ದರ್ಶನ್ ರಂಥ ನಂ.1 ಹೀರೋ ಸುಮ್ಮನೇ ಕೂತರೆ ಅವರಿಗೆ ಮಾತ್ರವಲ್ಲ, ಇಡೀ ಚಿತ್ರರಂಗಕ್ಕೇ ನಷ್ಟ ಗ್ಯಾರೆಂಟಿ. ಈ ಹಿನ್ನೆಲೆಯಲ್ಲಾದರೂ ಬಾಸ್ ಇಮೀಡಿಯೆಟ್ಟಾಗಿ ಬಣ್ಣ ಹಚ್ಚಲೇಬೇಕಿರುವ ಅನಿವಾರ್ಯತೆ ಇದೆ. ಅದು ಯಾವ ಸಿನಿಮಾ ಅನ್ನೋದಷ್ಟೇ ಸದ್ಯದ ಪ್ರಶ್ನೆ!
ಕೊರೋನಾ ವೈರಸ್ಸು ಸಿನಿಮಾರಂಗವನ್ನು ಇನ್ನಿಲ್ಲದಂತೆ ಜರ್ಜರಿತಗೊಳಿಸಿದೆ. ಹೊಸಬರು, ಎರಡನೇ ಸಾಲಿನ ಹೀರೋಗಳ ಸಿನಿಮಾಗಳಿರಲಿ, ಸೂಪರ್ ಸ್ಟಾರ್ ಗಳಿಗೂ ಮುಂದೇನು ಮಾಡೋದು ಎನ್ನುವ ಚಿಂತೆ ಕಾಡುತ್ತಿರೋದು ಸುಳ್ಳಲ್ಲ. ಒಂದು ಸಿನಿಮಾ ಮುಗಿಸಿ, ಅದು ಪೋಸ್ಟ್ ಪ್ರೊಡಕ್ಷನ್ ಹಂತ ತಲುಪುತ್ತಿದ್ದಂತೇ ಮತ್ತೊಂದು ಸಿನಿಮಾ ಚಿತ್ರೀಕರಣ, ತಯಾರಿಯಲ್ಲಿ ತೊಡಗಿಕೊಳ್ಳುತ್ತಿದ್ದವರು ಚಾಲೆಂಜಿಂಗ್ ಸ್ಟಾರ್ ದರ್ಶನ್. ಈಗ ಸಾಕ್ಷಾತ್ ದರ್ಶನ್ ಅವರೇ ಮುಂದೇನು ಮಾಡೋದು ಎನ್ನುವ ಗೊಂದಲದಲ್ಲಿದ್ದಾರಾ? ಎನ್ನುವ ಪ್ರಶ್ನೆ ಮೂಡುತ್ತಿದೆ. ಕೋವಿಡ್ ವಕ್ಕರಿಸಿಕೊಳ್ಳದೇ ಹೋಗಿದ್ದರೆ, ಈ ಹೊತ್ತಿಗೆ ರಾಬರ್ಟ್ ಚಿತ್ರ ತೆರೆಗೆ ಬಂದಿರುತ್ತಿತ್ತು. ಮದಕರಿ ಒಂದು ಮಟ್ಟದ ಚಿತ್ರೀಕರಣ ಮುಗಿಸಿರುತ್ತಿತ್ತು. 2019ರ ಡಿಸೆಂಬರ್ ತಿಂಗಳಲ್ಲಿ ಮದಕರಿ ಚಿತ್ರಕ್ಕಾಗಿ ಮುಹೂರ್ತ ನಡೆಸಲಾಗಿತ್ತು. ಫೆಬ್ರವರಿ ಹೊತ್ತಿಗೆ ಎರಡು ದಿನಗಳ ಕಾಲ ಟೆಸ್ಟ್ ಶೂಟ್ ಮಾದರಿಯಲ್ಲಿ ಕೆಲಸ ಮಾಡಿಬಂದಿದ್ದರು. ಅದಾಗುತ್ತಿದ್ದಂತೇ ರಾಬರ್ಟ್‌ಗಾಗಿ ಗುಜರಾತ್ ಬಳಿ ಬಿಳೀ ಮರಳುಗಾಡಿನಲ್ಲಿ ಹಾಡು ಚಿತ್ರೀಕರಣಗೊಂಡಿತ್ತು. ಕೊರೋನಾ ಎನ್ನುವ ಹೆಸರು ಕೇಳಿಬರುತ್ತಿದ್ದಂತೇ ಫಾರಿನ್ ಚಿತ್ರೀಕರಣ ಕ್ಯಾನ್ಸಲ್ ಆಯಿತು.
