ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಪರ ಪ್ರಚಾರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಗ್ರ್ಯಾಂಡ್ ಎಂಟ್ರಿ ನೀಡಿದ್ದಾರೆ. ಸುಮಲತಾ ಅಂಬರೀಶ್ ಅವರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಮಂಡ್ಯಕ್ಕೆ ಬಂದಿದ್ದ ದರ್ಶನ್, ಏಪ್ರಿಲ್ 1 ರಿಂದ 16 ರವರೆಗೆ ತಮ್ಮನ್ನು ಸಂಪೂರ್ಣವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದು, ಅದರಂತೆ ಇಂದು ಕೆ.ಆರ್.ಎಸ್. ನಿಂದ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ದರ್ಶನ್, “ನಾನು ಯಾರ ವಿರುದ್ದವೂ ಇಂದು ಮಾತನಾಡುವುದಿಲ್ಲ. ಆದರೆ ಎಲ್ಲರೂ ನಮ್ಮ ವಿರುದ್ದ ಮಾತನಾಡುತ್ತಿದ್ದಾರೆ. ಅಮ್ಮನಿಗೆ ನೀವು ಕೊಡುವ ಒಂದೊಂದು ವೋಟು ಅವರಿಗೆ ಉತ್ತರವಾಗಲಿದೆ” ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೋಡಲು ಅಭಿಮಾನಿಗಳು ಕಿಕ್ಕಿರಿದಿದ್ದು, ಅವರ ಒಂದೊಂದು ಮಾತಿಗೂ ಉತ್ಸಾಹದಿಂದ ಚಪ್ಪಾಳೆ ತಟ್ಟಿ ಕೂಗಿದ್ದಾರೆ. ದರ್ಶನ್ ಇಂದು ಒಂದೇ ದಿನ 20 ಕ್ಕೂ ಅಧಿಕ ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.