ಸೀರಿಯಲ್, ರಿಯಾಲಿಟಿ ಶೋಗಳು ಸೇರಿದಂತೆ ಎಲ್ಲದರಲ್ಲಿಯೂ ಹೊಸತನ ಮತ್ತು ಸ್ವಂತಿಕೆ ಕಾಯ್ದುಕೊಂಡು ಬಂದಿರೋ ವಾಹಿನಿ ಝೀ ಕನ್ನಡ. ರಾಘವೇಂದ್ರ ಹುಣಸೂರು ಎಂಬ ಕನಸುಗಾರ ಬ್ಯುಸಿನೆಸ್ ಹೆಡ್ ಆಗಿ ಬಂದ ಮೇಲಂತೂ ಈ ವಾಹಿನಿಯ ಕಾರ್ಯಕ್ರಮಗಳಿಗೆ ಬೇರೆಯದ್ದೇ ರಂಗು ಬಂದಿದೆ. ರಾಘವೇಂದ್ರ ಹುಣಸೂರರ ಕನಸು ಮತ್ತು ಒಂದಿಡೀ ತಂಡದ ಅಖಂಡ ಒಂದು ವರ್ಷಗಳ ತಪಸ್ಸಿನ ಫಲವೆಂಬಂತೆ ಈಗ ಈ ವಾಹಿನಿಯಲ್ಲಿ ವಿಷ್ಣುವಿನ ಪ್ರೇಮಕಾವ್ಯದಂಥಾ ‘ವಿಷ್ಣು ದಶಾವತಾರ’ ಧಾರಾವಾಹಿ ಶುರುವಾಗಿದೆ.
ಈ ಧಾರಾವಾಹಿಯ ಪತ್ರಿಕಾಗೋಷ್ಟಿ ನಡೆದ ರೀತಿಯೇ ಅದು ಹೇಗೆ ಭಿನ್ನವಾಗಿ ಮೂಡಿ ಬಂದಿದೆ ಎಂಬುದರ ಸುಳಿವು ನೀಡುತ್ತಿತ್ತು. ಅದೇ ರೀತಿ ಈಗಷ್ಟೇ ಶುರುವಾಗಿರುವ ಶ್ರೀ ವಿಷ್ಣು ದಶಾವತಾರವೂ ಪ್ರೇಕ್ಷಕರನ್ನು ಮೊದಲ ದಿನದಿಂದಲೇ ಹಿಡಿದಿಟ್ಟುಕೊಂಡಿದೆ. ಈ ಪತ್ರಿಕಾ ಗೋಷ್ಠಿಯಲ್ಲಿ ರಾಘವೇಂದ್ರ ಹುಣಸೂರು ಹೇಳಿರೋ ಪ್ರತಿಯೊಂದು ಮಾತುಗಳಿಗೂ ಪೂರಕವಾದ ರೀತಿಯಲ್ಲಿಯೇ ಈ ಧಾರಾವಾಹಿ ಕಿರುತೆರೆಯಲ್ಲೊಂದು ಸಂಚಲನವನ್ನೂ ಸೃಷ್ಟಿಸಿದೆ.
