ಕೆಲವು ನಿರ್ದೇಶಕರು ಹಿರಿಯರನ್ನು ದುಡಿಸಿಕೊಳ್ಳುತ್ತಿರುವ ಬಗ್ಗೆ ನಟ ದತ್ತಣ್ಣರಿಗೆ ಅಸಮಾಧಾನವಿದೆಯಾ?
ನಗುತ್ತಲೇ ತಮ್ಮ ಸಂಕಟವನ್ನು ತೋಡಿಕೊಳ್ಳುತ್ತಾರೆ ದತ್ತಣ್ಣ. ಅವರ ಸಮಸ್ಯೆ ಇರುವುದು ಕೆಲವೊಬ್ಬರ ಶೂಟಿಂಗ್ ಸ್ಕೆಡ್ಯೂಲ್ ಬಗ್ಗೆ. ‘ಅದೇನೋ ಗೊತ್ತಿಲ್ಲ, ನಾನುಕೆಲಸ ಮಾಡುವ ಬಹುತೇಕ ಸಿನಿಮಾಗಳಲ್ಲಿ ನನಗೆ ದಿನಪೂರ್ತಿ ಹೈರಾಣಾಗುವಷ್ಟು ಕೆಲಸ ಕೊಡುತ್ತಾರೆ. ದಿನವೊಂದಕ್ಕೆ ಸ್ಟಾರ್ ನಟರದ್ದು ಒಂದು ದೃಶ್ಯ ಮಾತ್ರ ಚಿತ್ರೀಕರಿಸುವ ನಿರ್ದೇಶಕರು, ನಮ್ಮಂಥ ಕಲಾವಿದರಿದ್ದಾಗ ಎಂಟು ಹತ್ತು ದೃಶ್ಯಗಳ ಕೆಲಸವನ್ನ ಒಂದೇ ದಿನದೊಳಗೆ ಪೂರೈಸಿಕೊಳ್ಳುವ ಆತುರಕ್ಕೆ ಬೀಳುತ್ತಾರೆ. ಪ್ರತಿ ಸನ್ನಿವೇಶಕ್ಕೂ ಕಾಸ್ಟ್ಯೂಮ್ ಬದಲಾಗಬೇಕು, ಭಾವ ಬದಲಾಗಬೇಕು, ಸಂಭಾಷಣೆ ನೆನಪಿಟ್ಟುಕೊಳ್ಳಬೇಕು.. ಅದೆಲ್ಲದರ ಬಗ್ಗೆ ಗಮನವೇ ಕೊಡದೆ ಒಂದು ದಿನದ ಪೇಮೆಂಟಿನಲ್ಲೇ ಇಡೀ ಸಿನಿಮಾದ ಚಾಕರಿ ಮುಗಿಸಿಕೊಂಡು ಬಿಡುವ ಪ್ರಯತ್ನ ಮಾಡುತ್ತಾರೆ. ಶೂಟ್ ಮುಗಿಯುವಷ್ಟರಲ್ಲಿ ಸುಸ್ತೆದ್ದು ಹೋಗಿರುತ್ತದೆ’ ಎನ್ನುತ್ತಾರೆ ದತ್ತಣ್ಣ.
ಪೋಷಕ ಕಲಾವಿದರಿಗೆ ದಿನಕ್ಕಿಷ್ಟು ಎಂಬಂತೆ ಸಂಭಾವನೆ ನಿಗದಿಯಾಗಿರುತ್ತದೆ. ಹೀಗಾಗಿ ಕಡಿಮೆ ದಿನದಲ್ಲೇ ಎಲ್ಲಾ ದೃಶ್ಯಗಳನ್ನೂ ಶೂಟ್ ಮಾಡಿಕೊಂಡು ಬಿಟ್ಟರೆ ಅವರ ಪೇಮೆಂಟ್ ಉಳಿಸಬಹುದಲ್ಲ ಎಂಬುದು ನಿರ್ಮಾಪಕರ ಲೆಕ್ಕಾಚಾರ. ತಮಾಷೆ ಎಂದರೆ ಶೂಟಿಂಗ್ ಸಮಯದಲ್ಲಿ ಕೆಲಸಕ್ಕೇ ಬಾರದ ವಿಷಯದಲ್ಲೆಲ್ಲಾ ಹಣ ಪೋಲಾಗುತ್ತಿರುತ್ತದೆ. ಅದಕ್ಕೆ ಕಡಿವಾಣ ಹಾಕಿಕೊಳ್ಳದವರು ಪೋಷಕ ಪಾತ್ರಧಾರಿಗಳನ್ನ ಮಾತ್ರ ಯಂತ್ರಗಳಂತೆ ದುಡಿಸಿಕೊಂಡು ಹಣ ಉಳಿಸುವ ಕಂಜೂಸಿತನ ತೋರುತ್ತಿರುತ್ತಾರೆ.
ಕ್ವಾಲಿಟಿ ಬರುತ್ತದೆಯೋ ಇಲ್ಲವೋ, ಒಟ್ಟಿನಲ್ಲಿ ಪೋಷಕ ಪಾತ್ರಧಾರಿಗಳ ಕೆಲಸ ಇವತ್ತೇ ಮುಗಿದು ಹೋಗಿಬಿಡಲಿ ಎಂಬ ಆತುರ. ಇದನ್ನ ಗಮನಿಸಿರುವ ದತ್ತಣ್ಣ ವಿಷಾದಿಸುತ್ತಾರೆ. ‘ಒಂದೇ ದಿನಕ್ಕೆ ಎಂಟು ಹತ್ತು ಸೀನ್ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಬೇರೆ ದಾರಿ ಇಲ್ಲದಂಥ ವಾತಾವರಣವನ್ನ ಕೆಲವರು ಮಾಡುತ್ತಾರೆ. ಅದಕ್ಕೇ ನಾನೊಂದು ಐಡ್ಯಾ ಆಲೋಚಿಸುತ್ತಿದ್ದೇನೆ. ದಿನಕ್ಕಿಷ್ಟು ಅಂತ ಸಂಭಾವನೆ ಪಡೆಯುವ ಬದಲು ದೃಶ್ಯಕ್ಕಿಷ್ಟು ಅಂತ ಸಂಭಾವನೆ ಕೇಳಿದರೆ ಹೇಗೆ? ಇದರಿಂದ ಒಂದೋ ನಮ್ಮ ಒತ್ತಡ ಕಡಿಮೆಯಾಗುತ್ತದೆ ಇಲ್ಲವೇ ಬ್ಯಾಂಕಿನಲ್ಲಿ ಅಮೌಂಟ್ ಜಾಸ್ತಿ ಆಗುತ್ತದೆ.. ಅನುಕೂಲವಲ್ಲವೇ..?’
ನಗುತ್ತಾರೆ ದತ್ತಣ್ಣ. ಅವರಿದನ್ನ ವಿನೋದದ ದಾಟಿಯಲ್ಲೇ ಹೇಳಿದರೂ ಕೆಲವರು ಸಿನಿಮಾಗಳನ್ನ ಹೇಗೆ ಸುತ್ತಲು ಮುಂದಾಗುತ್ತಾರೆ ಎಂಬುದಕ್ಕೆ ಕನ್ನಡಿ ಹಿಡಿದಂತಿದೆ. ಗುಣಮಟ್ಟ ಎಲ್ಲಿ ಕೆಡುತ್ತದೆ ಎಂಬುದಕ್ಕೆ ಇದೂ ಒಂದು ಉದಾಹರಣೆ.
No Comment! Be the first one.