ದರ್ಶನ್-ಸುದೀಪ್ ಈ ಇಬ್ಬರು ಬಿಗ್ ಹೀರೋಗಳು ಅದ್ಯಾವ ಘಳಿಗೆಯಲ್ಲಿ ಪರಸ್ಪರ ಮುನಿಸಿಕೊಂಡು ಮುಖ ತಿರುಗಿಸಿಕೊಂಡರೋ? ಅವತ್ತು ಶುರುವಾದ ಅಸಮಾಧಾನ, ಅಭಿಮಾನಿಗಳ ಕಿತ್ತಾಟ ಇವತ್ತಿನವರೆಗೂ ಬೆಳೆದುಕೊಂಡೇ ಬಂದಿದೆ.

ಭಿನ್ನಾಭಿಪ್ರಾಯಗಳೇನೇ ಇದ್ದರೂ ದರ್ಶನ್ ಅಭಿಮಾನಿಗಳ ಅಫಿಶಿಯಲ್ ಸಂಘಟನೆ ʼಡಿ ಕಂಪನಿʼ ಮತ್ತು ಸುದೀಪ್ ಸಾಂಸ್ಕೃತಿಕ ಪರಿಷತ್ತು ಮೊದಲಿನಿಂದಲೂ ಘನತೆಯಿಂದಲೇ ನಡೆದುಕೊಂಡು ಬಂದಿವೆ. ತಂತಮ್ಮ ಅಭಿಪ್ರಾಯಗಳನ್ನು ಶಿಷ್ಟ ರೀತಿಯಲ್ಲೇ ವ್ಯಕ್ತಿಪಡಿಸಿವೆ. ಆದರೆ, ನಡುವೆ ಇರುವ ಕೆಲವು ಕಿಡಿಗೇಡಿಗಳು, ಆತುರಗೆಟ್ಟವರು ಅಭಿಮಾನದ ಹೆಸರಿನಲ್ಲಿ ಎಬ್ಬಿಸಿದ ರಗಳೆಗಳೇ ಹೆಚ್ಚು.  ಸಣ್ಣ ತಪ್ಪುಗಳನ್ನೂ ದೊಡ್ಡದು ಮಾಡಲು ಕಾದು ಕುಂತಿರುತ್ತಾರೆ. ಒಬ್ಬರಿಗೊಬ್ಬರು ಕೆಸರೆರಚಿಕೊಳ್ಳುವ ಕೆಲಸವನ್ನು ಎರಡೂ ಕಡೆಯವರು ನಿಯತ್ತಿನಿಂದ ಮಾಡುತ್ತಾಬಂದಿದ್ದಾರೆ.

ಮೊನ್ನೆ ದಿನ ಹಿರಿಯ ಕವಿ ಕೆ.ಎಸ್. ನಿಸಾರ್ ಅಹಮದ್ ತೀರಿಕೊಂಡರಲ್ಲಾ… ಅವತ್ತಿನ ದಿನ ಕಿಚ್ಚ ಸುದೀಪಗ ಟ್ವೀಟ್ ಮಾಡಿ ಅಗಲಿದ ಹಿರಿಯ ಜೀವಕ್ಕೆ ಶ್ರದ್ಧಾಂಜಲಿ ಅರ್ಪಿಸಿದ್ದರು. ಅವರು ಟ್ವೀಟ್ ಮಾಡಿದ ಸಾಲಿನಲ್ಲಿ ʻನಿತ್ಯೋತ್ಸವʼ ಬದಲಿಗೆ ʻನಿತ್ಯೊತ್ಸವʼ ಎಂದಾಗಿತ್ತು. ಎಂಥಾ ಪಂಡಿತರ ಬರವಣಿಗೆಯಲ್ಲೂ ಕಣ್ತಪ್ಪಿನ ದೋಷವಾಗುವುದು ಸಹಜ. ಮೊನ್ನೆ ದಿನ ಪ್ರಜಾವಾಣಿಯಂಥ ವಿಶ್ವಾಸಾರ್ಹ ಪತ್ರಿಕೆಯಲ್ಲೇ ವೈ.ಎಸ್.ವಿ. ದತ್ತ ಅನ್ನೋದರ ಬದಲು ವೈ.ಎಸ್.ವಿ. ಸತ್ತ ಅಂತಾ ಪ್ರಿಂಟಾಗಿತ್ತು.