ಕನ್ನಡದಲ್ಲಿ ಪೌರಾಣಿಕ ಕಥಾ ಹಂದರ ಹೊಂದಿರೋ ಸೀರಿಯಲ್ಲುಗಳು ಈ ಹಿಂದೆಯೂ ಬಂದಿವೆ. ಇತ್ತೀಚೆಗೆ ಅದ್ದೂರಿತನದ ಸ್ಪರ್ಶದೊಂದಿಗೆ ಅಂಥಾದ್ದೊಂದು ಟ್ರೆಂಡ್ ಹುಟ್ಟಿಕೊಂಡಿದೆ. ಬಹುತೇಕ ಎಲ್ಲ ವಾಹಿನಿಗಳಲ್ಲಿಯೂ ಈ ಕೆಟಗರಿಯ ಧಾರಾವಾಹಿಗಳದ್ದೇ ಮೇಲುಗೈ. ಆದರೆ ಅದರಲ್ಲಿ ಬಹುತೇಕವುಗಳು ಹಿಂದಿ ಸೇರಿದಂತೆ ಬೇರೆ ಭಾಷೆಗಳಿಂದ ಡಬ್ ಆದವುಗಳು. ಅದೇ ತಂತ್ರಜ್ಞರು, ತಂತ್ರಜ್ಞಾನವನ್ನಿಟ್ಟುಕೊಂಡು ಕಲಾವಿದರನ್ನಷ್ಟೇ ಬದಲಾಯಿಸಿ ಇಂಥಾ ಅನೇಕ ಧಾರಾವಾಹಿಗಳು ಮೂಡಿ ಬರುತ್ತಿವೆ. ಆದರೆ ತಮ್ಮ ಕನಸಿನ ವಿಷ್ಣು ದಶಾವತಾರ ಧಾರಾವಾಹಿ ನೂರಕ್ಕೆ ನೂರರಷ್ಟು ಸ್ವಮೇಕ್ ಆಗಿರಬೇಕು, ಭಿನ್ನವಾಗಿರಬೇಕು ಎಂಬ ಹಂಬಲದೊಂದಿಗೇ ಈ ಪ್ರಾಜೆಕ್ಟನ್ನು ರಾಘವೇಂದ್ರ ಹುಣಸೂರು ಸಾರಥ್ಯದಲ್ಲಿ ಆರಂಭಿಸಲಾಗಿತ್ತು. ಬಹುಶಃ ಅಂಥಾದ್ದೊಂದು ಗುರಿ ಇಲ್ಲದೇ ಹೋಗಿದ್ದರೆ ಈ ಧಾರಾವಾಹಿಗಾಗಿ ಇಡೀ ತಂಡ ಒಂದು ವರ್ಷಕ್ಕೂ ಹೆಚ್ಚು ಕಾಲ ಶ್ರಮ ಪಡುವ ಸನ್ನಿವೇಶವೇ ಬರುತ್ತಿರಲಿಲ್ಲವೇನೋ…
ರಾಘವೇಂದ್ರ ಹುಣಸೂರರ ಮಾತಿನ ಪ್ರಕಾರವಾಗಿಯೇ ಹೇಳೋದಾದರೆ, ಈ ಧಾರಾವಾಹಿಯನ್ನು ಯಾರೂ ಸಲೀಸಾಗಿ ತೆಗೆದುಕೊಳ್ಳಲು ಹಿಂಜರಿಯೋವಂಥಾ ಸವಾಲು ಸ್ವೀಕರಿಸಿಯೇ ರೂಪಿಸಲಾಗಿದೆ. ಸಾಮಾನ್ಯವಾಗಿ ದೇವರ ಕಥನಗಳನ್ನು ಬರೀ ಭಕ್ತಿಯ ಚಹರೆಯನ್ನೇ ಮುಖ್ಯವಾಗಿಸಿ ಕಟ್ಟಿಕೊಡಲಾಗುತ್ತದೆ. ಆದರೆ ವಿಷ್ಣು ದಶಾವತಾರವನ್ನು ಅಪ್ಪಟ ಪ್ರೇಮಕಾವ್ಯದಂತೆ ಕಟ್ಟಿ ಕೊಡಲಾಗಿದೆ. ಹಾಗಂತ ಪ್ರೇಮಕಾವ್ಯ ಸೃಷ್ಟಿಸಲೋಸ್ಕರ ವಿಷ್ಣುವಿನ ಕಥೆಗೆ ಮಸಾಲೆ ಬೆರೆಸಿದ್ದಾರೆಂದು ತಪ್ಪು ತಿಳಿಯುವ ಅಗತ್ಯವಿಲ್ಲ. ವಿಷ್ಣುವಿನ ಪೌರಾಣಿಕ ಕಥನಗಳನ್ನು ಒಂದು ಸುಸಜ್ಜಿತವಾದ ತಂಡ ವರ್ಷಾಂತರಗಳ ಕಾಲ ರಿಸರ್ಚ್ ನಡೆಸಿದೆ. ಅದರ ಫಲವಾಗಿಯೇ ಬರೀ ದೇವರಾಗಿಯೇ ಬಿಂಬಿತನಾಗಿರೋ ವಿಷ್ಣುವಿನ ಗಾಢ ಪ್ರೇಮದ ಕಥನವೊಂದನ್ನು ಹೆಕ್ಕಿ ತೆಗೆಯಲಾಗಿದೆ!
