ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿ ಪ್ರೀತಿ, ಪರಿಸರ ಪ್ರೇಮದ ಬಗ್ಗೆ ಅಭಿಮಾನಿಗಳಿಗೆ ತಿಳಿಯದಿರೋದೇನೂ ಇಲ್ಲ. ಆದರೆ ದರ್ಶನ್ ಕೊಂಚ ಬಿಡುವು ಸಿಕ್ಕರೂ ಸೀದಾ ಕಾಡಿನತ್ತ ಹೋಗಿ ಸಫಾರಿ ನಡೆಸುತ್ತಾರಲ್ಲಾ? ಅದರ ಹಿಂದಿರೋದು ಬರೀ ರಿಲ್ಯಾಕ್ಸ್ ಆಗೋ ಉದ್ದೇಶ ಮಾತ್ರವಾ? ಅದು ಕೇವಲ ಅವರ ಹವ್ಯಾಸವಾ? ಇಂಥಾ ನಾನಾ ಪ್ರಶ್ನೆ ಅನೇಕರಲ್ಲಿರಬಹುದು. ಬಹುತೇಕರು ಅದಕ್ಕೆ ಹೌದು ಎಂಬ ಉತ್ತರವನ್ನೇ ಕೊಟ್ಟುಕೊಂಡಿರಲೂ ಬಹುದು. ಆದರೆ ಕಾಡೊಳಗಿನ ಯಜಮಾನನ ಹೆಜ್ಜೆ ಜಾಡು ಅಷ್ಟು ಸಲೀಸಾಗಿ ಸುಳಿವು ಬಿಟ್ಟು ಕೊಡುವಂಥಾದ್ದಲ್ಲ!
ಈಗ ನಿರ್ಮಾಪಕ ಉಮಾಪತಿ ಬಿಚ್ಚಿಟ್ಟಿರೋ ಕೆಲ ಸತ್ಯಗಳು ದರ್ಶನ್ ನಿಜವಾದ ಉದ್ದೇಶವನ್ನು ಅನಾವರಣಗೊಳಿಸಿವೆ. ಬಿಡುವಿರದ ಚಿತ್ರೀಕರಣದ ನಡುವೆಯೂ ಸಮಯ ಹೊಂದಿಸಿಕೊಂಡು ಕಾಡು ಅಲೆಯೋ ದರ್ಶನ್ ಅವರಿಗೆ ಪರಿಸರ ಉಳಿಸುವ ನಿಸ್ವಾರ್ಥ ಕಾಳಜಿಯಿದೆ. ಅವರೀಗ ಮಲೆಮಹದೇಶ್ವರ ಬೆಟ್ಟದ ಕಾಡನ್ನು ಸಂರಕ್ಷಿಸಲು ಮುಂದಾಗಿದ್ದಾರೆ. ಉಮಾಪತಿಯವರು ಹೇಳಿರೋ ವಿಚಾರಗಳ ಪ್ರಕಾರ ಹೇಳೋದಾದರೆ ದರ್ಶನ್ ಈ ಬಗ್ಗೆ ಸ್ಪಷ್ಟವಾದ ರೂಪುರೇಷೆಗಳನ್ನೂ ಸಿದ್ಧಗೊಳಿಸಿಕೊಂಡಿದ್ದಾರೆ.
ದರ್ಶನ್ ಈಗಾಗಲೇ ಕಬಿನಿ, ನಾಗರಹೊಳೆ ಮತ್ತು ಮಲೆಮಹದೇಶದ್ವರ ಕಾಡಿಗೆ ತೆರಳಿ ಮರಗಿಡಗಳು, ಪ್ರಾಣಿ ಪಕ್ಷಿಗಳ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಇದೇ ವೇಳೆಯಲ್ಲಿ ಅರಣ್ಯ ಸಂರಕ್ಷಣಾ ವಲಯದ ಕುಂದುಕೊರತೆಗಳತ್ತಲೂ ಗಮನ ಹರಿಸಿದ್ದಾರೆ. ಮಹದೇಶ್ವರ ಬೆಟ್ಟದ ಅರಣ್ಯ ಇಲಾಖೆಯ ಗುತ್ತಿಗೆ ನೌಕರರಿಗೆ ಸಹಾಯಹಸ್ತ ಚಾಚುವ ಮೂಲಕ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಇದೀಗ ಅದೇ ಮಹದೇಶ್ವರ ಬೆಟ್ಟದ ಕಾಡನ್ನು ಸಂರಕ್ಷಿಸಲು ದರ್ಶನ್ ಮುಂದಾಗಿದ್ದಾರೆ.
ಇದರ ಬಾಗವಾಗಿಯೇ ಸುಸಜ್ಜಿತವಾದೊಂದು ಕ್ಯಾಮೆರಾವನ್ನು ದರ್ಶನ್ ಖರೀದಿಸಿದ್ದಾರೆ. ಇದರಲ್ಲಿ ಪ್ರಾಣಿ ಪಕ್ಷಿಗಳು ಮತ್ತು ಪ್ರಾಕೃತಿಕ ಸೌಂದರ್ಯದ ಫೋಟೋ ತೆಗೆದು, ಅದಕ್ಕೆ ಫ್ರೇಮು ಹಾಕಿ ಮಾರಾಟ ಮಾಡೋದು ಉದ್ದೇಶ. ಇದರಿಂದ ಬಂದ ಕಾಸನ್ನು ಅರಣ್ಯ ಸಂರಕ್ಷಣೆಗೆ ಬಳಸಲು ದರ್ಶನ್ ತೀರ್ಮಾನಿಸಿದ್ದಾರೆ. ಈ ಹಣದಿಂದಲೇ ಕಾಡಿನ ಅಭಿವೃದ್ಧಿ ಹಾಗೂ ಅರಣ್ಯ ಸಿಬ್ಬಂದಿಗೆ ನೆರವು ನೀಡುವ ಉದ್ದೇಶವೂ ಅವರಲ್ಲಿದೆ.
ಈಗ್ಗೆ ಐದು ವರ್ಷದಿಂದೀಚೆಗೆ ದರ್ಶನ್ ಅವರು ರಾಜ್ಯ ಅರಣ್ಯ ಇಲಾಖೆಯ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇದಕ್ಕಾಗಿ ಈವರೆಗೂ ಒಂದು ರೂಪಾಯಿಯನ್ನೂ ಅವರು ತೆಗೆದುಕೊಂಡಿಲ್ಲ. ಈ ಮೂಲಕವೇ ತಮ್ಮೊಳಗಿರುವ ಕಾಡು ಸಂರಕ್ಷಣೆಯ ಉದ್ದೇಶ ಈಡೇರಿಸಿಕೊಳ್ಳುವ ಇರಾದೆಯಷ್ಟೇ ಅವರದ್ದು. ಈ ನಿಟ್ಟಿನಲ್ಲಿ ಅವರೀಗ ದೃಢವಾದ, ಮಾದರಿ ಹೆಜ್ಜೆಯಿಟ್ಟಿದ್ದಾರೆ. ಇದನ್ನು ಅವರ ಅಭಿಮಾನಿಗಳೆಲ್ಲ ಸ್ಫೂರ್ತಿಯಾಗಿ ಪರಿಗಣಿಸಿದ್ದಾರೆ.
#
Leave a Reply
You must be logged in to post a comment.