ದರ್ಶನ್ ಬರೀ ಮನುಷ್ಯ ಜೀವನಕ್ಕೆ ಮಾತ್ರ ಬೆಲೆ ಕೊಡುವ ವ್ಯಕ್ತಿಯಲ್ಲ. ಬದಲಿಗೆ ಪ್ರಪಂಚದ ಎಲ್ಲ ಬಗೆಯ ಪ್ರಾಣಿಗಳ ಕಡೆಗೂ ಅವರಿಗೆ ಅಪಾರವಾದ ಒಲವು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಪಾರವಾದ ಪ್ರಾಣಿ ಪ್ರ್ರಿಯರೆಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರ ಬಗ್ಗೆ ಅವರ ಅಭಿಮಾನಿಗಳಿಗೆ ಇಂಚಿಂಚಾಗಿ ಗೊತ್ತಿದೆ. ಅಂದಹಾಗೆ ಚಾಲೆಂಜಿಂಗ್ ಸ್ಟಾರ್ ತಮ್ಮ ಬ್ಯುಸಿ ಕೆಲಸ ಕಾರ್ಯಗಳ ನಡುವೆಯೂ ನಾಗರಹೊಳೆ ಅಭಯಾರಣ್ಯ, ಬಂಡಿಪುರ, ಎಂಎಂ ಹಿಲ್ಸ್ ಮುಂತಾದೆಡೆಗಳಲ್ಲಿ ವನ್ಯಜೀವಿ ಛಾಯಾಗ್ರಹಣ ನಡೆಸುತ್ತಿರುತ್ತಾರೆ. ಎಲ್ಲೇ ಇದ್ದರೂ ಮೈಸೂರಲ್ಲಿಯೇ ಹೆಚ್ಚಿನ ಸಮಯ ಕಳೆಯಲು ಹಾತೊರೆಯುತ್ತಾರೆ. ರಾಜ್ಯ ಅರಣ್ಯ ಇಲಾಖೆಯ ರಾಯಭಾರಿಯೂ ಆಗಿರುವ ದರ್ಶನ್ ಕಬಿನಿ ಹಿನ್ನೀರಿನ ಅರಣ್ಯಗಳಿಗೂ ಭೇಟಿ ನೀಡುತ್ತಿರುತ್ತಾರೆ. ಅದರಲ್ಲಿಯೂ ಈ ಭಾಗದ ಕಾಡುಗಳಲ್ಲಿ ಸ್ನೇಹಿತರ ಜೊತೆಗೂಡಿ ರೌಂಡು ಹೊಡೆಯುವುದೆಂದರೆ ದಚ್ಚು ಪಾಲಿಗೆ ಹಬ್ಬದಂತೆ. ಯಜಮಾನ ಚಿತ್ರೀಕರಣದ ಸಂದರ್ಭದಲ್ಲಿ ಕೂಡಾ ಸಿಕ್ಕ ಬಿಡುವಿನಲ್ಲಿ ಕಬಿನಿ ಆಸುಪಾಸಿನ ಕಾಡಿನಲ್ಲಿ ಸುತ್ತಾಡಿ ಸಂಭ್ರಮಿಸಿದ್ದರು. ಕಾಡುಗಳಲ್ಲಿ ತಿರುಗಾಡುತ್ತಾ ಅಲ್ಲಿನ ವನ್ಯಜೀವಿಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ನಂತರ ಅದರದ್ದೊಂದು ಪ್ರದರ್ಶನವನ್ನೂ ಕೂಡ ಮಾಡಿದ್ದರು. ಈಗ ಗಜ ಆಫ್ರಿಕಾ ಖಂಡದ ಕಾಡುಗಳಲ್ಲಿ ಕ್ಯಾಮೆರಾ ಹಿಡಿದು ಓಡಾಡುತ್ತಿದೆ. ಕೀನ್ಯಾದ ದಟ್ಟ ಕಾಡಿನಲ್ಲಿ ಬೀಡುಬಿಟ್ಟಿರುವ ದರ್ಶನ್ ಇಲ್ಲಿಂದ ಕೊಂಡೊಯ್ದಿರುವುದ ಅತ್ಯಾಧುನಿಕ ಕ್ಯಾಮೆರಾ ಸಲಕರಣೆಗಳ ಮೂಲಕ ವನ್ಯ ಜೀವಿಗಳ ಚಲನವಲನಗಳನ್ನು ಕ್ಯಾಪ್ಚರ್ ಮಾಡುತ್ತಿದ್ದಾರೆ.

ಪ್ರಾಣಿಗಳ ಮೇಲೆ ಅತೀವವಾದ ಪ್ರೀತಿ ಹೊಂದಿರುವ ದರ್ಶನ್ ಅವರಿಗೆ ಅವುಗಳ ಆವಾಸ ಸ್ಥಾನವಾದ ಕಾಡುಗಳೆಂದರೂ ಇಷ್ಟ. ಆಗಾಗ ದಟ್ಟಾರಣ್ಯದಲ್ಲಿ ಸಫಾರಿ ಮಾಡುತ್ತಾ ಅಪರೂಪದ ಪ್ರಾಣಿ ಪಕ್ಷಿಗಳನ್ನು ಕಣ್ತುಂಬಿಕೊಳ್ಳುವುದು ಅವರ ಹವ್ಯಾಸಗಳಲ್ಲೊಂದು. ತಮ್ಮ ಫಾರ್ಮ್ ಹೌಸಿನಲ್ಲಿ ಪ್ರಾಣಿಗಳನ್ನು ಸಾಕಿಕೊಂಡು, ಮೈಸೂರು ಮೃಗಾಲಯದಲ್ಲಿರುವ ಕೆಲವು ಪ್ರಾಣಿಗಳನ್ನು ದತ್ತು ಪಡೆದು ಪೊರೆಯುತ್ತಿರುವ ಚಾಲೆಂಜಿಂಗ್ ಸ್ಟಾರ್ ಪ್ರಾಣಿ ಮತ್ತು ಪರಿಸರ ಪ್ರೇಮವನ್ನು ಸಿನಿಮಾದಷ್ಟೇ ತೀವ್ರವಾಗಿ ಹಚ್ಚಿಕೊಂಡಿದ್ದಾರೆ. ಈಗ ರಾಬರ್ಟ್ ಚಿತ್ರದ ಬಿಡುವಿರದ ಚಿತ್ರೀಕರಣದ ನಡುವೆಯೂ ಸಿಕ್ಕ ಕೆಲವೇ ದಿನಗಳ ಬಿಡುವನ್ನು ಅರಣ್ಯ ಸುತ್ತಾಟಕ್ಕೆ ವಿನಿಯೋಗಿಸಿದ್ದಾರೆ.

ದರ್ಶನ್ ಬರೀ ಮನುಷ್ಯ ಜೀವನಕ್ಕೆ ಮಾತ್ರ ಬೆಲೆ ಕೊಡುವ ವ್ಯಕ್ತಿಯಲ್ಲ. ಬದಲಿಗೆ ಪ್ರಪಂಚದ ಎಲ್ಲ ಬಗೆಯ ಪ್ರಾಣಿಗಳ ಕಡೆಗೂ ಅವರಿಗೆ ಅಪಾರವಾದ ಒಲವು. ಇವತ್ತಿಗೂ ದರ್ಶನ್ ತಮ್ಮ ಮನೆಯಲ್ಲಿ ಹತ್ತಾರು ಪ್ರಬೇಧದ, ವಿಭಿನ್ನವಾದ ಪ್ರಾಣಿ, ಪಕ್ಷಿಗಳನ್ನು ಸಾಕಿಕೊಂಡಿದ್ದಾರೆ, ಮೇಕೆಯನ್ನು ಕೂಡಾ ಸಾಕಿದ್ದರು ಎಂದರೆ ನಂಬಲೇಬೇಕು.

