ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅದ್ಯಾವ ಕ್ಷೇತ್ರ ಯಾವ ರೀತಿ ಕಾವೇರಿದೆಯೋ ಗೊತ್ತಿಲ್ಲ. ಆದರೆ ಮಂಡ್ಯ ಲೋಕಸಭಾ ಕ್ಷೇತ್ರ ಮಾತ್ರ ಕೊತಕೊತನೆ ಕುದಿಯುತ್ತಿದೆ. ಇಲ್ಲಿಯ ರಾಜಕೀಯ ಸೆಣೆಸಾಟಕ್ಕೆ ಸ್ಯಾಂಡಲ್ ವುಡ್ ನ ನಂಟಿರೋದೀಗ ಜಾಹೀರಾಗಿರೋ ವಿಚಾರ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ರಾಜರಾಜೇಶ್ವರಿ ನಗರದ ಮನೆ ಮೇಲೆ ನಡೆದಿರೋ ಕಲ್ಲು ತೂರಾಟ ಪ್ರಕರಣಕ್ಕೂ ಮಂಡ್ಯದ ಕಣಕ್ಕೂ ಸಂ ಬಂಧವಿದೆಯಾ ಅನ್ನೋ ಪ್ರಶ್ನೆ ಮಾತ್ರ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿ ಬಿಟ್ಟಿದೆ!
ರಾತ್ರಿ ವೇಳೆಯಲ್ಲಿ ರಾಜರಾಜೇಶ್ವರಿ ನಗರದಲ್ಲಿರೋ ದರ್ಶನ್ ಮನೆ ಮೇಲೆ ಕಿಡಿಗೇಡಿಗಳ್ಯಾರೋ ಕಲ್ಲು ತೂರಾಟ ನಡೆಸಿ, ಅವರ ಕಾರಿಗೂ ಕಲ್ಲು ತೂರಿ ಪರಾರಿಯಾಗಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಈ ಸುದ್ದಿ ದೊಡ್ಡ ಮಟ್ಟದಲ್ಲಿ ಸಂಚಲನವನ್ನೇ ಸೃಷ್ಟಿಸಿ ಬಿಟ್ಟಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುಮಲತಾ ಪರವಾಗಿ ಪ್ರಚಾರ ಮಾಡುತ್ತಿರೋದರಿಂದ ಈ ಕೆಲಸವನ್ನ ನಿಖಿಲ್ ಬೆಂಬಲಿಗರೇ ಮಾಡಿದ್ದಾರೆಂಬ ಆರೋಪಗಳೂ ಕೇಳಿ ಬರುತ್ತಿವೆ.
ಈ ಬಗ್ಗೆ ನಿಖಿಲ್ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ. ಇಂಥಾದ್ದನ್ನೆಲ್ಲ ಖಂಡಿತಾ ನಾವಾಗಲಿ ನಮ್ಮ ಕಡೆಯವರು ಮಾಡಿಲ್ಲ. ನಮ್ಮ ಮೇಲೆಯೂ ಇಂಥಾದ್ದೇ ಕೃತ್ಯ ನಡೆದಿತ್ತು. ಯಾರೂ ಈ ಥರದ ಕೆಲಸ ಮಾಡಬಾರದು ಎಂಬರ್ಥದಲ್ಲಿ ನಿಖಿಲ್ ಹೇಳಿದ್ದಾರೆ. ಅತ್ತ ತಮ್ಮ ಬೆಂಬಲಕ್ಕೆ ನಿಂತಿರೋ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ನಡೆದಿರೋ ವಿದ್ಯಮಾನದ ಬಗ್ಗೆ ಸುಮಲತಾ ಕೂಡಾ ಸಿಟ್ಟಾಗಿದ್ದಾರೆ. ಇಂಥಾ ಕೃತ್ಯಗಳಿಂದೆಲ್ಲ ಭಯ ಹುಟ್ಟಿಸಲು ಸಾಧ್ಯವಿಲ್ಲ. ಇಂಥಾದ್ದರಿಂದ ದರ್ಶನ್ ಅವರನ್ನು ಹಿಂದೆ ಸರಿಸೋದೂ ದೂರದ ಮಾತು. ದರ್ಶನ್ ಸೇರಿದಂತೆ ನಾವೆಲ್ಲ ಇದನ್ನು ಸವಾಲಾಗಿ ಸ್ವೀಕರಿಸುತ್ತೇವೆ ಅಂತ ಸುಮಲತಾ ಕೂಡಾ ನೇರವಾಗಿಯೇ ಎದಿರೇಟು ನೀಡಿದ್ದಾರೆ.
