- ಮಹಂತೇಶ್ ಮಂಡಗದ್ದೆ
ದಿನಕರ್ ತೂಗುದೀಪ. ಮಾಡಿರೋದು ನಾಲ್ಕು ಸಿನಿಮಾಗಳಾದ್ರೂ ಸ್ಯಾಂಡಲ್ವುಡ್ನಲ್ಲೇ ಅವರದ್ದೇ ಆದ ಖದರ್ ಇದೆ. ಚಾಣಾಕ್ಷ ನಿರ್ದೇಶಕ ಅಂತಾ ಹೆಸರು ಪಡೆದಿರೋ ವ್ಯಕ್ತಿ. ಜೊತೆ ಜೊತೆಯಲಿ, ನವಗ್ರಹ, ಸಾರಥಿ ಸಿನಿಮಾಗಳ ನಂತರ ಲೈಫ್ ಜೊತೆ ಒಂದು ಸೆಲ್ಫಿ ಸಿನಿಮಾ ತೋರಿಸಿ ಸೈಲೆಂಟ್ ಆಗಿದ್ದ ಡೈರೆಕ್ಟರ್ ಈಗ ಮತ್ತೆ ಸೌಂಡ್ ಮಾಡ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಜೊತೆ ದಿನಕರ್ ತೂಗದೀಪ ಅದ್ದೂರಿ ಚಿತ್ರವೊಂದಕ್ಕೆ ಮುಂದಾಗಿದ್ದಾರೆ. ಇತ್ತೀಚೆಗಷ್ಟೇ ಈ ಇಬ್ಬರ ಕಾಂಬಿನೇಷನ್ನಲ್ಲಿ ಸಿನಿಮಾವೊಂದು ಬರ್ತಿದೆ ಅಂತಾ ಗಾಂಧಿನಗರದ ಗಲ್ಲಿ ಗಲ್ಲಿಯಲ್ಲೂ ಸುದ್ದಿ ಸೌಂಡ್ ಮಾಡಿತ್ತು. ಅಪ್ಪು ಜೊತೆ ದಿನಕರ್ ಸಿನಿಮಾ ಮಾಡ್ತಿರೋದರ ಬಗ್ಗೆ ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಹಿತಿ ನೀಡಿದ್ದು, ಪವರ್ ಸ್ಟಾರ್-ದಿನಕರ್ ಕಾಂಬಿನೇಷನ್ನ ಸಿನಿಮಾ ನಿರೀಕ್ಷೆ ಹುಟ್ಟು ಹಾಕಿಸಿದೆ.
ದಿನಕರ್-ಪುನೀತ್ ಸಿನಿಮಾದ ಬಗ್ಗೆ ಡಿ ಬಾಸ್ ಮಾಹಿತಿ : ದಿನಕರ್ ಮತ್ತು ಪುನೀತ್ ಕಾಂಬಿನೇಷನ್ನ ಸಿನಿಮಾದ ಬಗ್ಗೆ ಸ್ವತಃ ದರ್ಶನ್ ಮಾಹಿತಿ ನೀಡಿದ್ದು, ಸಂದರ್ಶನವೊಂದರಲ್ಲಿ ದಿನಕರ್ ಜೊತೆ ಯಾವಾಗ ಸಿನಿಮಾ ಮಾಡ್ತೀರ ಅಂತಾ ಕೇಳಿದಕ್ಕೆ, ಸದ್ಯ ಅವ್ರು ಪುನೀತ್ ಜೊತೆ ಸಿನಿಮಾ ಮಾಡ್ತಿದ್ದಾರೆ, ಮುಂದಿನ ದಿನಗಳಲ್ಲಿ ನನ್ನ ಜೊತೆ ಅಂತಾ ಹೇಳಿದ್ದಾರೆ. ಅಲ್ಲಿಗೇ ಪವರ್ ಸ್ಟಾರ್- ತಾಂತ್ರಿಕ ಬ್ರಹ್ಮನ ಸಿನಿಮಾ ಬರ್ತಿರೋದಂತು ಪಕ್ಕಾ ಅನ್ನೋ ಮಾಹಿತಿ ಹೊರ ಬಿದ್ದಿದೆ. ದಿನಕರ್ ತೂಗುದೀಪ ಒಂದು ಸಿನಿಮಾ ಮಾಡ್ತಾರೆ ಅಂದ್ರೆ ಆ ಸಿನಿಮಾಗೆ ಅದರದ್ದೇ ಆದ ತೂಕ ಇರುತ್ತೆ. ಅವರನ್ನು ಸ್ಯಾಂಡಲ್ವುಡ್ನಲ್ಲಿ ತಾಂತ್ರಿಕ ಬ್ರಹ್ಮ ಅಂತಾನೇ ಕರೆಯಲಾಗುತ್ತದೆ.
ಜೊತೆ ಜೊತೆಯಲಿ, ನವಗ್ರಹ, ಸಾರಥಿ ಸಿನಿಮಾಗಳಂತ ಬ್ಲಾಕ್ ಬಸ್ಟರ್ ಹಿಟ್ ಕೊಟ್ಟಿರೋ ಈ ನಿರ್ದೇಶಕನ ಮುಂದಿನ ಸಿನಿಮಾದ ಬಗ್ಗೆ ಮಾಮೂಲಾಗಿಯೇ ಎಕ್ಸ್ಪೆಕ್ಟೇಷನ್ಗಳಿತ್ತು. ಆದ್ರೆ ದೊಡ್ಮನೆ ಹುಡುಗನ ಜೊತೆ ಸಿನಿಮಾ ಮಾಡ್ತಾರೆ ಅಂದ್ರೆ ಆ ನಿರೀಕ್ಷೆ ಈಗ ಮತ್ತಷ್ಟು ಹೆಚ್ಚಾಗಿದೆ. 2011ರ ನಂತರ ದಿನಕರ್ ಮತ್ತೆ ಪೆನ್ನು ಹಿಡಿದು ಕಥೆ ಬರೆಯುತ್ತಿದ್ದಾರೆಂದರೆ ನಿಜಕ್ಕೂ ಅದು ಸ್ಯಾಂಡಲ್ವುಡ್ನ ಮತ್ತೊಂದು ಲೆವೆಲ್ನ ಸಿನಿಮಾ ಆಗಲಿದೆ ಅನ್ನೋದು ಚಿತ್ರರಂಗದ ಪಂಡಿತರ ಮಾತು. ಒಟ್ಟಾರೆಯಾಗಿ ಪುನೀತ್ ಮತ್ತು ದಿನಕರ್ ತೂಗುದೀಪ ಕಾಂಬಿನೇಷನ್ನಲ್ಲಿ ಸ್ಯಾಂಡಲ್ವುಡ್ನ ಮತ್ತೊಂದು ಹೈ ವೋಲ್ಟೇಜ್ ಸಿನಿಮಾ ರೆಡಿಯಾಗ್ತಿರೋದಂತು ಸತ್ಯ. ಸದ್ಯ ಪುನೀತ್ ಯುವರತ್ನ ಸಿನಿಮಾದ ರಿಲೀಸ್ ಕೆಲಸಗಳಲ್ಲಿ ಬ್ಯುಸಿಯಿದ್ದು, ಯುವರತ್ನ ಸಿನಿಮಾ ರಿಲೀಸ್ ಆದ ನಂತರ ಈ ಸಿನಿಮಾ ಸೆಟ್ಟೇರೋ ಸಾಧ್ಯತೆಗಳಿವೆ.