ಸದ್ಯ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರ ಚುನಾವಣಾ ಪ್ರಚಾರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫುಲ್ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಿಡುಗಡೆಯಾಗಿ ಅದ್ಬುತ ಪ್ರದರ್ಶನ ಕಾಣುತ್ತಿರುವ ಯಜಮಾನ ಸಿನಿಮಾ 5ನೇ ವಾರಕ್ಕೆ ಕಾಲಿಟ್ಟಿದೆ. ಒಂದಿಲ್ಲೊಂದು ಸಮಸ್ಯೆಗಳಿಂದ ಕುರುಕ್ಷೇತ್ರ ಸಿನಿಮಾದ ಬಿಡುಗಡೆಯೂ ಲೇಟ್ ಆಗುತ್ತಲೇ ಇದೆ. ಅಂದಹಾಗೆ ಬಿಡುಗಡೆಗೆ ಸಿದ್ಧವಾಗಿರುವ ಕುರುಕ್ಷೇತ್ರ ಸಿನಿಮಾವನ್ನು ಹೊರತುಪಡಿಸಿ ಇನ್ನು ದರ್ಶನ್ ಒಪ್ಪಿಕೊಂಡಿರುವ ಸಿನಿಮಾಗಳ ಪಟ್ಟಿಯನ್ನು ಗಮನಿಸಿದರೆ ಮುಂದಿನ ಮೂರ್ನಾಲ್ಕು ವರ್ಷಗಳ ಕಾಲ ದರ್ಶನ್ ಅವರನ್ನು ಯಾರೊಬ್ಬರೂ ಮಾತನಾಡಿಸಲಾರದಷ್ಟು ಫುಲ್ ಬ್ಯುಸಿಯಾಗಿದ್ದಾರೆ. ಸದ್ಯ ಒಡೆಯ ಚಿತ್ರದ ಶೂಟಿಂಗ್ ನಲ್ಲಿ ನಿರತರಾಗಿದ್ದು, ಇದಾದ ಬಳಿಕ ರಾಬರ್ಟ್ ಚಿತ್ರದಲ್ಲಿ ನಟಿಸಲಿದ್ದಾರೆ.
ಮೂಲಗಳ ಪ್ರಕಾರ ಈ ಚಿತ್ರಗಳಲ್ಲದೇ ಡಿ 5, ಮದಕರಿ ನಾಯಕ, ವೇದಾಳಂ ರಿಮೇಕ್ ಸಿನಿಮಾ, ಶ್ರೀ ಕೃಷ್ಣ ದೇವರಾಯ, ನವಗ್ರಹ 2 ಚಿತ್ರಗಳಲ್ಲೂ ದರ್ಶನ್ ನಟಿಸಲಿದ್ದಾರೆ. ಇದರ ಜತೆ ಜತೆಗೆ ಅಮರ್, ಇನ್ಸ್ ಪೆಕ್ಟರ್ ವಿಕ್ರಮ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಆಸ್ಪೋಟ, ಸರ್ವಾಂತರ್ಯಾಮಿ, ಆಂಜನೇಯ ಸಿನಿಮಾಗಳೂ ಸೆಟ್ಟೇರುವ ಸಾಧ್ಯತೆ ಇದೆ. ಇನ್ನು ಅಭಿಮಾನಿಗಳು ಬಾಕ್ಸ್ ಆಫೀಸ್ ಸುಲ್ತಾನನ ಅಬ್ಬರವನ್ನು ಸವಿಯುವುದಷ್ಟೇ ಬಾಕಿ.