ಅದು ಪಟ್ಟದ ಆನೆ. ಕನ್ನಡ ಚಿತ್ರರಂಗವೆನ್ನುವ ಅಂಬಾರಿಯನ್ನು ಹೊತ್ತು ಸಾಗುತ್ತಿತ್ತು. ಗಾಂಭೀರ್ಯ ಮರೆತ ಗಜ ಪುಂಡಾಟ, ಹಾವಳಿ ಶುರು ಮಾಡಿತು. ಕಡೆಗೆ ʻಕೊಲೆಗಡುಕ ಆನೆʼ ಎನ್ನುವ ಆರೋಪ ನೆತ್ತಿಗೇರಿಸಿಕೊಂಡಿತು. ಕುಮ್ಕಿ ಕಾರ್ಯಾಚರಣೆ ಮಾಡಿ ಆನೆಯನ್ನು ಬಂಧಿಸಲಾಯಿತು. ಅಲ್ಲೀತನಕ ಪಟ್ಟದಾನೆಯನ್ನು ಅಣ್ಣ, ತಮ್ಮ, ಬಾಸು ಅಂತಾ ಹೇಳಿಕೊಂಡು ತಿರುಗುತ್ತಿದ್ದ ಮರಿ, ಮುದಿ ಆನೆಗಳೆಲ್ಲಾ ಗರ್ನಾಲು ಶಬ್ದಕ್ಕೆ ಗಾಬರಿ ಬಿದ್ದಂತೆ ಗಾಯಬ್ ಆಗಿವೆ…
ಕುಂತರೂ ನಿಂತರೂ ʻಡಿ ಬಾಸ್ʼ ಅಂತಾ ಹೆಸರು ಹೇಳಿಕೊಂಡು ತಿರುಗುತ್ತಿದ್ದ ಪಡೆಯೇ ಇತ್ತು. ʻದರ್ಶನ್ ಹುಡುಗʼ ಅನ್ನಿಸಿಕೊಂಡರೆ ಅವರಿಗಿರುವ ಅಭಿಮಾನಿಗಳು ನಮಗೆ ಸಾಥ್ ನೀಡುತ್ತಾರೆ ಅನ್ನೋದು ಕೆಲವರ ನಂಬಿಕೆಯಾಗಿತ್ತು. ಇನ್ನು ಕೆಲವರು ದರ್ಶನ್ ಗೆ ಜೈಕಾರ ಹಾಕಿಕೊಂಡು ತಿರುಗಿದರೆ ಅವರ ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾರ್ಟು ಸಿಗಬಹುದು ಅಥವಾ ಅವರೇ ಹೇಳಿ ಯಾವುದಾದರೂ ಸಿನಿಮಾಗಳಲ್ಲಿ ಅವಕಾಶ ಕೊಡಿಸಬಹುದು ಅಂತಾ ಬಯಸುತ್ತಿದ್ದರು. ಕೆಲವು ಬಕೀಟು ಗಿರಾಕಿಗಳಂತೂ ಡಿ ಬಾಸ್ಗೆ ಡ್ರಮ್ಮು ಹಿಡಿದುಕೊಂಡು ತಿರುಗುತ್ತಿದ್ದರು. ಒಂದು ಕಾಲಕ್ಕೆ ನಾನು ದರ್ಶನ್ ಇಬ್ಬರೂ ಜೋಡಿ ಜೀವದ ಥರಾ ಅಂತಾ ಹೇಳಿಕೊಳ್ಳುತ್ತಿದ್ದ ಸೃಜನ್ ಲೋಕೇಶು. ಒಂದು ಸಲ ಗೂಸಾ ಮಡಗಿಸಿಕೊಂಡಮೇಲೆ ದರ್ಶನ್ ಸಾವಾಸವೇ ಬೇಡ ಅಂತಾ ದೂರಾಗಿದ್ದ.
