ಪೋಸ್ಟರ್ ಕದ್ದು ‘ದರ್ಬಾರ್’ ತೋರಿಸಲಿರುವ ತಲೈವ!

ಇತ್ತೀಚಿಗೆ ಕಳ್ಳತನವೂ ಕಾನೂನಿನ ಚೌಕಟ್ಟಿನೊಳಗೆ ಮೂಗುದಾರವಿಲ್ಲದ ಕೋಣದಂತೆ ಓಡಾಡುತ್ತಿದೆ. ಅದಕ್ಕೆ ಈಗ ವ್ಯಾಲ್ಯೂ ಕಡಿಮೆ. ಇರೋ ಬರೋ ಕಳ್ಳರೆಲ್ಲ ಪಾಲಿಟಿಕ್ಸ್ ನಲ್ಲೇ ಇರುವಾಗ ಯಾರು ತಾನೇ ಏನು ಮಾಡಿಯಾರು..! ಈ ಕಳ್ಳತನ ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುವಂತಹ ಕೆಟ್ಟ ಚಾಳಿ. ಅದು ರಾಜಕೀಯವಾಗಲಿ, ಶಿಕ್ಷಣ, ಸಿನಿಮಾ ಎಲ್ಲದಕ್ಕೂ ತನ್ನ ಕಬಂದ ಬಾಹುವನ್ನು ಹರಡಿಸಿದೆ. ಸದ್ಯದ ಶಾಂಕಿಂಗ್ ವಿಚಾರ ಏನಂದ್ರೆ ರಾಜಕೀಯ-ಸಿನಿಮಾ ಎಂಬ ಎರಡು ದೋಣಿಯ ಮೇಲೆ ಕಾಲಿಡಲು ತುದಿಗಾಲಲ್ಲಿ ಹವಣಿಸುತ್ತಿರುವ ತಲೈವಾ ರಜನಿ ಕಳ್ಳತನದ ಆರೋಪವನ್ನು ಎದುರಿಸುತ್ತಿದ್ದಾರೆ. ಹಾಗಂತ ರಜನಿ ಕಾಂತ್ ಅವರು ಯಾವುದೋ ಬ್ಯಾಂಕ್ ದರೋಡೆಯ ಆರೋಪವನ್ನೇನು ಫೇಸ್ ಮಾಡ್ತಿಲ್ಲ.

ಸದ್ಯ ರಜನಿ ನಟಿಸುತ್ತಿರುವ ಮುರುಗದಾಸ್ ನಿರ್ದೇಶನದ ದರ್ಬಾರ್ ಸಿನಿಮಾ ಅಂತಹ ಕಳ್ಳತನದ ಆರೋಪಕ್ಕೆ ಗುರಿಯಾಗಿದೆ. ಇತ್ತೀಚಿಗೆ ದರ್ಬಾರ್ ಸಿನಿಮಾದ ಶೂಟಿಂಗ್ ಶುರು ವಾಗಿರುವುದಲ್ಲದೇ ಸಿನಿಮಾದ ಪೋಸ್ಟರ್ ನ್ನು ಸಹ ಇತ್ತೀಚಿಗಷ್ಟೇ ರಿಲೀಸ್ ಮಾಡಿತ್ತು. ಆದರೆ ರಿಲೀಸ್ ಮಾಡಿರುವ ಆ ಪೋಸ್ಟರನ್ನು ಹಾಲಿವುಡ್ ಸಿನಿಮಾವೊಂದರಿಂದ ಕದ್ದಿದೆ ಎನ್ನಲಾಗುತ್ತಿದೆ. ಹೌದು ರಿಲೀಸ್ ಆದ ರಜನಿಯ ದರ್ಬಾರ್ ಪೋಸ್ಟರಿಗೂ ಹಾಲಿವುಡ್ ನ ‘ಕಿಲ್ಲಿಂಗ್ ಗಂಥರ್’ ಅನ್ನೋ ಸಿನಿಮಾದ ಪೋಸ್ಟರಿಗೂ ಪಕ್ಕಾ ಸಾಮ್ಯತೆ ಇದೆ ಎನ್ನಲಾಗಿದೆ. ದರ್ಬಾರ್ ಚಿತ್ರದ ಪೋಸ್ಟರ್ ಕಿಲ್ಲಿಂಗ್ ಗಂಥರ್ ಸಿನಿಮಾ ಪೋಸ್ಟರ್ ರೀತಿಯಲ್ಲಿಯೇ ಇದೆಯೆಂಬ ಟೀಕೆ ವ್ಯಕ್ತವಾಗಿದ್ದು, ಸದ್ಯ ವಿವಾದಕ್ಕೆ ಕಾರಣವಾಗಿದೆ. ಆದರೆ ಈ ಕುರಿತು ರಜನಿಯಾಗಲಿ, ನಿರ್ದೇಶಕರಾಗಲಿ ತುಟಿ ಬಿಚ್ಚದಿರುವುದು ಅನುಮಾನಗಳಿಗೆ, ಗೊಂದಲಗಳಿಗೆ ಕಾರಣವಾಗಿದೆ.

ಅಧಿಕೃತವಾದ ಮಾಹಿತಿ ಹೊರಬಿದ್ದ ನಂತರವಷ್ಟೇ ಕಳ್ಳತನದ ಆರೋಪ ಸುಳ್ಳೋ ನಿಜವೋ ತಿಳಿಯಲಿದೆ.. ದರ್ಬಾರ್ ಸಿನಿಮಾವನ್ನು ಮುರುಗದಾಸ್ ನಿರ್ದೇಶನ ಮಾಡುತ್ತಿದ್ದು, ರಜನಿಗೆ ಜೋಡಿಯಾಗಿ ಲೇಡಿ ಸೂಪರ್ ಸ್ಟಾರ್ ನಯನತಾರ ಅಭಿನಯಿಸಲಿದ್ದಾರೆ. ಇನ್ನು ಮಗಳ ಪಾತ್ರದಲ್ಲಿ ನಿವೇದಿತಾ ಥಾಮಸ್ ಕೂಡ ಕಾಣಿಸಿಕೊಳ್ಳಲಿದ್ದಾರೆ.


Posted

in

by

Tags:

Comments

Leave a Reply