ಮಂಡ್ಯ ಲೋಕಸಭಾ ಕ್ಷೇತ್ರದ ಕಣ ರಂಗೇರಿದೆ. ಸುಮಲತಾ ಅಂಬರೀಶ್ ಅವರ ಎಂಟ್ರಿಯಿಂದಾಗಿಯೇ ಈ ಕ್ಷೇತ್ರ ಈ ಬಾರಿ ವಿಶೇಷ ಅನ್ನಿಸಿಕೊಂಡಿತ್ತು. ಅದು ಮತ್ತೂ ವಿಶೇಷ ವಿಶೇಷ ಅನ್ನಿಸಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಸುಮಲತಾರ ಎಡಬಲಗಳಲ್ಲಿ ನಿಂತು ಬೆಂಬಲ ಸೂಚಿಸಿರೋ ಬೆಳವಣಿಗೆಯಿಂದ. ಈ ಮೂಲಕ ಈ ಬಾರಿಯ ಮಂಡ್ಯ ಲೋಕ ಕದನ ರೋಚಕವಾಗಿ ಮಾರ್ಪಟ್ಟಿದೆ.
ಸುಮಲತಾ ಅಂಬರೀಶ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಕ್ಕಾ ಎಂಬಂಥಾ ವಾತಾವರಣ ಆರಂಭದಲ್ಲಿತ್ತು. ಹೇಳಿಕೇಳಿ ರೆಬೆಲ್ ಸ್ಟಾರ್ ಅಂಬರೀಶ್ ಕಾಂಗ್ರೆಸ್ ನ ಪ್ರಭಾವಿ ನಾಯಕರಾಗಿದ್ದವರು. ಹಾಗಿದ್ದ ಮೇಲೆ ಅವರ ಮಡದಿ ಸುಮಲತಾರಿಗೆ ಟಿಕೆಟ್ ಸಿಗದಿರುತ್ತಾ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ರಾಜಕೀಯದಲ್ಲಿ ಏನು ಬೇಕಾದರೂ ನಡೆಯಬಹುದೆಂಬುದಕ್ಕೆ ಸಾಕ್ಷಿಯೆಂಬಂಥಾ ವಿದ್ಯಮಾನಗಳು ಕಣ್ಣೆದುರೇ ನಡೆದಿವೆ. ಕಾಂಗ್ರೆಸ್ ಮತ್ತು ಬಿಜೆಪಿಯ ದೋಸ್ತಿಯಾಟ ಎಲ್ಲವನ್ನೂ ಅದಲುಬದಲಾಗಿಸಿವೆ.
ಆದರೀಗ ಯಶ್ ಮತ್ತು ದರ್ಶನ್ ಒಟ್ಟಾಗಿ ಸುಮಲತಾರ ಬೆಂಬಲಕ್ಕೆ ನಿಲ್ಲುವ ಮೂಲಕ ಮಂಡ್ಯ ಕ್ಷೇತ್ರದ ರಾಜಕೀಯ ಲೆಕ್ಕಾಚಾರಗಳೂ ಕೂಡಾ ಅದಲುಬದಲಾದಂತಾಗಿದೆ. ಈ ಸನ್ನಿವೇಶ ರಾಜಕೀಯ ಮಾತ್ರವಲ್ಲದೇ ಚಿತ್ರರಂಗದ ಮಟ್ಟಿಗೂ ವಿಶೇಷವೇ. ಈ ಮೂಲಕ ದರ್ಶನ್ ಮತ್ತು ಯಶ್ ಮುನಿಸು ಮರೆತು ಒಂದಾಗಿದ್ದಾರೆಂಬಂಥಾ ಮಾತುಗಳೂ ವ್ಯಾಪಕವಾಗಿಯೇ ಕೇಳಿ ಬರುತ್ತಿವೆ!