ಸಾಮಾನ್ಯವಾಗಿ ಭಕ್ತಿ ಭಾವ ಹೊಂದಿರುವವರಿಗೂ ಕೂಡಾ ವಿಷ್ಣುವಿನ ಬಿಡಿ ಬಿಡಿ ಕಥೆಗಳು ಗೊತ್ತಿರುತ್ತವೆ. ಅಣ್ಣಾವ್ರ ಭಕ್ತ ಪ್ರಹ್ಲಾದ ನೋಡಿ, ವಿದ್ವಾಂಸರ ಪ್ರವಚನಗಳನ್ನು ಕೇಳಿ ಒಂದಷ್ಟು ಕಥನಗಳು ಪರಿಚಯವಾಗಿರುತ್ತವೆ. ಆದರೆ ದಶಾವತಾರ ಧಾರವಾಹಿಗಾಗಿ ಕೆಲಸ ನಿರ್ವಹಿಸುತ್ತಿರುವ ತಂಡ ಯಾರಿಗೂ ಹೆಚ್ಚಾಗಿ ಗೊತ್ತಿರದ ವಿಷ್ಣುವಿನ ಕಥನಗಳನ್ನು ಹೆಕ್ಕಿ ತೆಗೆದಿದ್ದಾರೆ. ಆಗ ರಾಘವೇಂದ್ರ ಹುಣಸೂರರ ಇಂಗಿತಕ್ಕೆ ಪೂರಕವಾದಂಥಾ ವಿಷ್ಣು ಪರಮಾತ್ಮನ ಪ್ರೇಮದ ಮುಖ ತೆರೆದುಕೊಂಡಿದೆ. ಇಲ್ಲಿ ನಾರಾಯಣ ಮತ್ತು ಶ್ರೀ ಲಕ್ಷ್ಮಿಯ ಪ್ರೇಮವೇ ಪ್ರಧಾನ. ಇದರಲ್ಲಿ ರಾಮಾಯಣ ಮಹಾಭಾರತಗಳ ಸಮಾಗಮವೂ ನಡೆಯುತ್ತದೆ. ಆರಂಭದಲ್ಲಿ ಮೊದಲ ನೋಟದಲ್ಲಿಯೇ ವಿಷ್ಣುವಿಗೆ ಲಕ್ಷ್ಮಿ ದೇವಿಯ ಮೇಲೆ ಹುಟ್ಟಿಕೊಳ್ಳುತ್ತೆ. ಆದರೆ ಲಕ್ಷ್ಮೀ ದೇವಿ ಅದನ್ನು ನಿರಾಕರಿಸುತ್ತಾಳೆ. ಆ ಕ್ಷಣದಲ್ಲಿ ಮಹಾ ವಿಷ್ಣು ಕೂಡಾ ನರಮನುಷ್ಯನಂತೆಯೇ ಒದ್ದಾಡುತ್ತಾನೆ. ವಿರಹಿಯಾಗುತ್ತಾನೆ. ಅಸೂಯೆಯಿಂದ ತಲ್ಲಣಿಸುತ್ತಾನೆ. ದೇವರಲ್ಲಿಯೂ ಮನುಷ್ಯಸಹಜ ಭಾವನೆಗಳಿರೋದಕ್ಕೆ ಪ್ರತೀಕವಾಗಿ ಕಂಪಿಸುತ್ತಾನೆ. ಇದರಿಂದಾಗಿಯೇ ವಿಷ್ಣುವಿನದ್ದು ಅಸಲೀ ಪ್ರೇಮ ಕಾವ್ಯ.
