ಈಗೀಗ ಯಾವ ಭಯವಿಲ್ಲದೇ ರಿಲೀಸ್ ಆಗದಿರುವ, ಈಗಷ್ಟೇ ರಿಲೀಸ್ ಆಗಿರುವ ಬಹುತೇಕ ಸಿನಿಮಾಗಳ ಪೈರಸಿ, ಸೀನ್ ಗಳು ಲೀಕ್ ಹಾವಳಿ ನಿರ್ಭಯವಾಗಿ ನಡೆಯುತ್ತಲೇ ಇದೆ. ಇಂತಹ ವಿದ್ಯಮಾನ ಸಿನಿಮಾ ಮಾರುಕಟ್ಟೆ ವಿಚಾರದಲ್ಲಿ ಅಡ್ಡಿಯುಂಟು ಮಾಡಬಲ್ಲದು ಎಂಬ ಅರಿವಿದ್ದರೂ, ಅರಿವಿಲ್ಲದಂತೆ ವಿಕೃತವಾಗಿ ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡುವವರ ಕಾಟ ಹೆಚ್ಚಾಗುತ್ತಿದೆ.
ಚಿತ್ರತಂಡ ಎಷ್ಟೇ ಜಾಗರೂಕತೆಯಿಂದ ಇದ್ದರೂ ಕಿಡಿಗೇಡಿಗಳು ಸಿನಿಮಾ ಶೂಟಿಂಗ್ ಸಮಯಲ್ಲಿ ಕದ್ದು ಮುಚ್ಚಿ ಫೋಟೋ, ವಿಡಿಯೋ ಶೂಟ್ ಮಾಡಿ, ಸೋ಼ಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ. ಸದ್ಯ ರಜನಿ ಮತ್ತು ಮುರುಗದಾಸ್ ಕಾಂಬಿನೇಷನ್ನಿನ ದರ್ಬಾರ್ ಸಿನಿಮಾವೂ ಇಂತಹುದೇ ಕಾಟಕ್ಕೆ ಸಿಲುಕಿ ನರಳುವಂತಾಗಿದೆ.
ಯಾವುದೇ ಸಿನಿಮಾ ರಿಲೀಸ್ ಆಗುವವರೆಗೂ ಚಿತ್ರದ ಕಥೆ, ಹೀರೋ, ಹೀರೋಯಿನ್ಸ್, ಪ್ರಮುಖ ಪಾತ್ರಗಳು, ಅವರ ಲುಕ್ಕು, ಸ್ಟೈಲು ಗಳನ್ನು ರಿವೀಲ್ ಮಾಡದೇ ಸೀಕ್ರೆಟ್ ಕಾಯ್ದುಕೊಳ್ಳುವುದು ವಾಡಿಕೆ. ಶೂಟಿಂಗ್ ಹಂತದಲ್ಲಿಯೇ ಇಂತಹ ಕೌತುಕಗಳು ಲೀಕ್ ಆದರೆ ಸಿನಿಮಾ ಸೃಷ್ಟಿಸಬಹುದಾದ ಹೈಪ್ ಕಡಿಮೆಯಾಗುವ ಸಾಧ್ಯತೆಗಳಿರುತ್ತವೆ. ಆದರೆ ಕೆಲವು ವಿಕೃತರು ಸೋಶಿಯಲ್ ಮೀಡಿಯಾ ವೀವ್ಸ್, ಲೈಕ್ಸ್, ಟಿಆರ್ ಪಿಗಾಗಿ ಹೀಗೆ ಶೂಟಿಂಗ್ ಸೆಟ್ ನ ಫೋಟೋ, ವಿಡಿಯೋ ಲೀಕ್ ಮಾಡುತ್ತಿರುತ್ತಾರೆ. ಇದು ಹೆಚ್ಚಿನ ಬಜೆಟ್ ನಲ್ಲಿ ಸಿನಿಮಾಗಳನ್ನು ನಿರ್ಮಾಣ ಮಾಡುವವರಿಗೆ ಪೀಕಲಾಟವೂ ಕೂಡ.
ಸದ್ಯ ಮುಂಬೈನಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ರಜನಿಕಾಂತ್ ಮತ್ತು ನಯನ ತಾರಾ ಕಾಣಿಸಿಕೊಂಡಿರೋ ಒಂದಷ್ಟು ದೃಶ್ಯಗಳನ್ನ ಸೆರೆ ಹಿಡಿಯಲಾಗುತ್ತಿದೆ. ಪಾರ್ಕ್ವೊಂದರಲ್ಲಿ ತಲೈವಾ ಕ್ರಿಕೆಟ್ ಆಡುತ್ತಿರುವುದನ್ನು ಕೂಡ ಲೀಕ್ ಫೋಟೋಗಳಲ್ಲಿ ನೋಡಬಹುದು. ಜತೆಗೆ ನಿವೇತಾ ಥಾಮಸ್ ದರ್ಬಾರ್ ಸಿನಿಮಾದಲ್ಲಿ ನಟಿಸುತ್ತಿದ್ದು, ಲೀಕಾದ ಪೋಟೋಗಳಿಂದಲೇ ಆ ವಿಚಾರವೂ ಸೋಶಿಯಲ್ ಮೀಡಿಯಾ ಮೂಲಕ ಕನ್ ಫರ್ಮ್ ಆಗಿದೆ. ಇನ್ನು ಕಾಮೆಡಿಯನ್ ಯೋಗಿ ಬಾಬು ಸಹ ರಜನಿ ಜೊತೆ ದರ್ಬಾರ್ ನಡೆಸುವ ಸುದ್ದಿಯೂ ಸಿಕ್ಕಿದೆ. ಎ. ಆರ್ ಮುರುಗದಾಸ್ – ರಜಿನಿಕಾಂತ್ ರೇರ್ ಕಾಂಬಿನೇಷನ್ನ ದರ್ಬಾರ್ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವ ಸುಳಿವು ಸಿಕ್ಕಿದೆ. ಎಲ್ಲ ಅಂದುಕೊಂಡಂತಾದರೆ ಮುಂದಿನ ವರ್ಷ ಸಂಕ್ರಾಂತಿ ಸಂಭ್ರಮದಲ್ಲಿ ತೆರೆಮೇಲೆ ರಜಿನಿಕಾಂತ್ ದರ್ಬಾರ್ ನಡೆಸಲಿದ್ದಾರೆ.
No Comment! Be the first one.