ಇದಕ್ಕೆ ಕಾರಣ ಇಲ್ಲದಿಲ್ಲ. ಯಶ್ ಮತ್ತು ದರ್ಶನ್ ಯಾವತ್ತಿಗೂ ಒಬ್ಬರನ್ನೊಬ್ಬರು ದೂರಿಕೊಂಡಿಲ್ಲ. ಅವರಿಬ್ಬರ ನಡುವೆ ಯಾವ ವೈಮನಸ್ಯಗಳೂ ನಡೆದಿಲ್ಲ. ಆದರೆ ಅದೇಕೋ ಇವರಿಬ್ಬರ ಅಭಿಮಾನಿಗಳೂ ಆಗಾಗ ವಿನಾಕಾರಣ ಕಚ್ಚಾಡಿಕೊಂಡು ಬಂದಿದ್ದರು. ಈ ಮೂಲಕವೇ ಸ್ಟಾರ್ ವಾರ್ ನಂಥಾದ್ದು ನಡೆದದ್ದೂ ಇದೆ. ಇದು ಮಾತ್ರವಲ್ಲದೇ ಯಶ್ ಸಿನಿಮಾ ಡೈಲಾಗುಗಳನ್ನು ದರ್ಶನ್ಗೆ ಸವಾಲೆಂಬಂತೆ ಬಿಂಬಿಸೋ ಪ್ರಯತ್ನವೂ ನಡೆದಿತ್ತು. ಇದುವೇ ಅಭಿಮಾನಿಗಳ ನಡುವಿನ ತಿಕ್ಕಾಟಕ್ಕೂ ಕಾರಣವಾಗಿತ್ತು.
ಇದಕ್ಕೆ ಯಶ್ ಖಡಕ್ ಆದ ಉತ್ತರವನ್ನೇ ಕೊಟ್ಟಿದ್ದಾರೆ. ನಾವು ನಮ್ಮ ನಮ್ಮ ಹೊಟ್ಟೆ ಪಾಡು ನೋಡಿಕೊಂಡಿದ್ದೆವು. ನಾವು ಅನುಕೂಲಕ್ಕೆ ತಕ್ಕಂತೆ ಬದಲಾಗೋ ಜನ ಅಲ್ಲ. ನಮ್ಮ ನಡುವೆ ಯಾವ ಮನಸ್ತಾಪವೂ ಇಲ್ಲ ಎಂಬರ್ಥದಲ್ಲಿ ಯಶ್ ಹೇಳಿಕೆ ನೀಡಿದ್ದಾರೆ. ಜೊತೆಯಾಗಿ ನಿಂತಿದ್ದಾಗಲೂ ದರ್ಶನ್ ಅವರಲ್ಲಿಯೂ ಕೂಡಾ ಇಂಥಾದ್ದೇ ಸಹಜ ಭಾವಗಳೇ ಕಾಣಿಸಿದ್ದು ಸುಳ್ಳಲ್ಲ. ಹೆಚ್ಚಿನ ಸಂದರ್ಭದಲ್ಲಿ ಈ ಸ್ಟಾರ್ ವಾರುಗಳೆಲ್ಲವೂ ಯಾರಿಂದಲೋ ಸೃಷ್ಟಿಯಾಗಿರುತ್ತವೆ. ಅದಕ್ಕೆ ವಿನಾ ಕಾರಣ ನಟರು ತಲೆ ಕೊಡಬೇಕಾಗಿ ಬರುತ್ತದೆ. ದರ್ಶನ್ ಮತ್ತು ಯಶ್ ವಿಚಾರದಲ್ಲಿಯೂ ಅಂಥಾದ್ದೇ ನಡೆದಿದ್ದರೂ ಅಚ್ಚರಿಯೇನಿಲ್ಲ.
ಆದರೆ, ಮಂಡ್ಯ ಲೋಕಸಭಾ ಚುನಾವಣೆಯ ಅಖಾಡದಲ್ಲಿ ದರ್ಶನ್ ಮತ್ತು ಯಶ್ ಒಳ್ಳೆ ಸ್ನೇಹಿತರೆಂಬ ವಿಚಾರ ಅನಾವರಣಗೊಂಡಿದೆ. ಈ ಮೂಲಕ ಇಬ್ಬರ ಅಭಿಮಾನಿಗಳೂ ಖುಷಿಗೊಂಡಿರೋದಂತೂ ಸತ್ಯ.
No Comment! Be the first one.