ಜನ ಮೆಚ್ಚುವ ಸಿನಿಮಾ ಮಾಡಿ…!

ಲವ್ ಮಾಕ್ಟೇಲ್ ಸಿನಿಮಾ ಬರೋಕೆ ಮುಂಚೆ ಡಾರ್ಲಿಂಗ್ ಕೃಷ್ಣ ಮಾರ್ಕೇಟು ಪ್ರಾಯಶಃ ಪಾತಾಳಕ್ಕೆ ಜಾರಿತ್ತು. ಕೃಷ್ಣ ನಟನೆಯ ಕೆಲವು ಸಿನಿಮಾಗಳು ನಿಜಕ್ಕೂ ವಾಕರಿಕೆ ಹುಟ್ಟಿಸಿದ್ದವು. ಇನ್ನು ಈತನ ಫಿಲ್ಮುಗಳನ್ನು ನೋಡಲು ಸಾಧ್ಯವೇ ಇಲ್ಲ ಎನ್ನುವ ಹಂತ ತಲುಪಿತ್ತು. ದಿಗ್ಗನೆ ಎದ್ದು ಕುಂತ ಕೃಷ್ಣ ಲವ್ ಮಾಕ್ಟೇಲ್ ಎನ್ನುವ ಕ್ಯೂಟ್ ಸಿನಿಮಾವನ್ನು ತೆರೆದಿಟ್ಟರು. ಕೃಷ್ಣ ಬಗೆಗಿದ್ದ ಇಮೇಜನ್ನೇ ಈ ಚಿತ್ರ ಬದಲಿಸಿಬಿಟ್ಟಿತು. ಕನ್ನಡದಲ್ಲಿ ಬಾಕ್ಸಾಫೀಸ್ ಕಲೆಕ್ಷನ್ ಮಾಡುವ ಹೀರೋಗಳ ಸಂಖ್ಯೆ ತೀರಾ ಕಡಿಮೆ. ಲವ್ ಮಾಕ್ಟೇಲ್ ನೋಡಲಿಕ್ಕಾಗಿ ಜನ ಬ್ಲಾಕ್ ಟಿಕೇಟ್ ಖರೀದಿಸಲು ಮುಗಿಬಿದ್ದಾಗ ಸಿನಿಪ್ರಿಯರು ಸಂಭ್ರಮಿಸಿದ್ದರು. ಇನ್ನು ಡಾರ್ಲಿಂಗ್ ಎದ್ದು ನಿಲ್ಲೋದು ಖಚಿತ ಅಂತೆಲ್ಲಾ ಅಂದಾಜಿಸಲಾಗಿತ್ತು. ಆದರೆ ಇತ್ತೀಚೆಗೆ ಬರುತ್ತಿರುವ ಕೃಷ್ಣನ ಸಿನಿಮಾ ನೋಡಿ ಜನ ಮತ್ತೆ ಮೊದಲಿನಂತೆ ಮುಖ ಸಿಂಡರಿಸುತ್ತಿದ್ದಾರೆ.

ಒಂದೇ ಒಂದು ವ್ಯತ್ಯಾಸವೆಂದರೆ, ಲವ್ ಮಾಕ್ಟೇಲ್‌ಗೂ ಮುಂಚೆ ಕೃಷ್ಣ ಕಡಿಮೆ ಸಂಭಾವನೆಗೆ ನಟಿಸುತ್ತಿದ್ದರು. ಈಗ ಒಳ್ಳೇ ಪೇಮೆಂಟು ಎಣಿಸಿಕೊಳ್ಳುತ್ತಿದ್ದಾರೆ ಅಷ್ಟೇ.

ಕಾಸು ಕೊಟ್ಟು ಸಿನಿಮಾ ನೋಡುವ ಒಂದು ಸಲ ಪ್ರೇಕ್ಷಕ ಮುನಿಸಿಕೊಂಡರೆ, ಮತ್ತೆ ಏನೇ ತಿಪ್ಪರಲಾಗ ಹಾಕಿದರೂ ವಾಪಾಸು ತಿರುಗಿ ನೋಡೋದಿಲ್ಲ. ಸದ್ಯ ಡಾರ್ಲಿಂಗ್ ಕೃಷ್ಣನಿಗೆ ಒಳ್ಳೇ ಮಾರ್ಕೆಟ್ ಇದೆ. ಸಿನಿಮಾ ಮುಕ್ತಾಯವಾಗುವ ಮೊದಲೇ ಟೀವಿ, ಓಟಿಟಿಗಳ ವ್ಯಾಪಾರ ಮುಗಿದುಬಿಡುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಸಂತೆ ಹೊತ್ತಿಗೆ ಮೊಳ ನೇಯ್ದಂತೆ ಕಾಟಾಚಾರಕ್ಕೆ ರೀಲು ಸುತ್ತುವ ಕೆಲಸ ಮಾಡುತ್ತಿದ್ದಾರೆ. ಪ್ಯಾಕೇಜ್ ಡೀಲಲ್ಲಿ ಪೇಮೆಂಟು ಕೊಟ್ಟರು ಅಂದ ಕೂಡಲೇ ಹೆಂಡತಿಯ ಸಮೇತ ಹೋಗಿ ನಟಿಸಿಬರೋದು ಎಷ್ಟು ಸರಿ? ಇತ್ತೀಚೆಗೆ ಬಂದ ಲವ್ ಬರ್ಡ್ಸ್ ಎನ್ನುವ ಸವಕಲು ಚಿತ್ರ ಕೃಷ್ಣನ ತಪ್ಪು ಆಯ್ಕೆಯ ಪಟ್ಟಿಗೆ ಸೇರುವ ದೊಡ್ಡ ಸ್ಯಾಂಪಲ್ ಥರಾ ಇದೆ. ತಿಂಗಳಿಗೊಂದು ಸಿನಿಮಾಗಳಲ್ಲಿ ನಟಿಸಿ ಹೆಸರು ಕೆಡಿಸಿಕೊಳ್ಳೋದಕ್ಕಿಂತಾ ವರ್ಷಕ್ಕೆ ಎರಡೇ ಆದರೂ ಪರವಾಗಿಲ್ಲ ಅಚ್ಚುಕಟ್ಟಾದ ಸಬ್ಜೆಕ್ಟುಗಳನ್ನು ಆಯ್ಕೆ ಮಾಡಿಕೊಳ್ಳೋದು ಗಂಡ-ಹೆಂಡತಿ ಇಬ್ಬರಿಗೂ ಉತ್ತಮ. ಇಲ್ಲದಿದ್ದರೆ ಮಾರ್ಕೆಟ್ಟು, ಪ್ರೇಕ್ಷಕರು ಯಾವುದೂ ಉಳಿಯೋದಿಲ್ಲ!


Posted

in

by

Tags:

Comments

Leave a Reply