ಈಗ ಶೂಟಿಂಗುಗಳು ಆರಂಭವಾಗಿವೆ. ಸುದೀಪ್ ಹೈದರಾಬಾದಿನಲ್ಲಿ ಫ್ಯಾಂಟಮ್ ಶುರು ಮಾಡಿದರು. ಕೆ.ಜಿ.ಎಫ್ ಬೆಂಗಳೂರಲ್ಲೇ ಆರಂಭವಾಗಿದೆ. ಶಿವಣ್ಣನ ಭಜರಂಗಿ-೨ ಕೂಡಾ ಕೆಲಸ ಆರಂಭಿಸಿದ್ದಾರೆ. ಕೊರೋನಾ ಲಾಕ್ ಡೌನಿನಲ್ಲಿ ಭರ್ಜರಿ ಬದನೇಕಾಯಿ ಬೆಳೆ ತೆಗೆದೆ ಉಪೇಂದ್ರ ಸದ್ಯ ಕಬ್ಜದಲ್ಲಿ ಬ್ಯುಸಿಯಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಯುವರತ್ನದ ಉಳಿದ ಕೆಲಸ ಮುಗಿಸುತ್ತಿದ್ದಾರೆ. ಹೀಗೆ ಕನ್ನಡದ ಸ್ಟಾರುಗಳೆಲ್ಲಾ ಒಪ್ಪಿಕೊಂಡ ಸಿನಿಮಾಗಳ ಕೆಲಸ ಪುನರಾರಂಭಿಸಿದ್ದಾರೆ. ಆದರೆ ದರ್ಶನ್ ಏನು ಮಾಡಲಿದ್ದಾರೆ ಅನ್ನೋದು ಇನ್ನೂ ಪಕ್ಕಾ ಆಗಿಲ್ಲ!
ಸದ್ಯದ ಪರಿಸ್ಥಿತಿಯಲ್ಲಿ ರಾಜವೀರ ಮದಕರಿ ಚಿತ್ರ ಶೂಟಿಂಗ್ ಆರಂಭಿಸೋದು ಕಷ್ಟಸಾಧ್ಯ. ದೊಡ್ಡ ಬಜೆಟ್ಟಿನಲ್ಲಿ, ನೂರಾರು ಜನ ತಂತ್ರಜ್ಞರು, ನಟರು ಪಾಲ್ಗೊಳ್ಳುವಿಕೆಯಲ್ಲಿ ರೂಪುಗೊಳ್ಳಬೇಕಿರುವ ಚಿತ್ರವಿದು. ಸರ್ಕಾರ ವಿಧಿಸಿರುವ ನಿಬಂಧನೆಯನ್ನು ಅನುಸರಿಸಿ ಮದಕರಿ ತಯಾರು ಮಾಡಲು ಸಾಧ್ಯವೇ ಇಲ್ಲ. ಪರಿಸ್ಥಿತಿ ಹೀಗಿರುವಾಗ ಮದಕರಿಯನ್ನು ಸ್ವಲ್ಪ ಮಟ್ಟಿಗೆ ಮುಂದಕ್ಕೆ ಹಾಕಿ ದರ್ಶನ್ ಬೇರೊಂದು ಸಿನಿಮಾದಲ್ಲಿ ಪಾಲ್ಗೊಳ್ಳುತ್ತಾರಾ? ದಾವಣಗೆರೆಯಲ್ಲಿ ಕುದುರೆ ನೋಡಿಕೊಂಡು, ಶಿವಮೊಗ್ಗ ಸುತ್ತಮುತ್ತ ಫೋಟೋಗ್ರಫಿ ನಡೆಸಿ, ಮೈಸೂರಿನ ತಮ್ಮ ಫಾರ್ಮ್ ಹೌಸಿನಲ್ಲಿ ಒಂದಿಷ್ಟು ರೆಸ್ಟ್ ತೆಗೆದುಕೊಂಡು ಬೆಂಗಳೂರಿಗೆ ಮರಳಿದ್ದಾರೆ. ಈಗಾಗಲೇ ಆರು ತಿಂಗಳು ಕೊರೋನಾ ಕರಿನೆರಳಿನಲ್ಲೇ ಕಳೆದುಹೋಗಿರುವುದರಿಂದ ಮದಕರಿಗಾಗಿ ಕಾಯದೇ ತಕ್ಷಣಕ್ಕೆ ದರ್ಶನ್ ಯಾವುದಾದರೂ ಒಂದು ಸಿನಿಮಾವನ್ನು ಆರಂಭಿಸಲೇಬೇಕು. ಮಿಲನ ಪ್ರಕಾಶ್ ಹೇಳಿದ ಕಥೆಯನ್ನು ದಾಸ ಒಪ್ಪಿದ್ದಾರೆ. ಸಿನಿಮಾ ಅಫಿಷಿಯಲ್ಲಾಗೇ ಅನೌನ್ಸ್ ಕೂಡಾ ಆಗಿತ್ತು. ಇದು ಬಿಟ್ಟರೆ, ಯಜಮಾನ ನಂತರ ಬಿ. ಸುರೇಶ ಅವರ ಮೀಡಿಯಾ ಹೌಸಿಗೆ ಮತ್ತೊಂದು ಸಿನಿಮಾ ಒಪ್ಪಿದ್ದಾರೆ ಎನ್ನುವ ಮಾತಿದೆ. ಇದೂ ಅಲ್ಲದೆ ಇನ್ನೊಂದಿಬ್ಬರು ನಿರ್ಮಾಪಕರ ಸಿನಿಮಾದಲ್ಲಿ ನಟಿಸುವುದಾಗಿ ಒಪ್ಪಂದ ಮಾಡಿಕೊಂಡಿದ್ದರೂ, ಆ ಸಿನಿಮಾಗಳಿಗೆ ಕಥೆ, ಡೈರೆಕ್ಟರು ಯಾವುವೂ ಅಂತಿಮವಾಗಿಲ್ಲ. ಈ ಲಾಕ್ ಡೌನ್ ಟೈಮಲ್ಲಿ ತರುಣ್ ಸುಧೀರ್ ಮತ್ತೊಂದು ಕಥೆ ಒಪ್ಪಿಸಿರುವುದಾಗಿ ಸುದ್ದಿಯಾಗಿತ್ತು. ಆದರೆ ರಾಬರ್ಟ್ ರಿಲೀಸಿಗೆ ಮುಂಚೆಯೇ ತರುಣ್ ಡೈರೆಕ್ಷನ್ನಿನ ಮತ್ತೊಂದು ಸಿನಿಮಾದಲ್ಲಿ ದರ್ಶನ್ ಭಾಗಿಯಾಗುತ್ತಾರೆ ಅನ್ನೋ ಗ್ಯಾರೆಂಟಿಯಿಲ್ಲ. ಹೀಗಿರುವಾಗ ಮಿಲನ ಪ್ರಕಾಶ್ ಒಬ್ಬರು ಪೂರ್ತಿ ತಯಾರಿ ಮಾಡಿಕೊಂಡಿರುವುದರಿಂದ ಅವರ ಚಿತ್ರ ಆರಂಭಗೊಳ್ಳುವ ಸಾಧ್ಯತೆ ಹೆಚ್ಚಿದೆ.
ದರ್ಶನ್ ರಂಥ ನಂ.1 ಹೀರೋ ಸುಮ್ಮನೇ ಕೂತರೆ ಅವರಿಗೆ ಮಾತ್ರವಲ್ಲ, ಇಡೀ ಚಿತ್ರರಂಗಕ್ಕೇ ನಷ್ಟ ಗ್ಯಾರೆಂಟಿ. ಈ ಹಿನ್ನೆಲೆಯಲ್ಲಾದರೂ ಬಾಸ್ ಇಮೀಡಿಯೆಟ್ಟಾಗಿ ಬಣ್ಣ ಹಚ್ಚಲೇಬೇಕಿರುವ ಅನಿವಾರ್ಯತೆ ಇದೆ. ಅದು ಯಾವ ಸಿನಿಮಾ ಅನ್ನೋದಷ್ಟೇ ಸದ್ಯದ ಪ್ರಶ್ನೆ!
Leave a Reply
You must be logged in to post a comment.