ಇದೇ ದರ್ಶನ್ ಹೆಂಡತಿಗೆ ಬಡಿದು ಜೈಲಿಗೆ ಹೋದಾಗ ದರ್ಶನ್ ಪರ ನಿಂತಿದ್ದವರು ದುನಿಯಾ ವಿಜಯ್. ಭೀಮಾತೀರದಲ್ಲಿ ಸಿನಿಮಾದ ವಿವಾದದಲ್ಲಿ ರವಿ ಬೆಳಗೆರೆ ಅವರ ವಿರುದ್ದ ಭಯಾನಕ ಹೇಳಿಕೆಗಳನ್ನು ಕೊಟ್ಟು ವಿಜಿ ಅವರಿಗೆ ಬೆಂಬಲ ಕೊಟ್ಟಿದ್ದವರು ದರ್ಶನ್. ಕಾಲಾಂತರದಲ್ಲಿ ಕೋಬ್ರಾ ಮತ್ತು ಕಾಟೇರ ನಡುವೆ ಅದೇನೇನು ಹಳಸಿಕೊಂಡಿತೋ, ಇಬ್ಬರ ನಡುವಿನ ಸ್ನೇಹ ಅಷ್ಟಕ್ಕಷ್ಟೇ ಅನ್ನುವಂತಾಯ್ತು.
ಹಾಗೆ ನೋಡಿದರೆ ʼಡಿ ಬಾಸ್ʼ ಎನ್ನುವ ಶಿರೋನಾಮೆ ದರ್ಶನ್ ಮುಡಿಗೇರುವ ತನಕ ದರ್ಶನ್ ಎಲ್ಲರೊಂದಿಗೂ ಒಳ್ಳೇ ಬಾಂಧವ್ಯವನ್ನೇ ಉಳಿಸಿಕೊಂಡಿದ್ದರು. ಅಭಿಮಾನಿಗಳು ಪ್ರೀತಿಯಿಂದ ʻಡಿ ಬಾಸ್ʼ ಅಂತಾ ಕರೆಯಲು ಶುರುಮಾಡಿದ ಮೇಲೆ ಅವರೊಳಗೆ ಒಂಥರಾ ಫ್ಯೂಡಲ್ ಮನಸ್ಥಿತಿ ಸ್ಥಾಪನೆಗೊಂಡಿತು. ಬಾಸ್ ಅನ್ನೋ ವಿಚಾರಕ್ಕೇ ಕನ್ನಡ ಚಿತ್ರರಂಗದಲ್ಲಿ ರಣರಂಪ ಶುರುವಾಯಿತು. ದೊಡ್ಡ ಹೀರೋಗಳೆಲ್ಲಾ ಈ ಬಗ್ಗೆ ಹೇಳಿಕೆ ಕೊಟ್ಟು ತಮ್ಮ ಅಸಮಾಧಾನಗಳನ್ನು ಹೊರಹಾಕಿದ್ದರು.
ಈ ನಡುವೆ ನೀನಾಸಂ ಸತೀಶ್, ಮರಿಟೈಗರ್ ವಿನೋದ್ ಪ್ರಭಾಕರ್ ಥರದವರು ದರ್ಶನ್ ರಿಂದ ಯಾವುದೇ ಫಲಾಫಲಗಳನ್ನು ನಿರೀಕ್ಷಿಸಿದೇ, ಅತಿಯಾಗಿ ಹೊಗಳಲೂ ಹೋಗದೆ, ತಮ್ಮ ಅಭಿಮಾನ, ಸ್ನೇಹವನ್ನು ಸಭ್ಯವಾಗಿಯೇ ತೋರ್ಪಡಿಸಿಕೊಂಡಿದ್ದಿದೆ.
