ಈ ನಾಡಿಗೆ ಇಂಥದ್ದೊಂದು ದುರ್ಗತಿ ಬರಬಾರದಿತ್ತು. ಒಬ್ಬ ನಟ ತನ್ನ ಸಿನಿಮಾ, ನಟನೆಯ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿರುತ್ತಾನೆ. ಜನಪ್ರಿಯತೆಯ ಅಮಲಿನಲ್ಲಿ ಮೈಮರೆಯುತ್ತಾನೆ. ತನ್ನ ಖಾಸಗೀ ಬದುಕನ್ನು ಕೂಡಾ ಗಲೀಜು ಮಾಡಿಕೊಂಡಿರುತ್ತಾನೆ. ಕುಡಿದ ಮೇಲೆ ಅಕ್ಷರಶಃ ರಾಕ್ಷಸನಂತೆ ವರ್ತಿಸಲು ಶುರು ಮಾಡುತ್ತಾನೆ. ಮನೆ-ಮಂದಿ, ಸ್ನೇಹಿತರು, ತನ್ನೊಟ್ಟಿಗೆ ಕೆಲಸ ಮಾಡುವವರು… ಹೀಗೆ ಯಾರೆಂದರೆ ಯಾರನ್ನೂ ಬಿಡದೆ ಕೈ ಮಾಡುವ, ಬಡಿಯುವ ಶೋಕಿ ಈತನಿಗೆ ಅಂಟಿಕೊಳ್ಳತ್ತೆ. ಇವೆಲ್ಲದರ ಜೊತೆಗೆ ಕಟ್ಟಿಕೊಂಡ ಹೆಂಡತಿಯ ಜೊತೆ ಬಾಳ್ವೆ ನಡೆಸೋದನ್ನು ಬಿಟ್ಟು ಮತ್ತೊಬ್ಬಳ ಸಖ್ಯ ಬೆಳೆಸುತ್ತಾನೆ. ಅಫಿಷಿಯಲ್ ಹೆಂಡತಿಯನ್ನು ದೂರ ಮಾಡಿಸಿ, ಜೊತೆಯಾದವಳು ಬರಿಯ, ಹಣ, ಆಸ್ತಿ, ಐಶಾರಾಮಿ ಬದುಕಿಗಾಗಿ ಸ್ವಾಭಿಮಾನವನ್ನು ಮರೆಯುತ್ತಾಳೆ… ಇಬ್ಬರೂ ಸೇರಿ ಯದ್ವಾ ತದ್ವಾ ಮೆರೆಯುತ್ತಾರೆ. ಕಡೆಗೊಂದು ದಿನ ಈಕೆಗಾಗಿ ಒಂದು ಹೆಣ ಕೂಡಾ ಉರುಳುತ್ತದೆ… ಮೃಗೀಯ ಮನಸ್ಥಿತಿಯ ಈ ಸ್ಟಾರ್ ನಟ ಕೊಲೆ ಕೇಸಿನಲ್ಲಿ ಸಿಕ್ಕಿಬಿದ್ದು ತನ್ನ ಸಖಿಯ ಸಮೇತ ಜೈಲು ಪಾಲಾಗುತ್ತಾನೆ. ಈ ಸೆರೆಯಾಳಿಗೆ ಕಾನೂನು ೬೧೦೬ ನಂಬರ್ ನೀಡುತ್ತದೆ! ನಿಜವಾದ ಅಭಿಮಾನಿ ಅನ್ನಿಸಿಕೊಂಡವನು ಇದನ್ನೆಲ್ಲಾ ಕಂಡು ಮಮ್ಮಲ ಮರುಗಬೇಕಿತ್ತು. ತಮ್ಮ ಬದುಕಾರದೂ ಹೀಗೆಲ್ಲಾ ಆಗಬಾರದು ಅಂತಾ ಎಚ್ಚರವಹಿಸಬೇಕಿತ್ತು. ಕಡೇಪಕ್ಷ ಕಾನೂನನ್ನು ಗೌರವಿಸಬೇಕಿತ್ತು. ಆದರೆ ಇಲ್ಲಿ ಆಗಿರೋದೇ ಬೇರೆ.
ದರ್ಶನ್ ಅಭಿಮಾನಿಗಳು ಇಲ್ಲಿ ಕೂಡಾ ವಿವೇಚನೆ ಕಳೆದುಕೊಂಡು, ಮಾನವೀಯತೆಯನ್ನು ಮರೆತವರಂತೆ ವರ್ತಿಸುತ್ತಿದ್ದಾರೆ. ತಮ್ಮ ಆರಾಧ್ಯ ನಟನಿಗೆ ಜೈಲಿನಲ್ಲಿ ನೀಡಿರುವ ಖೈದಿ ನಂಬರ್ ೬೧೦೬ ಎನ್ನುವ ನಂಬರನ್ನು ತಮ್ಮ ಮೈ ಮೇಲೆ ಟ್ಯಾಟೂ ಹಾಕಿಸಿಕೊಳ್ತಿದ್ದಾರೆ. ತಮ್ಮ ವಾಹನಗಳ ಮೇಲೆ ಸ್ಟಿಕರ್ ಅಂಟಿಸಿಕೊಳ್ಳುತ್ತಿದ್ದಾರೆ. ಅದ್ಯಾರೋ ತಲೆಕೆಟ್ಟ ನಿರ್ಮಾಪಕನೊಬ್ಬ ಇದೇ ಹೆಸರನ್ನು ಸಿನಿಮಾ ಶೀರ್ಷಿಕೆಯಾಗಿ ನೀಡಿ ಅಂತಾ ವಾಣಿಜ್ಯ ಮಂಡಳಿಯಲ್ಲಿ ಅಪ್ಲಿಕೇಷನ್ ಹಾಕಿದ್ದಾನೆ. ಮತ್ಯಾರೋ ಆಲ್ಬಂ ಸಾಂಗ್ ಮಾಡುತ್ತಿದ್ದಾರೆ… ಇಂಥ ಅಸಹ್ಯದ ಕೆಲಸಕ್ಕೆ ಎಲ್ಲಿಲ್ಲದ ಪಬ್ಲಿಸಿಟಿ ಕೂಡಾ ದಕ್ಕುತ್ತಿದೆ. ಇದಕ್ಕೇ ಹೇಳಿದ್ದು ಈ ನಾಡಿಗೆ, ಕನ್ನಡ ಚಿತ್ರರಂಗಕ್ಕೆ ಇಂಥದ್ದೊAದು ದುರ್ಗತಿ ಬರಬಾರದಿತ್ತು ಅಂತಾ!
