ಲವ್ ಮಾಕ್ಟೇಲ್ ಎನ್ನುವ ಮನಮೋಹಕ ಸಿನಿಮಾದ ನಂತರ ಮದರಂಗಿ ಕೃಷ್ಣ ಎಲ್ಲರ ಡಾರ್ಲಿಂಗ್ ಆಗಿದ್ದಾರೆ. ಸದ್ಯ ಲವ್ ಮಾಕ್ಟೇಲ್ 2 ಚಿತ್ರವನ್ನು ಮುಗಿಸಿರುವ ಕೃಷ್ಣನ ಮುಂದಿನ ಸಿನಿಮಾ ಯಾವುದು? ಯಾರ ನಿರ್ದೇಶನದಲ್ಲಿ ನಟಿಸಬಹುದು? ಅನ್ನೋ ಪ್ರಶ್ನೆಗಳೆದ್ದಿದ್ದವು. ಅದಕ್ಕೀಗ ಸ್ಪಷ್ಟ ಉತ್ತರ ಸಿಕ್ಕಿದೆ.
ಸೀರಿಯಲ್ ಇಂಡಸ್ಟ್ರಿಯಲ್ಲಿ ಒಳ್ಳೇ ಹೆಸರು ಮಾಡಿಕೊಂಡು, ಚಿತ್ರರಂಗಕ್ಕೆ ಬಂದವರು ಕೃಷ್ಣ. ಇಲ್ಲಿ ನೆಲೆ ನಿಲ್ಲಲು ಸಾಕಷ್ಟು ಒದ್ದಾಟ ನಟೆಸಿದ್ದರು. ಒಳ್ಳೊಳ್ಳೆ ಅವಕಾಶಗಳು ಬಂದಿದ್ದೇನೋ ನಿಜ. ಆದರೆ ನೆಲೆ ನಿಲ್ಲಲು ಸ್ವತಃ ಕೃಷ್ಣ ಶತಪ್ರಯತ್ನ ಮಾಡಿದರು. ಲವ್ ಮಾಕ್ʼಟೇಲ್ ನಂಥಾ ಚಿತ್ರವನ್ನು ತಾವೇ ನಿರ್ಮಿಸಿ, ನಿರ್ದೇಶಿಸಿ, ನಟಿಸಿದರು. ನೋಡಿದ ಪ್ರತಿಯೊಬ್ಬರೂ ಖುಷಿ ಪಟ್ಟರು. ಒಂದು ಶುದ್ಧ ಗೆಲುವಿನ ನಂತರ ಯಾವುದೇ ನಟ ಮುಂದಿನ ಚಿತ್ರವನ್ನು ಜಾಗರೂಕತೆಯಿಂದ ಒಪ್ಪೋದು ಉತ್ತಮ. ಎಲ್ಲೂ ಹಳೆಯ ತಪ್ಪುಗಳಾಗಬಾರದು, ಮತ್ತೊಂದು ಸುತ್ತಿನ ಸೈಕಲ್ ಜಾಥಾ ಶುರು ಮಾಡಬಾರದು ಎನ್ನುವ ಭಯ ಗೆದ್ದವರಲ್ಲಿ ಇದ್ದೇ ಇರುತ್ತದೆ.
ಕೃಷ್ಣನ ಬಳಿ ಶ್ಯಾನೆ ಜನ ಕಥೆ ಹಿಡಿದುಕೊಂಡು ಹೋಗಿ ನಿಂತಿದ್ದರು. ಬಂದಿದ್ದನ್ನೆಲ್ಲಾ ಒಪ್ಪಿದ್ದಿದ್ದರೆ ಮಾಕ್ ಟೇಲ್ ನಂತರ ಕೃಷ್ಣ ನಟನೆಯ ಒಂದು ಡಜನ್ ಸಿನಿಮಾಳು ಸೆಟ್ಟೇರಿರುತ್ತಿದ್ದವು. ಆದರೆ ಅಂಥಾ ತಪ್ಪನ್ನು ಡಾರ್ಲಿಂಗ್ ಮಾಡಲಿಲ್ಲ. ಅಳೆದೂ ತೂಗಿ, ಕಥೆಯಲ್ಲಿ ಧಮ್ಮಿದೆಯಾ? ನಿರ್ದೇಶಕರಿಗೆ ತಾಕತ್ತಿದೆಯಾ? ಅನ್ನೋದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿ ಹೆಜ್ಜೆ ಇಡುವ ಮನಸ್ಸು ಮಾಡಿದರು.