ಆದರೆ, ಹೊಸದಾಗಿ ಚಿತ್ರರಂಗಕ್ಕೆ ಬಂದ ಹುಡುಗರು ದರ್ಶನ್ ಅವರಿಗೆ ಓವರ್ ಬಿಲ್ಡಪ್ ಕೊಟ್ಟು ಅಟ್ಟ ಹತ್ತಿಸಿಕೂರಿಸಿದರು. ಪ್ರಜ್ವಲ್ ದೇವರಾಜ್, ಧರ್ಮ ಕೀರ್ತಿರಾಜ್ ಥರದ ಹೀರೋಗಳು ದರ್ಶನ್ ಅವರನ್ನು ಹೊಗಳಿ ಹೊನ್ನ ಶೂಲಕ್ಕೇರಿಸಿಯೇ ತಮ್ಮ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಿಗೆ ಕರೆಸಿಕೊಂಡರು. ದರ್ಶನ್ ಕೃಪಾಕಟಾಕ್ಷದಿಂದಲೇ ಯಶಸ್ ಸೂರ್ಯ ಗರಡಿ ಸಿನಿಮಾವನ್ನು ಗಿಟ್ಟಿಸಿಕೊಂಡಿದ್ದು. ಧನ್ವೀರನೆನ್ನುವ ಮಹಾನ್ ನಟನಂತೂ ದರ್ಶನ್ ಅವರನ್ನು ಅಡಿಯಿಂದ ಮುಡಿಯವರೆಗೆ ಅನುಕರಿಸಲು ಶುರು ಮಾಡಿದ. ಕಾಮಿಡಿ ಪೀಸ್ ಚಿಕ್ಕಣ್ಣನಂತೂ ಚಾಲೆಂಜಿಂಗ್ ಸ್ಟಾರ್ಗೆ ಬಾಲಂಗೋಚಿಯಂತೆ ಅಂಟಿಕೊಂಡೇ ಇದ್ದ. ಮೊನ್ನೆ ಪೊಲೀಸರು ಕರೆದು ವಿಚಾರಣೆ ಮಾಡಿದ್ದೇ ಮಾಡಿದ್ದು, ಇವನ ಮುಖ ನಾನ್ ಸ್ಟಾಪ್ ಬೇಧಿ ಹೊಡೆದುಕೊಂಡವನಂತೆ ಬಾಡಿ ಹೋಗಿತ್ತು…!
ಈಗ ನೋಡಿ… ದರ್ಶನ್ ಆರೋಪಿ ಸ್ಥಾನದಲ್ಲಿ ನಿಲ್ಲುತ್ತಿದ್ದಂತೇ ಎಲ್ಲರೂ ಗಪ್ಚುಪ್ ಆಗಿದ್ದಾರೆ. ವಿನೋದ್ ಪ್ರಭಾಕರ್ ಮಾತ್ರ ಮೊದಲ ದಿನ ಯಾವ ನಿಲುವಿನಲ್ಲಿದ್ದರೋ ಇವತ್ತೂ ಅದನ್ನೇ ಮುಂದುವರೆಸಿದ್ದಾರೆ. ದರ್ಶನ್ ಅವರ ಕುಟುಂಬದವರೇ ಆದ ಟಕ್ಕರ್ ಮನೋಜ್ ʻವಿ ಸ್ಟಾಂಡ್ ವಿತ್ ಡಿ ಬಾಸ್ʼ ಅಂತಾ ಪೋಸ್ಟ್ ಮಾಡಿ ಸುಮ್ಮನಾಗಿದ್ದಾರೆ. ಉಳಿದಂತೆ ಸದಾ ದರ್ಶನ್ ಅವರ ಇಕ್ಕೆಲಗಳಲ್ಲಿ ಇಲಿಮರಿಗಳಂತೆ ಓಡಾಡಿಕೊಂಡಿದ್ದವರ ಪತ್ತೇನೇ ಇಲ್ಲ. ಪರ ವಹಿಸಿದರೆ ಎಲ್ಲಿ ಪೊಲೀಸರು ಕರೆದು ಕೂರಿಸಿಕೊಳ್ಳುತ್ತಾರೋ ಅನ್ನೋ ಭಯ, ವಿರೋಧಿಸಿದರೆ ಬಾಸ್ ಹೊರಬಂದಮೇಲೆ ಏನೂ ಗಿಟ್ಟದೇ ಹೋಗಿಬಿಡುತ್ತಾ ಎನ್ನುವ ಗೊಂದಲ… ಒಟ್ಟಿನಲ್ಲಿ ದರ್ಶನ್ ಪ್ರಕರಣ ಹಲವರನ್ನು ಇಕ್ಕಟ್ಟಿಗೆ ಸಿಲುಕಿಸಿರೋದಂತೂ ನಿಜ!
No Comment! Be the first one.