ಒಂದು ಭಯಾನಕ ಕೊಲೆ ನಡೆದುಹೋಗಿದೆ. ಈ ದೇಶದ ಕಾನೂನಿನ ಪ್ರಕಾರ ಅದು ಶಿಕ್ಷಾರ್ಹ ಅಪರಾಧ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ಮಾಡುತ್ತಿದ್ದಾರೆ. ತಪ್ಪು ಮಾಡಿದವನು ಯಾವೂರ ದೊರೆಯೇ ಆಗಿದ್ದರೂ, ಹೆಸರಾಂತ ನಟನಾಗಿದ್ದರೂ ಕಾನೂನು ಎಲ್ಲರಿಗೂ ಒಂದೇ. ತಪ್ಪಿತಸ್ಥ ಇವತ್ತಲ್ಲಾ ನಾಳೆ ಮಾಡಿರುವ ಕೆಲಸಕ್ಕೆ ಶಿಕ್ಷೆ ಅನುಭವಿಸಲೇಬೇಕು. ಹೀಗಿರುವಾಗ ಒಬ್ಬ ಕೊಲೆ ಆರೋಪಿಗೆ ನೀಡುವ ಖೈದಿ ನಂಬರನ್ನು ಕೂಡಾ ಕೊಂಡಾಡಿ ಸಂಭ್ರಮಿಸೋದಕ್ಕಿAತಾ ಪರಮ ದರಿದ್ರ ಮತ್ತೊಂದಿಲ್ಲ!
ಜೈಲು ಸೇರಿದವನು, ಅನ್ಯಾಯದ ವಿರುದ್ಧ ಪ್ರತಿಭಟಿಸಿದವನೋ, ಹೋರಾಟಗಾರನೋ, ಯೋಧನೋ ಆಗಿದ್ದಿದ್ದರೆ ಬಹುಶಃ ಇಂಥದ್ದೊAದು ನಂಬರನ್ನು ಹಣೆಮೇಲೆ ಬರೆದುಕೊಂಡು ಓಡಾಡಲಿ ಬಿಡಿ ಅನ್ನಬಹುದಿತ್ತು. ಈ ಪ್ರಕರಣದಲ್ಲಿ ಜೈಲು ಸೇರಿದವರು ಮಹಾತ್ಮರೂ ಅಲ್ಲ, ಹುತಾತ್ಮರೂ ಅಲ್ಲ.
ದರ್ಶನ್ ಮತ್ತು ಆತನ ಸಹಚರರು ದುರ್ಬುದ್ದಿಯನ್ನು ನೆತ್ತಿಗೇರಿಸಿಕೊಂಡು ಅಮಾನುಷವಾಗಿ ಒಬ್ಬನನ್ನ ಬಡಿದು ಕೊಂದಿದ್ದಾರೆ. ಇಂಥ ನೀಚ ಕೃತ್ಯವನ್ನು ಬೆಂಬಲಿಸೋದು ಕೂಡಾ ಅಪರಾಧವಲ್ಲವಾ? ಇವೆಲ್ಲಾ ಸಮಾಜಕ್ಕೆ ಯಾವ ಸಂದೇಶವನ್ನು ನೀಡುತ್ತಿವೆ? ಪೊಲೀಸರು ಇನ್ನಾದರೂ ಈ ಕಡೆ ಗಮನಹರಿಸಬೇಕು. ಯಾವೆಲ್ಲಾ ವಾಹನಗಳ ಮೇಲೆ ಖೈದಿ ನಂಬರ್ ೬೧೦೬ ಅಂತಾ ಬರೆಸಿಕೊಂಡಿದ್ದಾರೋ, ಆ ವಾಹನದ ಲೈಸೆನ್ಸ್ ರದ್ದು ಮಾಡಬೇಕು. ಸೋಷಿಯಲ್ ಮೀಡಿಯಾದಲ್ಲಿ ಈ ಕೊಲೆ ಪ್ರಕರಣವನ್ನು ಸಮರ್ಥಿಸಿಕೊಳ್ಳುವವರ ಅಕೌಂಟುಗಳನ್ನು ಬ್ಲಾಕ್ ಮಾಡಿಸಬೇಕು. ಇಲ್ಲದಿದ್ದಲ್ಲಿ, ಈ ಮತಿಗೇಡಿಗಳು ಇಲ್ಲಿನ ಪೊಲೀಸು, ನ್ಯಾಯಾಂಗ ವ್ಯವಸ್ಥೆಯನ್ನು ತೀರಾ ಹಗುರವಾಗಿ ಪರಿಗಣಿಸುವ ಅಪಾಯವಿದೆ…
ಇನ್ನಾದರೂ ಈ ಬಗ್ಗೆ ಕಠಿಣ ಕ್ರಮಗಳು ಜಾರಿಯಾಗಲಿ!
No Comment! Be the first one.