ಸುಮಲತಾರ ಮಾತುಗಳೇ ಈ ಕಲ್ಲು ತೂರಾಟದ ಹಿಂದೆ ಎದುರಾಳಿ ಪಕ್ಷಗಳ ಕೈವಾಡವಿದೆ ಅನ್ನೋದನ್ನು ಪರೋಕ್ಷವಾಗಿ ಸಾರುವಂತಿವೆ. ಒಟ್ಟಾರೆಯಾಗಿ ಪರ ವಿರೋಧಗಳ ಮಂಡ್ಯ ರಾಜಕೀಯ ಸ್ಥಿತಿಗತಿಗಳು ಮೆಲ್ಲಗೆ ದ್ವೇಷದ ವಾತಾವರಣವನ್ನೂ ಹೊದ್ದುಕೊಳ್ಳುತ್ತಿದೆ. ಆದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಾವುದೇ ಪಕ್ಷ ಪಾರ್ಟಿ ನೋಡದೆ ರೆಬೆಲ್ ಸ್ಟಾರ್ ಅಂಬರೀಶ್ ಅವರ ಮೇಲಿನ ಅಭಿಮಾನಕ್ಕಾಗಿ ಮಾತ್ರವೇ ಸುಮಲತಾ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ. ಹೀಗಿದ್ದರೂ ಕಲ್ಲು ತೂರಾಟದಂಥಾ ಘಟನಾವಳಿಗಳು ನಡೆಯುತ್ತಿರೋದರ ವಿರುದ್ಧ ದರ್ಶನ್ ಅಭಿಮಾನಿಗಳೂ ಕೂಡಾ ಆಕ್ರೋಶಗೊಂಡಿದ್ದಾರೆ.
ಅಂತೂ ಇದೀಗ ರಾಜರಾಜೇಶ್ವರಿ ನಗರ ಪೊಲೀಸರು ಕಲ್ಲು ತೂರಾಟದ ಹಿಂದೆ ಯಾವ ಕಿಸುರಿಗೆ ಅನ್ನೋದನ್ನು ಪತ್ತೆಹಚ್ಚುವ ಕಾರ್ಯ ಆರಂಭಿಸಿದ್ದಾರೆ. ಸರಿಯಾದೊಂದು ತನಿಖೆ ನಡೆದರೆ ದುಷ್ಕರ್ಮಿಗಳ ಜಾಡು ಹಿಡಿಯೋದು ಪೊಲೀಸರ ಪಾಲಿಗೆ ದೊಡ್ಡ ಕೆಲಸವೇನೂ ಅಲ್ಲ. ಆದರೆ ದರ್ಶನ್ ಮನೆ ಮತ್ತು ಕಾರಿನ ಮೇಲೆ ಬಿದ್ದ ಕಲ್ಲುಗಳಿಗೆ ಮಂಡ್ಯ ಲೀಕಸಭಾ ಚುನಾವಣಾ ಕಣದ ನಂಟಿದೆ ಅನ್ನೋ ಮಾತುಗಳು ಮಾತ್ರ ಬಲವಾಗಿಯೇ ಕೇಳಿ ಬರುತ್ತಿವೆ. ಇದೆಲ್ಲವನ್ನೂ ಪೊಲೀಸ್ ತನಿಖೆ ಮಾತ್ರವೇ ಜಾಹೀರು ಮಾಡಲು ಸಾಧ್ಯವಾದೀತು.
No Comment! Be the first one.