ಸಾಮಾನ್ಯಕ್ಕೆ ಸೂಪರ್ ಸ್ಟಾರ್ ನಟರ ಮಕ್ಕಳನ್ನು ಬೇರೆ ಯಾವುದೋ ಲೋಕದಲ್ಲಿ ಹುಟ್ಟಿಬಂದವರಂತೆ ಬೆಳೆಸೋ ಸಂಪ್ರದಾಯ ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಹೈಫೈ ಆಟಗಳು, ಮೋಜು, ಮಸ್ತಿಗಳಲ್ಲೇ ಮಕ್ಕಳು ಕಳೆದುಹೋಗಿರುತ್ತಾರೆ. ಇದರಿಂದ ಸಹಜವಾದ ಬಾಲ್ಯದಿಂದ ವಂಚಿತರಾಗಿರುತ್ತಾರೆ. ಹೋದಲ್ಲಿ ಬಂದಲ್ಲಿ ಕಾರು, ಕುಂತಲ್ಲಿ ನಿಂತಲ್ಲಿ ಸೇವೆ ಮಾಡಲು ಆಳುಗಳು, ಹಣದ ಅಮಲು, ಬೇಡದ ತೆವಲುಗಳನ್ನು ಮೆತ್ತಿ ಮಕ್ಕಳ ಸುಂದರ ಬದುಕನ್ನು ಎಷ್ಟು ಜನ ಕೊಂಪೆ ಮಾಡಿಲ್ಲ? ಒಟ್ಟಾರೆ ಎಷ್ಟೋ ಜನ ಸಿನಿಮಾ ನಟ ನಟಿಯರ ಮಕ್ಕಳು ಅನ್ಯಗ್ರಹ ಜೀವಿಗಳಂತೆ ಬದುಕುತ್ತಿರೋ ಸಾಕಷ್ಟು ಉದಾಹರಣೆಗಳಿವೆ.
ಆದರೆ ಇಲ್ಲೊಬ್ಬ ಸೂಪರ್ ಸ್ಟಾರ್ ಅಂಥಾದ್ದಕ್ಕೆಲ್ಲಾ ಆಸ್ಪದವೇ ಕೊಡದೆ ತನ್ನ ಮುದ್ದು ಮಗನನ್ನು ಜನರ ನಡುವೆ, ಸಹಜವಾಗಿ ಬೆಳೆಸುತ್ತಿದ್ದಾರೆ. ಆತನಿಗೆ ದಕ್ಕಬೇಕಾದ ಸಹಜ ಬಾಲ್ಯವನ್ನು ಕೊಡಮಾಡಿದ್ದಾರೆ. ದರ್ಶನ್ ಅವರ ಪುತ್ರ ವಿನೀಶ್ಗೆ ಅಪ್ಪನಂತೆಯೇ ಪ್ರಾಣಿಗಳೆಂದರೆ ಬಲು ಪ್ರೀತಿ ಅನ್ನೋ ವಿಚಾರ ಎಲ್ಲರಿಗೂ ಗೊತ್ತಿದೆ. ಮೊನ್ನೆ ಮೈಸೂರಿನಲ್ಲಿರುವ ದರ್ಶನ್ ಅವರ ಫಾರ್ಮ್ ಹೌಸ್ನಲ್ಲಿ ಹಸುವೊಂದು ಕರುವಿಗೆ ಜನ್ಮ ನೀಡಿತ್ತು. ಅದರ ಗಿಣ್ಣು ಹಾಲನ್ನು ದರ್ಶನ್ ಮತ್ತು ಪುತ್ರ ವಿನೀಶ್ ಕರೆದಿದ್ದಾರೆ. ಹಾಲು ಕರೆಯೋದು ನೋಡೋದಕ್ಕೆ ಸುಲಭ ಅನಿಸಿದರೂ ಅದೊಂಥರಾ ಕಲೆ ಅನ್ನೋದು ಕರೆದವರಿಗಷ್ಟೇ ಗೊತ್ತಾಗುವಂಥದ್ದು. ತೋಳುಗಳ ಬಲವನ್ನೆಲ್ಲಾ ಬೆರಳುಗಳತ್ತ ತಳ್ಳಿ ಹದವಾಗಿ ಕೆಚ್ಚಲು ಹಿಂಡಿ ಹಾಲು ಕರೆಯೋದು ಕಷ್ಟದ ಕೆಲಸ. ದರ್ಶನ್ ಕೈಗೆ ಏಟು ಬಿದ್ದಿದ್ದರ ನೋವು ಇನ್ನೂ ಹಾಗೇ ಇದ್ದರೂ ಒಂದು ಎಡಗೈನಲ್ಲಿ ಹಾಲು ಕರೆಯುತ್ತಾ, ಮಗನಿಗೂ ಮಾರ್ಗದರ್ಶನ ನೀಡಿದ್ದಾರೆ. ಇದರ ವಿಡಿಯೋವನ್ನು ದರ್ಶನ್ ಅವರ ತಂಡದ ಹುಡುಗರು ಹೊರಗೆ ಬಿಟ್ಟಿದ್ದಾರೆ. ಎಲ್ಲೆಡೆ ಈಗ ದರ್ಶನ್ ಮತ್ತವರ ಮಗ ಹಾಲು ಕರೆಯೋ ವಿಡಿಯೋ ವೈರಲ್ ಆಗಿದೆ.
No Comment! Be the first one.