ಇದೇ ವಿಷ್ಣು ಮತ್ತು ಲಕ್ಷ್ಮೀ ದೇವಿ ರಾಮ ಸೀತೆಯರಾಗಿ ಅವತರಿಸುತ್ತಾರೆ. ಕೃಷ್ಣ ರುಕ್ಮಿಣಿಯರಾಗಿ ಕಂಗೊಳಿಸುತ್ತಾರೆ. ಯುಗಗಳಾಚೆಗೂ ಪ್ರೇಮಿಗಳಾಗಿಯೇ ಉಳಿದ ವಿಷ್ಣು ಮತ್ತು ಲಕ್ಷ್ಮೀ ದೇವಿಯ ಪ್ರೀತಿಗೇ ಭೂ ಮಂಡಲದ ಉಗಮಕ್ಕೂ ನಾಂದಿ ಹಾಡುತ್ತದೆ. ಹಲವಾರು ಪಲ್ಲಟಗಳಿಗೆ ಮೂಲವಾಗುತ್ತದೆ. ಅಂಥಾ ಅಚ್ಚರಿಗಳು ಪ್ರತೀ ಎಪಿಸೋಡುಗಳಲ್ಲಿಯೂ ಪ್ರೇಕ್ಷಕರನ್ನು ಚಕಿತಗೊಳಿಸಲಿವೆ.
ರಾಘವೇಂದ್ರ ಹುಣಸೂರರ ವಿಷ್ಣು ದಶಾವತಾರ ಧಾರಾವಾಹಿಗೆ ಸಾಥ್ ನೀಡಿರುವವರು ಧೀರಜ್ ಜೀ. ಹಿಂದಿ ಧಾರಾವಾಹಿಗಳ ಜನಪ್ರಿಯ ನಟರೂ ಆಗಿರುವ ಧೀರಜ್, ಕ್ರಿಯೇಟಿವ್ ಐ ಸಂಸ್ಥೆಯ ಸಂಸ್ಥಾಪಕರೂ ಹೌದು. ಆ ಸಂಸ್ಥೆಯ ಮೂಲಕವೇ ವಿಷ್ಣು ದಶಾವತಾರ ಧಾರಾವಾಹಿಯ ಗ್ರಾಫಿಕ್ಸ್ಗಳು ರೂಪುಗೊಂಡಿವೆ. ಈ ಧಾರಾವಾಹಿ ಆರಂಭವಾದಂದಿನಿಂದ ಸಾಕಷ್ಟು ಅಡೆತಡೆಗಳು ಎದುರಾಗಿದ್ದವು. ಆದರೆ ಭಗವಂತ ತನಗೆ ಬೇಕಾದುದನ್ನು ತೆಗೆದುಕೊಂಡ. ನಾವೂ ಕೂಡಾ ಇದನ್ನೊಂದು ದೇವರ ಸೇವೆ ಎಂದೇ ಕಾರ್ಯನಿರ್ವಹಿಸಿದೆವು ಎಂಬ ಅರ್ಪಣಾ ಭಾವ ಮತ್ತು ತೃಪ್ತಿ ರಾಘವೇಂದ್ರ ಹುಣಸೂರರದ್ದು.
ಮುನ್ನೂರ ಐವತ್ತ ಕಂತುಗಳಲ್ಲಿ ವಿಷ್ಣು ದಶಾವತಾರವನ್ನು ಪ್ರೇಮಪೂರ್ಣವಾಗಿ ತೋರಿಸೋ ಉದ್ದೇಶ ಈ ಧಾರಾವಾಹಿಯದ್ದು. ಇದರ ಹಿಂದೆ ನೂರಾರು ಜನರದ್ದೊಂದು ತಂಡದ ಶ್ರಮವಿದೆ. ಅಮಿತ್ ಕಷ್ಯಪ್ ವಿಷ್ಣುವಾಗಿ ನಟಿಸಿದ್ದರೆ, ನಿಶಾ ಲಕ್ಷ್ಮಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಝೀ ಕನ್ನಡದ ಹೊಸತನಕ್ಕೆ ಮತ್ತೊಂದು ಗರಿಯಾಗಿ, ಪೌರಾಣಿಕ ಧಾರಾವಾಹಿಗಳಲ್ಲಿಯೇ ಅತ್ಯಂತ ವಿಶಿಷ್ಟವಾಗಿ ಮೂಡಿ ಬರಲಿರೋ ಸೂಚನೆ ಮೊದಲ ಕಂತಿನಲ್ಲಿಯೇ ಸಿಕ್ಕಿದೆ.
#
No Comment! Be the first one.