ತಾವು ಚಿತ್ರೀಕರಣಕ್ಕೆಂದು ಹೊರ ದೇಶಗಳಿಗೆ ಹೋದಾಗಲೆಲ್ಲಾ ಅಲ್ಲಿಂದ ಯಾವುದಾದರೊಂದು ಸಾಕು ಪ್ರಾಣಿಯನ್ನೊ, ಪಕ್ಷಿಗಳನ್ನೋ ತಂದಿಟ್ಟುಕೊಳ್ಳುವುದು ಮಾಮೂಲಿಯಾಗಿಬಿಟ್ಟಿದೆ. ದರ್ಶನ್ ತಮ್ಮ ಎಸ್ಟೇಟಿನಲ್ಲಿ ಈಗಲೂ ಕುದುರೆ, ಒಂಟೆಗಂಳಂಥ ಪ್ರಾಣಿಗಳನ್ನು ಪ್ರೀತಿಯಿಂದ ಸಲಹುತ್ತಿದ್ದಾರೆ. ಸಾಮಾನ್ಯವಾಗಿ ಯಾರಾದರೂ ಫಾರಿನ್ ಟೂರುಗಳಿಗೆ ಹೋದರೆ ಮನೆಯ ಹಿರಿಯರಿಗೆ, ಸ್ನೇಹಿತರಿಗೆ ಅಲ್ಲಿನ ದುಬಾರಿ ಚಾಕೊಲೇಟು, ಡ್ರಿಂಕ್ಸುಗಳನ್ನು ತಂದುಕೊಡುವುದು ವಾಡಿಕೆ. ಆದರೆ, ದರ್ಶನ್ ತಾವು ಹೊರದೇಶಗಳಿಂದ ಬರುವಾಗ ದುಬಾರಿ ರಮ್’ಗಳನ್ನು ತಂದು ತಮ್ಮ ಕುದುರೆಗಳಿಗೆ ಕುಡಿಸುತ್ತಾರೆ. ಹೀಗಾಗಿ ಡಿ ಬಾಸ್ ತಮ್ಮ ತೋಟದೊಳಗೆ ಎಂಟ್ರಿ ನೀಡುತ್ತಿದ್ದಂತೇ ಆ ಕುದುರೆಗಳು ಇವರ ಆಗಮನಕ್ಕಾಗಿ ಕೆನೆದು ನಿಲ್ಲುತ್ತವೆ.

ತೀರಾ ಬಡತನದ ದಿನಗಳಲ್ಲೂ, ತಮ್ಮ ದುಡಿಮೆಯ ಒಂದು ಪಾಲನ್ನು ಪಾರಿವಾಳ, ನಾಯಿಗಳಿಗೆ ವ್ಯಯಿಸುತಿದ್ದ ದರ್ಶನ್ ತಮ್ಮ ಪ್ರವೃತ್ತಿಯನ್ನು ಇಂದಿಗೂ ಹಾಗೇ ಉಳಿಸಿಕೊಂಡು, ಜೊತೆಗೆ ಬೆಳೆಸಿಕೊಂಡು ಬಂದಿದ್ದಾರೆ. ದರ್ಶನ್ ಅವರ ಪ್ರಾಣಿ ಪ್ರೀತಿ, ಅವರ ಕಾರು ಕ್ರೇಜುಗಳ ಬಗ್ಗೆ ಥರಹೇವಾರಿ ಕಥೆಗಳಿವೆ. ಈಗ ಅವರು ದೇಶದಾಚೆಗಿರುವ ಕಾಡಿಗೆ ಹೋಗಿರುವುದು ಅದಕ್ಕೆ ನಿದರ್ಶನದಂತಿದೆ. ಅಂದಹಾಗೆ, ವೈಲ್ಡ್ ಲೈಫ್ ಫೊಟೊಗ್ರಫಿಯಿಂದ ಬಂದ ಹಣವನ್ನು ದರ್ಶನ್ ಅರಣ್ಯ ಇಲಾಖೆ ನೌಕರರ ಏಳಿಗೆಗಾಗಿ ನೀಡಿದ್ದರು. ಈ ಬಾರಿ ಯಾರಿಗೆ ಕೊಡುತ್ತಾರೋ ನೋಡಬೇಕು!