ಹಾಗೆ, ಡಾರ್ಲಿಂಗ್ ಕೃಷ್ಣ ಎಲ್ಲ ಕೋನಗಳಲ್ಲೂ ಚಿಂತಿಸಿ, ತೀರಾ ಇಷ್ಟಪಟ್ಟು ಒಪ್ಪಿರುವ ಸಿನಿಮಾವೊಂದು ಶುರುವಾಗಲಿದೆ. ಈ ಹಿಂದೆ ಮಳೆ, ಧೈರ್ಯಂ, ಶಿವಾರ್ಜುನ ದಂತಾ ಸಿನಿಮಾಗಳನ್ನು ಕೊಟ್ಟಿದ್ದ ಶಿವತೇಜಸ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ನಾನಿ ಸಿನಿಮಾದ ಮೂಲಕ ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದು ಸದ್ಯ ಹೆಸರಿನ ಜೊತೆಗೆ ವೃತ್ತಿಯನ್ನೂ ಬದಲಿಸಿಕೊಂಡಿರುವವರು ಸುಮಂತ್ ಕ್ರಾಂತಿ. ಇವರು ತಮ್ಮ ರಶ್ಮಿ ಫಿಲಂಸ್ ಸಂಸ್ಥೆಯಿಂದ ಈ ಸಿನಿಮಾವನ್ನು ನಿರ್ಮಿಸಲಿದ್ದಾರೆ. ಚಿತ್ರಕ್ಕಿನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ. ಆದರೆ, ಕ್ಯೂಟ್ ಲವ್ ಸ್ಟೋರಿ ಈ ಚಿತ್ರದ ಕಥಾವಸ್ತು ಅನ್ನೋದು ಸದ್ಯದ ಮಾಹಿತಿ.
ಶಿವತೇಜಸ್ ನಿರ್ದೇಶಿಸಿದ್ದ ಮೊದಲ ಮತ್ತು ಯಶಸ್ವಿ ಚಿತ್ರ ಮಳೆ. ಆ ಸಿನಿಮಾದ ಮುದ್ದಾದ ಲವ್ ಸ್ಟೋರಿಯನ್ನು ಜನ ಇವತ್ತಿಗೂ ಇಷ್ಟಪಡುತ್ತಿದ್ದಾರೆ. ಇದಾದ ನಂತರ ಶಿವತೇಜಸ್ ಆಕ್ಷನ್ ಮತ್ತು ಕಾಮಿಡಿ ಜಾನರಿನ ಸಿನಿಮಾಗಳನ್ನೂ ಮಾಡಿದ್ದರು. ಈಗ ಮತ್ತೆ ಡಾರ್ಲಿಂಗ್ ಕೃಷ್ಣನ ಸಿನಿಮಾದ ಮೂಲಕ ಮತ್ತೊಮ್ಮೆ ನವಿರಾದ ರೋಮ್ಯಾಂಟಿಕ್ ಪ್ರೇಮಕತೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಅರ್ಜುನ್ ಜನ್ಯಾ ಸಂಗೀತ ನೀಡಲಿರುವ ಈ ಸಿನಿಮಾದ ಇನ್ನಿತರೆ ವಿವರಗಳು ಸದ್ಯದಲ್ಲೇ ಹೊರಬೀಳಲಿವೆ.
Comments