ಬರೆಯುವಾಗ ಒತ್ತು ದೀರ್ಘ ಬಿಟ್ಟು ಹೋಗುವುದು, ಸಣ್ಣ ಪುಟ್ಟ ಪ್ರಮಾದಗಳಾಗುವುದು ಸಹಜ. ಅದು ಉದ್ದೇಶಪೂರ್ವಕವಲ್ಲದಿದ್ದರೆ ಯಾರಿಗೂ ಮಾರಕವಲ್ಲ. ಹೀಗಿರುವಾಗ ಸುದೀಪ್ ಟ್ವೀಟಿನಲ್ಲಿ ಬಿಟ್ಟುಹೋದ ದೀರ್ಘವನ್ನು ಕೆಲವರು ಎಳೆದಾಡಿದ್ದರು. ತಕ್ಷಣ ಸುದೀಪ್ ತಮ್ಮ ಟ್ವೀಟನ್ನು ಡಿಲೀಟ್ ಮಾಡಿ ಬೇರೆ ಪೋಸ್ಟ್ ಹಾಕಿದ್ದರು. ಇದನ್ನು ಕಂಡ ಕೆಲ ಹುಡುಗರು ಮಹಾನ್ ಶೋಧನೆ ಮಾಡಿದವರಂತೆ ಸುದೀಪ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟಾ ಕೊಳಕು ಕಮೆಂಟು ಮಾಡಿ, ಕಾಲರು ಮೇಲೆತ್ತಿದ್ದರು. ಇಂಥ ಯಾವುದೋ ಕಮೆಂಟಿಗೆ ನಿರ್ದೇಶಕ ಸಿಂಪಲ್ ಸುನಿ ಲೈಕ್ ಮಾಡಿ ರೀಟ್ವೀಟ್ ಮಾಡಿದ್ದರಂತೆ. ಅಷ್ಟಕ್ಕೇ ಕಿಚ್ಚನ ಅಭಿಮಾನಿಗಳೂ ಕೆರಳಿಹೋಗಿದ್ದಾರೆ.

ಸಿಂಪಲ್ ಸುನಿ ಹಸುವಿನಂತಾ ವ್ಯಕ್ತಿ. ಯಾವತ್ತೂ ಯಾವುದೇ ಗಾಸಿಪ್ಪುಗಳಿಗೆ ಆಹಾರವಾದವರಲ್ಲ. ಇಲ್ಲದ ರಗಳೆಗಳನ್ನು ಮೈಮೇಲೆಳೆದುಕೊಂಡವರೂ ಅಲ್ಲ. ಅದೇನು ಪೋಸ್ಟು ಅಂತಾ ನೋಡದೇ ಅವರು  ಲೈಕು ಒತ್ತಿದ್ದರೋ ಏನೋ ಗೊತ್ತಿಲ್ಲ. ಒಟ್ಟಿನಲ್ಲಿ ಕಿಚ್ಚನ ಹುಡುಗರ ಕೆಂಗಣ್ಣಿಗೆ ಸುನಿ ಗುರಿಯಾಗಿದ್ದಾರೆ.

ಇಡೀ ಜಗತ್ತಿಗೇ ಕೇಡುಗಾಲ ಅಮರಿಕೊಂಡಿದೆ. ಕೊರೋನಾ, ಸೋಂಕು, ಶಂಕೆ ಅಂತಾ ಜನ ನರಳುತ್ತಿದ್ದಾರೆ. ಈ ಹೊತ್ತಿನಲ್ಲಿ ಈ ಚಿಲ್ಲರೆ ಕಿತ್ತಾಟ ಬೇಕಾ? ದರ್ಶನ್ ಅಭಿಮಾನಿಗಳಾಗಲಿ, ಕಿಚ್ಚನ ಫ್ಯಾನ್ಸಾಗಲಿ ಇನ್ಯಾವುದೇ ಹೀರೋಗಳ ಹಿಂಬಾಲಕರಾಗಲಿ ಲಿಮಿಟ್ಟು ಮೀರಿ ವರ್ತಿಸೋದನ್ನು ಬಿಡಬೇಕು. ಎಲ್ಲದಕ್ಕಿಂತಾ ಮುಖ್ಯವಾಗಿ ಅಗಣಿತ ಅಭಿಮಾನಿಗಳನ್ನು ಹೊಂದಿರುವ ಸುದೀಪ್ ಮತ್ತು ದರ್ಶನ್ ತಮ್ಮ ಆರಾಧಕರ ಹಿತದೃಷ್ಟಿಯಿಂದಾದರೂ ತಮ್ಮ ಮುನಿಸನ್ನು ಮುರಿಯಬೇಕು…

CG ARUN

ಹಾದಿಬೀದಿ ಲೇಟ್‌ ಸ್ಟೋರಿ!

Previous article

You may also like

Comments

Leave a reply

Your email address will not be published. Required fields are marked *