ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಸ್ಥಾನದಲ್ಲಿ ಕುಂತು ಏನೆಲ್ಲಾ ಮಾಡಬಾರದೋ ಅದೆಲ್ಲವನ್ನೂ ಚಾಚೂ ತಪ್ಪದೆ ಪಾಲಿಸುತ್ತಿದ್ದಾರೆ ಶ್ರೀಯುತ ಎನ್.ಎಂ. ಸುರೇಶು. ಮೊನ್ನೆ ಮೊನ್ನೆ ತನ್ನ ಗೆಣೆಕ್ಕಾರರನ್ನೆಲ್ಲಾ ಗೋವಾ ಪ್ರವಾಸಕ್ಕೆ ಕರೆದುಕೊಂಡು ಹೋಗಿ, ಕುಡಿದು ಬಡಿದಾಡಿಕೊಳ್ಳಲು ಕಾರಣರಾಗಿದ್ದರು. ಅದಕ್ಕೂ ಮುಂಚೆ ಶಿವರಾಜ್ ಕುಮಾರ್ ಪತ್ನಿ ಗೀತಾ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ʻಅವರಿಗೆ ಪಕ್ಷಭೇದ ಮರೆತು ಬೆಂಬಲ ನೀಡೋಣ ಬನ್ನಿ…ʼ ಅಂತಾ ಕರೆ ಕೊಟ್ಟು ಅಪಹಾಸ್ಯಕ್ಕೀಡಾಗಿದ್ದರು. ಈಗ ಚಲನಚಿತ್ರ ವಾಣಿಜ್ಯ ಮಂಡಳಿಯ ಹಣವನ್ನು ದರ್ಶನ್ ಗ್ಯಾಂಗ್ನಿಂದ ಕೊಲೆಯಾದ ರೇಣುಕಾಸ್ವಾಮಿಯ ಮನೆಗೆ ಕೊಟ್ಟು ಬಂದಿದ್ದಾರೆ.
ಹತನಾದ ರೇಣುಕಾಸ್ವಾಮಿಯೇನು ಚಿತ್ರರಂಗಕ್ಕೆ ಸಂಬಂಧಿಸಿದವನಲ್ಲ. ಯಾರನ್ನೇ ಆಗಲಿ ಕೊಲ್ಲುವುದು ಈ ದೇಶದ ನೀತಿಯಲ್ಲ. ಹಾಗಂತ ಬಡಿಸಿಕೊಂಡು ಸತ್ತವನು ದೇಶ ಕಾಯುವ ಯೋಧನಂತೂ ಅಲ್ಲ. ಸಿಕ್ಕ ಸಿಕ್ಕ ಹೆಣ್ಣುಮಕ್ಕಳಿಗೆ ಪೋಲಿ ಮೆಸೇಜು, ಗಲೀಜು ಫೋಟೋಗಳನ್ನು ಕಳಿಸುತ್ತಿದ್ದ ಎನ್ನುವ ಆರೋಪವೂ ಇವನ ಮೇಲಿದೆ. ಹಾಗಿದ್ದಮೇಲೆ ಯಾರ ಅನುಮತಿ ಪಡೆದು ಎನ್.ಎಂ. ಸುರೇಶ್ ಐದು ಲಕ್ಷ ರುಪಾಯಿಗಳನ್ನು ದಾನ ಮಾಡಿದರೋ ಗೊತ್ತಿಲ್ಲ. ಒಂದುವೇಳೆ ರೇಣುಕಾಸ್ವಾಮಿ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡುವುದೇ ಆಗಿದ್ದಿದ್ದರೆ, ತಮ್ಮ ಅಕೌಂಟಿಂದ ಎಷ್ಟು ಬೇಕೋ ಎತ್ತೆತ್ತಿಕೊಡಬಹುದಿತ್ತು. ಅದನ್ನು ಯಾರೂ ಪ್ರಶ್ನಿಸುತ್ತಿರಲಿಲ್ಲ… ಆದರೆ, ಸುರೇಶ್, ಗೋವಿಂದು ಗ್ಯಾಂಗ್ಗೆ ಇಷ್ಟು ತರಾತುರಿಯಲ್ಲಿ ಹೋಗಿ ಚೆಕ್ಕು ವಿತರಿಸುವ ಕಾರ್ಯಕ್ರಮ ನಡೆಸುವ ಧಾವಂತವಾದರೂ ಏನಿತ್ತು?
ಹಾಗೆ ನೋಡಹೋದರೆ ದರ್ಶನ್ ಅಗಣಿತ ಅಭಿಮಾನಿಗಳನ್ನು ಸಂಪಾದಿಸುವುದರ ಜೊತೆಗೆ ಚಿತ್ರರಂಗದಲ್ಲೇ ನೂರೆಂಟು ಜನರ ದುಶ್ಮನಿಯನ್ನೂ ಕಟ್ಟಿಕೊಂಡಿದ್ದರು. ಒಂದು ಕಾಲಕ್ಕೆ ಇದೇ ಸಾರಾ ಗೋವಿಂದು ಹೋಗಿ ದರ್ಶನ್ ಡೇಟ್ಸು ಪಡೆದು ಸಿನಿಮಾ ಮಾಡಿ ಹಣ ಸಂಪಾದಿಸಿದ್ದರು. ಆನಂತರ ದರ್ಶನ್ ಮತ್ತು ಗೋವಿಂದು ನಡುವಿನ ಸಂಬಂಧ ಹಳಸಿತ್ತು. ಎನ್.ಎಂ. ಸುರೇಶ್ ದರ್ಶನ್ ಹೆಸರಿನಲ್ಲಿ ʻನಮ್ಮೂರ ಹುಡ್ಗʼ ಹೆಸರಿನ ಸಿನಿಮಾವನ್ನು ಅನೌನ್ಸ್ ಮಾಡಿ, ಊರತುಂಬಾ ಕಾಸು ಎತ್ತಿದ್ದರು. ಈ ವಿಚಾರ ಗೊತ್ತಾಗಿ ದರ್ಶನ್ ಕಾಲ್ ಶೀಟ್ ಕ್ಯಾನ್ಸಲ್ ಮಾಡಿದ್ದರು. ದರ್ಶನ್ ಮೇಲೆ ಮಚ್ಚು ಮಸೆಯುತ್ತಿದ್ದ ಈ ಗುಂಪಿಗೆ ಆತ ಮಾಡಿದ ಈ ಅಚಾತುರ್ಯದ ಕೆಲಸವೇ ಬಂಡವಾಳವಾಗಿದೆ. ʻಅತ್ತೆ ಒಡವೆಯನ್ನು ಅಳಿಯ ದಾನ ಮಾಡಿದʼ ಎನ್ನುವಹಾಗೆ ಚಿತ್ರರಂಗದವರಿಂದ ಕಲೆಕ್ಷನ್ ಮಾಡಿದ ದೇಣಿಗೆ ಹಣವನ್ನು ಕೊಲೆಯಾಗಿ ಸತ್ತವನ ಕುಟುಂಬಕ್ಕೆ ಧಾರೆ ಎರೆದುಬಂದಿದ್ದಾರೆ…
ಎನ್.ಎಂ. ಸುರೇಶ್ ಥರದ ಆತುರಗೇಡಿ ಅಧ್ಯಕ್ಷನ ಅವಧಿ ಮುಗಿಯುವ ಹೊತ್ತಿಗೆ ಇಂಥ ಎಷ್ಟು ಯಡವಟ್ಟುಗಳು ಘಟಿಸುತ್ತವೋ ಗೊತ್ತಿ ಲ್ಲ!
No Comment! Be the first one.