಂಥಾ ಕಾರ್ಟೂನ್ ಸಿನಿಮಾ ನೋಡಿ ರಜನಿ ಬಗ್ಗೆ ಬೇಸರಿಸಿಕೊಂಡಿದ್ದ ಪ್ರೇಕ್ಷಕರ ಮನಸ್ಸಿಗೆ ಸಮಾಧಾನವಾಗುವಂತೆ ತಲೈವಾ ದರ್ಬಾರು ನಡೆಸಿದ್ದಾರೆ. ಹೇರ್ ಸ್ಟೈಲು, ಕಾಸ್ಟೂಮು, ರೋಚಕವಾದ ಫೈಟುಗಳು ಕಮರ್ಷಿಯಲ್ ಸಿನಿಮಾಗಳನ್ನು ಬಯಸುವ ಚಿತ್ರ ಪ್ರೇಮಿಗಳಿಗೆ ಖುಷಿ ಕೊಡುತ್ತದೆ. ಟೈಟಲ್ ಸಾಂಗ್ ಬಿಟ್ಟು ಇನ್ಯಾವುದೂ ಮನಸ್ಸಿನಲ್ಲುಳಿಯುವುದಿಲ್ಲ. ಆದರೆ, ಹಿನ್ನೆಲೆ ಸಂಗೀತ ಅದ್ಭುತವಾಗಿದೆ. ರಜನಿಕಾಂತ್ ಥೇಟು ತಮ್ಮ ತೊಂಭತ್ತರ ದಶಕದ ಸಿನಿಮಾಗಳಂತೆ ಚುರುಕಾಗಿ ನಟಿಸಿದ್ದಾರೆ. ಎಂದಿನಂತೆ ಅವರ ಸ್ಟೈಲು, ಮ್ಯಾನರಿಸಮ್ಮುಗಳು ಶ್ಯಾನೆ ಮಜಾ ಕೊಡುತ್ತವೆ.

ಎಪ್ಪತ್ತು ವರ್ಷದ ವಯೋವೃದ್ಧ ರಜನಿಯನ್ನು ಇಷ್ಟು ಯಂಗ್ ಮತ್ತು ಎನರ್ಜಿಟಿಕ್ ಆಗಿ ತೋರಿಸುವುದು ಸಾಮಾನ್ಯವಾದ ಕೆಲಸವಲ್ಲ. ಕೊರತೆಗಳನ್ನೆಲ್ಲಾ ಮರೆಮಾಚುವಂತೆ ರಜನಿ ಕೂಡಾ ಅಮೋಘವಾಗಿ ನಟಿಸಿದ್ದಾರೆ. ಸೂಪರ್ ಸ್ಟಾರ್ ಭಕ್ತರು, ಮುರುಗದಾಸ್ ಅಭಿಮಾನಿಗಳು ಸಿನಿಮಾವನ್ನು ನೋಡಿ ಎಂಜಾಯ್ ಮಾಡಬಹುದು.

ARUN KUMAR G
ARUN KUMAR G Senior Film Journalist GAURI LANKESH PATRIKE, KARMAVEERA and others

ಕೆಮಿಸ್ಟ್ರಿ ಆಫ್ ಅರ್ಜುನ್ ಮಂಜುನಾಥ್!

Previous article

ಕಾಲಾಂತಕನ ಕತೆ ಏನಿರಬಹುದು?

Next article

You may also like

Comments

Leave a reply

Your email address will not be published.