ಕನ್ನಡ ಚಿತ್ರರಂಗದಲ್ಲಿ ಮಲ್ಟಿಸ್ಟಾರ್ ಸಿನಿಮಾಗಳ ಪರ್ವ ಮೆಲ್ಲಗೆ ಕಣ್ತೆರೆಯುತ್ತಿದೆ. ಸುದೀಪ್ ಜೊತೆಯಾಗಿ ನಟಿಸಿದ್ದ ಉಪೇಂದ್ರ ಇದೀಗ ರವಿಚಂದ್ರ ಚಿತ್ರದ ಮೂಲಕ ರವಿಚಂದ್ರನ್ ಅವರಿಗೆ ಜೊತೆಯಾಗಿದ್ದಾರೆ. ಈ ಚಿತ್ರ ಸೆಟ್ಟೇರಿದ ಬೆನ್ನಲ್ಲೇ ಮತ್ತೊಂದು ಮಲ್ಟಿಸ್ಟಾರ್ ಚಿತ್ರದ ಬಗೆಗಿನ ಸುದ್ದಿ ಹೊರ ಬಿದ್ದಿದೆ. ಇದು ಫಲಿಸಿದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಚಿತ್ರದಲ್ಲಿ ಒಟ್ಟಾಗಿ ನಟಿಸಲಿದ್ದಾರೆ.
ಶಿವರಾಜ್ ಕುಮಾರ್ ಮತ್ತು ದರ್ಶನ್ ಅವರು ಒಟ್ಟಾಗಿ ನಟಿಸಲು ಒಪ್ಪಿಕೊಂಡರೆ ಆ ಚಿತ್ರವನ್ನು ನಿರ್ಮಾಣ ಮಾಡಲು ನಿರ್ಮಾಪಕರುಗಳು ಸಾಲುಗಟ್ಟಿ ನಿಲ್ಲುತ್ತಾರೆ. ಬಹು ಹಿಂದಿನಿಂದಲೇ ಒಂದಷ್ಟು ಮಂದಿ ಇದಕ್ಕಾಗಿ ಪ್ರಯತ್ನವನ್ನೂ ಚಾಲ್ತಿಯಲ್ಲಿಟ್ಟಿದ್ದಾರೆ. ಇದೀಗ ಈ ಪ್ರಯತ್ನದಲ್ಲಿ ಹೆಚ್ಚೂ ಕಡಿಮೆ ಯಶಸ್ವಿಯಾಗಿರುವವರು ನಿರ್ದೇಶಕ ಮಹೇಶ್ ಬಾಬು.
ಮಹೇಶ್ ಬಾಬು ಅವರಿಗೆ ಬಹು ಹಿಂದೆಯೇ ನಿರ್ಮಾಪಕರೊಬ್ಬರಿಂದ ಶಿವಣ್ಣ ಮತ್ತು ದರ್ಶಾನ ಅವರನ್ನು ಒಂದಾಗಿಸಿ ಚಿತ್ರ ಮಾಡೋ ಆಫರ್ ಬಂದಿತ್ತು. ಅದಾದ ಕ್ಷಣದಿಂದಲೇ ಇಬ್ಬರಿಗೂ ಹೊಂದುವಂಥಾ ಚೆಂದದ್ದೊಂದು ಕಥೆ ರೆಡಿ ಮಾಡಿಕೊಂಡ ಮಹೇಶ್ ಬಾಬು ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಭೇಟಿಯಾಗಿದ್ದಾರೆ. ಈ ಚಿತ್ರದ ಬಗ್ಗೆ ಮಾತಾಡಿದ್ದಾರೆ. ದರ್ಶನ್ ಕೂಡಾ ಶಿವಣ್ಣನ ಜೊತೆ ಅಭಿನಯಿಸೋದಕ್ಕೆ ಖುಷಿಯಿಂದಲೇ ಒಂದು ಹಂತದ ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ಕಥೆ ಕೇಳಿ ಅದು ಇಷ್ಟವಾದರೆ ಈ ಪ್ರಾಜೆಕ್ಟನ್ನವರು ಓಕೆ ಮಾಡಿದಂತೆಯೇ.
ಆದರೆ ಶಿವರಾಜ್ ಕುಮಾರ್ ಅವರನ್ನು ಇನ್ನಷ್ಟೇ ಭೇಟಿಯಾಗಬೇಕಿದೆ. ದರ್ಶನ್ ಜೊತೆ ನಟಿಸೋ ಪ್ರಶ್ನೆ ಎದುರಾದಾಗೆಲ್ಲ ಆ ಬಗ್ಗೆ ಖುಷಿಯಿಂದಲೇ ಮಾತಾಡುತ್ತಾ ಬಂದಿರೋ ಶಿವಣ್ಣ ಕೂಡಾ ಈ ಚಿತ್ರವನ್ನು ಒಪ್ಪಿಕೊಳ್ಳುವ ಸಾಧ್ಯತೆಗಳೇ ಹೆಚ್ಚಿವೆ.
#