ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಕ್ಸಿಡೆಂಟ್ನಿಂದಾಗಿ ಕೈಗೆ ಪೆಟ್ಟಾಗಿದ್ದರೂ ಬಹು ಬೇಗನೆ ಚೇತರಿಸಿಕೊಂಡಿದ್ದಾರೆ. ಅವರೀಗ ಮತ್ತೆ ಬಾಕಿ ಉಳಿದಿದ್ದ ಯಜಮಾನ ಚಿತ್ರದ ಚಿತ್ರೀಕರಣ ಮುಗಿಸಿಕೊಳ್ಳುವ ಉತ್ಸಾಹದಿಂದ ಅಖಾಡಕ್ಕಿಳಿದಿದ್ದಾರೆ. ಸದ್ಯಕ್ಕೆ ದರ್ಶನ್ ಸ್ವೀಡನ್ ದೇಶಕ್ಕೆ ತೆರಳಿದ್ದಾರೆ!
ದರ್ಶನ್ ಸ್ವೀಡನ್ಗೆ ಹೋಗಿರೋದು ಯಜಮಾನ ಚಿತ್ರದ ವಿಶೇಷವಾದ ಹಾಡೊಂದರ ಚಿತ್ರೀಕರಣಕ್ಕಾಗಿ. ಗಣೇಶ್ ನೃತ್ಯ ಸಂಯೋಜನೆ ಮಾಡಿರೋ ಈ ಹಾಡಿನ ಚಿತ್ರೀಕರಣಕ್ಕಾಗಿ ನಿರ್ದೇಶಕ ಪಿ ಕುಮಾರನ್ ಸಕತಲ ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಈ ಹಾಡಿನಲ್ಲಿ ರಶ್ಮಿಕಾ ಮಂದಣ್ಣ ಜೊತೆ ದರ್ಶನ್ ಹಾಡಿ ಕುಣಿಯಲಿದ್ದಾರೆ.
ಯಜಮಾನ ಚಿತ್ರತಂಡ ಈ ಹಾಡೂ ಸೇರಿದಂತೆ ಒಂದಷ್ಟು ಭಾಗಗಳ ಚಿತ್ರೀಕರಣವನ್ನು ಬಾಕಿ ಉಳಿಸಿಕೊಂಡಿತ್ತು. ಆದರೆ ಮೈಸೂರಿನಲ್ಲಿ ಅಪಘಾತದಿಂದ ದರ್ಶನ್ ಅವರು ಕೈ ಮುರಿದುಕೊಂಡ ಘಟನೆಯಿಂದ ಚಿತ್ರತಂಡವೂ ಆಘಾತಗೊಂಡಿತ್ತು. ದರ್ಶನ್ ಕೈ ಮೂಳೆ ಮುರಿದ ರೀತಿ ಕಂಡು ಅವರು ಚೇತರಿಸಿಕೊಂಡು ಮತ್ತೆ ಚಿತ್ರೀಕರಣ ಶುರು ಮಾಡೋವಷ್ಟರಲ್ಲಿ ಇನ್ನೂ ಎರಡ್ಮೂರು ತಿಂಗಳು ಬೇಕಾಗುತ್ತದೆ ಎಂದೇ ಅಂದುಕೊಂಡಿದ್ದರು. ಆದರೀಗ ಖುದ್ದು ಚಿತ್ರತಂಡವೇ ಚಕಿತಗೊಳ್ಳುವಂತೆ ದರ್ಶನ್ ಎದ್ದು ನಿಂತಿದ್ದಾರೆ. ಮತ್ತದೇ ಉತ್ಸಾಹದಿಂದಲೇ ಚಿತ್ರ ತಂಡದ ಜೊತೆಗೆ ವಿದೇಶಕ್ಕೆ ಹಾರಿದ್ದಾರೆ. ಈ ಮೂಲಕ ದರ್ಶನ್ ಅಪಘಾತದ ನೋವಿನಿಂದ ಬಿಡುಗಡೆ ಹೊಂದಿ ಫಾರ್ಮಿಗೆ ಮರಳಿರೋದು ಪಕ್ಕಾ ಆಗಿದೆ.
#